ತಾಂತ್ರಿಕ ದೋಷದಿಂದಾಗಿ ಭಾನುವಾರ ರಾಜ್ಯಾದ್ಯಂತ ಗೃಹಲಕ್ಷ್ಮಿ ನೋಂದಣಿಗಾಗಿ ಸರ್ವರ್ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ನೋಂದಣಿ ಕೇಂದ್ರದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ವೀರಾಪುರ ಓಣಿಯಲ್ಲಿನ ‘ಕರ್ನಾಟಕ ಒನ್’ ಕೇಂದ್ರದಲ್ಲಿ ನಡೆದಿದೆ.
ಹುಬ್ಬಳ್ಳಿ (ಜು.24) : ತಾಂತ್ರಿಕ ದೋಷದಿಂದಾಗಿ ಭಾನುವಾರ ರಾಜ್ಯಾದ್ಯಂತ ಗೃಹಲಕ್ಷ್ಮಿ ನೋಂದಣಿಗಾಗಿ ಸರ್ವರ್ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ನೋಂದಣಿ ಕೇಂದ್ರದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ವೀರಾಪುರ ಓಣಿಯಲ್ಲಿನ ‘ಕರ್ನಾಟಕ ಒನ್’ ಕೇಂದ್ರದಲ್ಲಿ ನಡೆದಿದೆ.
ಭಾನುವಾರ ಗೃಹಲಕ್ಷ್ಮಿ ಸರ್ವರ ಬಂದ್ ಇರುವುದಾಗಿ ಸರ್ಕಾರ ಶನಿವಾರ ರಾತ್ರಿಯೇ ಆದೇಶ ಹೊರಡಿಸಿದೆ. ಆದರೆ, ಭಾನುವಾರ ಬೆಳಗಿನ ಜಾವ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರು ಕೇಂದ್ರದ ಹೊರಗೆ ನೋಟಿಸ್ ಹಚ್ಚಿದರೂ ಗಮನಿಸಿರಲಿಲ್ಲ. ಬೇಕಂತಲ್ಲೇ ನೀವು ಕೇಂದ್ರವನ್ನು ಬಂದ್ ಮಾಡಿದ್ದೀರಿ ಎಂದು ಆರೋಪಿಸಿ ವಾಗ್ವಾದ ನಡೆಸಿ ಕರ್ನಾಟಕ ಒನ್ ಮಹಿಳಾ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ್ದಾರೆ.
2ನೇ ದಿನ ಗೃಹಲಕ್ಷ್ಮಿಗೆ 7.7 ಲಕ್ಷ ನೋಂದಣಿ; ಸರ್ವರ್ ಸಮಸ್ಯೆಗೆ ಹೈರಾಣು
ಹಲ್ಲೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಂಡಿಗೇರಿ ಠಾಣೆಯ ಪೊಲೀಸರು ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಬೀಗ ಜಡಿದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸ್ಥಳಕ್ಕೆ ಬೆಂಡಿಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಶರಣು ದೇಸಾಯಿ ಭೇಟಿ ನೀಡಿದರು. ಕರ್ನಾಟಕ ಒನ್ ಕೇಂದ್ರದ ಎದುರು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಬೆಂಡಿಗೇರಿ ಠಾಣೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.