ಶಾಲಾ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ಮತ್ತೆ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಬುಧವಾರ 28 ಕೋಟಿ ರೂ. ನಗದು ಹಾಗೂ ಕೆಜಿಗಟ್ಟಲೆ ಚಿನ್ನ ಪತ್ತೆಯಾಗಿದೆ. ಈವರೆಗೆ ಸುಮಾರು 50 ಕೋಟಿ ರೂ. ನಗದು ಪತ್ತೆಯಾಗಿದೆ.
ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧನವಾಗಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಹಾಗೂ ಆಪ್ತೆ ಅರ್ಪಿತಾ ಮುಖರ್ಜಿ ಅವರ ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಇಡಿ ತನಿಖೆ ಮುಂದುವರಿಸಿದ್ದು, ಹಗರಣದ ಕುರಿತು ಬಗೆದಷ್ಟೂ ಮತ್ತಷ್ಟು ಮಾಹಿತಿಗಳು ಹೊರಬರುತ್ತಿವೆ.
ಹೌದು,ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿಯ ಮತ್ತಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ಬುಧವಾರ ಬೆಳಕಿಗೆ ಬಂದಿದೆ. ಸಚಿವ ಪಾರ್ಥ ಅವರ ಆಪ್ತೆ ಅರ್ಪಿತಾಗೆ ಸೇರಿದ ಮನೆ ಮೇಲೆ ಇ.ಡಿ. ಅಧಿಕಾರಿಗಳು ಬುಧವಾರ ಮತ್ತೆ ದಾಳಿ ನಡೆಸಿದ್ದು ಈ ವೇಳೆ 27.9 ಕೋಟಿ ರೂ. ನಗದು ಮತ್ತು ಕೆಜಿಗಟ್ಟಲೆ ಚಿನ್ನ ಹಾಗೂ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಬಂಗಾರದ ಆಭರಣಗಳ ಸರಿಯಾದ ಮೌಲ್ಯವನ್ನು ಇಡಿ ಅಧಿಕಾರಿಗಳು ಇನ್ನೂ ಲೆಕ್ಕ ಹಾಕಬೇಕಿದೆ ಎಂದೂ ತಿಳಿದುಬಂದಿದೆ.
ಇಡಿ ಕಸ್ಟಡಿ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ
ಕೋಲ್ಕತ್ತದ ಬೆಲ್ಗಾರಿಯಾದ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಈ ಕೋಟಿ ಕೋಟಿ ಹಣ ಸಿಕ್ಕಿತ್ತು. ತಡ ರಾತ್ರಿಯಾದರೂ ಈ ಹಣವನ್ನು ಇಡಿ ಪೊಲೀಸರು ಲೆಕ್ಕ ಹಾಕುತ್ತಿದ್ದರು ಎಂದು ತಿಳಿದುಬಂದಿದ್ದು, ಒಟ್ಟಾರೆ 27 ಕೋಟಿ 90 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮೊನ್ನೆಯಷ್ಟೇ ಸಿಕ್ಕಿತ್ತು 21 ಕೋಟಿ ರೂ.
ಮೂರು ದಿನಗಳ ಹಿಂದೆ ಕೂಡಾ ಅರ್ಪಿತಾಗೆ ಸೇರಿದ ಇನ್ನೊಂದು ಮನೆ ಮೇಲೆ ದಾಳಿ ನಡೆಸಿದಾಗ 21 ಕೋಟಿ ರು. ನಗದು ಸಿಕ್ಕಿತ್ತು. ಇನ್ನು, ವಿಚಾರಣೆ ವೇಳೆ ಈ ಬಗ್ಗೆ ಬಾಯ್ಬಿಟ್ಟದ್ದ ಅರ್ಪಿತಾ, ಈ ಹಣ ಪಾರ್ಥ ಅವರಿಗೆ ಸೇರಿದ್ದು. ಇದೆಲ್ಲಾ ಶಿಕ್ಷಕರ ನೇಮಕ ಹಗರಣದಲ್ಲಿ ಪಡೆದ ಲಂಚದ ಹಣ ಎಂದು ಹೇಳಿದ್ದರು.
ಅಲ್ಲದೆ 2016ರಲ್ಲಿ ನಟರೊಬ್ಬರ ಮೂಲಕ ನನ್ನ-ಪಾರ್ಥ ಪರಿಚಯ ಆಯಿತು. ಬಳಿಕ ಸಚಿವರು ನನ್ನ ಮನೆಯನ್ನು ಮಿನಿ ಬ್ಯಾಂಕ್ ಮಾಡಿಕೊಂಡಿದ್ದರು. ಒಂದು ಕೋಣೆಯಲ್ಲಿ ಹಣ ಇರಿಸುತ್ತಿದ್ದರು. 10 ದಿನಕ್ಕೊಮ್ಮೆ ಸಚಿವರು ಮನೆಗೆ ಬರುತ್ತಿದ್ದರು. ಆ ಕೋಣೆಗೆ ಪಾರ್ಥ ಮತ್ತು ಅವರ ಆಪ್ತರಿಗೆ ಮಾತ್ರ ಪ್ರವೇಶವಿತ್ತು ಎಂದೂ ಪಶ್ಚಿಮ ಬಂಗಾಳ ಸಚಿವರ ಆಪ್ತೆ ಅರ್ಪಿತಾ ಮುಖರ್ಜಿ ತಿಳಿಸಿದ್ದರು.
'ಹೇಳು ಪಾರ್ಥ..' ಎಂದು ಚಟರ್ಜಿಗೆ ಗಂಟುಬಿದ್ದಿದ್ಯಾಕೆ ED, ಅಷ್ಟಕ್ಕೂ ಯಾರೀಕೆ ಅರ್ಪಿತಾ?
ಅದರ ಬೆನ್ನಲ್ಲೇ ಇದೀಗ ಮತ್ತಷ್ಟು ಭಾರಿ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆಯಾಗಿದೆ. ಒಟ್ಟಾರೆ, ಈವರೆಗೆ ಸುಮಾರು 50 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅಧಕಾರಿಗಳು ತಿಳಿಸಿದ್ದಾರೆ.