
ಬೆಂಗಳೂರು (ಜು.24) : ಕೇವಲ .15 ಸಾವಿರ ಸಾಲದ ವಿಚಾರಕ್ಕೆ ನಡೆದ ಜಗಳದ ವೇಳೆ ಕೋಪಗೊಂಡ ಪ್ರಿಯತಮೆ ತನ್ನ ಪ್ರಿಯಕರನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚಾಕು ಇರಿತಕ್ಕೆ ಒಳಗಾಗಿರುವ ಈಜೀಪುರದ ಜೋಗೀಶ್(37) ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಆರೋಪಿ ಜುಂಟಿದಾಸ್(37) ಎಂಬಾಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆಗೊಳಗಾಗಿರುವ ಜೋಗೀಶ್ ನಗರದಲ್ಲಿ ಸೆಕ್ಯೂರಿಟಿಗಾರ್ಡ್ ಆಗಿದ್ದು, ಈಜಿಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾನೆ. ಜಿಗಣಿಯ ಡೇ ಕೇರ್ ಸೆಂಟರ್‌ನಲ್ಲಿ ಆಯಾ ಕೆಲಸ ಮಾಡುತ್ತಿರುವ ಆರೋಪಿ ಜುಂಟಿದಾಸ್ ಪತಿಯಿಂದ ವಿಚ್ಛೇದನ ಪಡೆದು 16 ವರ್ಷದ ಪುತ್ರಿ ಜತೆಗೆ ಜಿಗಣಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾಳೆ. ಎರಡು ವರ್ಷದ ಹಿಂದೆ ಜೋಗೀಶ್ ಮತ್ತು ಜುಂಟಿದಾಸ್ ಪರಿಚಿತರಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಜೋಗೀಶ್, ಜುಂಟಿದಾಸ್‌ಳಿಂದ ಅಂತರ ಕಾಯ್ದುಕೊಂಡಿದ್ದ. ಇದರಿಂದ ಜುಂಟಿದಾಸ್ ಕೋಪಗೊಂಡಿದ್ದಳು ಎನ್ನಲಾಗಿದೆ.
ಚಾಕುವಿನಿಂದ ಇರಿದು ಪರಾರಿ:
ಶುಕ್ರವಾರ ಬೆಳಗ್ಗೆ ಜೋಗೀಶ್ ಮನೆಗೆ ಬಂದಿದ್ದ ಜುಂಟಿದಾಸ್, ಈ ಹಿಂದೆ ತಾನು ಸಾಲವಾಗಿ ನೀಡಿದ್ದ .15 ಸಾವಿರ ವಾಪಾಸ್ ನೀಡುವಂತೆ ಜೋಗೀಶ್‌ನನ್ನು ಕೇಳಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿ ತಾರಕಕ್ಕೇರಿದೆ. ಈ ವೇಳೆ ಕೋಪೋದ್ರಿಕ್ತಳಾದ ಜುಂಟಿದಾಸ್ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದು ಜೋಗೀಶ್ ಹೊಟ್ಟೆಭಾಗಕ್ಕೆ ಹಲವು ಬಾರಿ ಇರಿದು ಪರಾರಿಯಾಗಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದು ಚೀರಾಡುತ್ತಿದ್ದ ಜೋಗೀಶ್‌ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರೇಯಸಿ ಕರೆದಳು ಅಂತ ಹೋದವನಿಗೆ ಮಚ್ಚಿನೇಟು..! ಪರಸ್ತ್ರೀ ಮೇಲೆ ಕಣ್ಣು ಹಾಕಿದಕ್ಕೆ ಹೆಣವಾಗಿ ಹೋದ.!
ಅಸ್ಸಾಂಗೆ ಎಸ್ಕೇಪ್ ಆಗಲು ಸಿದ್ಧತೆ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆಗೆ ಇಳಿದ ವಿವೇಕನಗರ ಠಾಣೆ ಪೊಲೀಸರು, ಘಟನೆ ನಡೆದ ಒಂದು ತಾಸಿನೊಳಗೆ ವಿಲ್ಸನ್ ಗಾರ್ಡನ್‌ನಲ್ಲಿ ಆರೋಪಿ ಜುಂಟಿದಾಸ್‌ಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪ್ರಿಯಕರನಿಗೆ ಚಾಕು ಇರಿದು ಬಳಿಕ ಜುಂಟಿದಾಸ್ ವಿಲ್ಸನ್‌ಗಾರ್ಡನ್‌ನ ಸಂಬಂಧಿಕರ ಮನೆಗೆ ತೆರಳಿ ರೈಲಿನಲ್ಲಿ ಅಸ್ಸಾಂ ಪರಾರಿಯಾಗಲು ಸಿದ್ಧತೆ ನಡೆಸಿದ್ದಳು. ಅಷ್ಟರಲ್ಲಿ ಪೊಲೀಸರು ಆಕೆಯ ಜಾಡು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ