ಗಾಂಜಾ ಕೇಸ್ : ಮತ್ತೆ 63 ಮಂದಿ ಅರೆಸ್ಟ್

By Kannadaprabha NewsFirst Published Sep 8, 2020, 6:58 AM IST
Highlights

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಸದ್ದು ಮಾಡುತ್ತಿರುವಾಗಲೇ  ಮತ್ತೆ 63 ಜನರನ್ನು ಬಂಧಿಸಲಾಗಿದೆ.

 ಬೆಂಗಳೂರು (ಸೆ.08):  ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ಸದ್ದು ಮಾಡುತ್ತಿರುವ ಸಮಯದಲ್ಲೆ ಗಾಂಜಾ ಮಾರಾಟ ಮಾಡುತ್ತಿರುವವರ ವಿರುದ್ಧ ಸಮರ ಸಾರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಾರ‍್ಯಚಾರಣೆ ಮುಂದುವರಿಸಿರುವ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ 63 ಮಂದಿ ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ಮೌಲ್ಯದ ಬರೋಬ್ಬರಿ 210 ಕೆ.ಜಿ. ಗಾಂಜಾ ಸೇರಿ ಹಲವು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು .2.18 ಕೋಟಿ ಮೌಲ್ಯದ ಹಶೀಶ್‌ ಆಯಿಲ್‌, ಬ್ರೌನ್‌ ಶುಗರ್‌ ಸೇರಿದಂತೆ ಮಾದಕ ವಸ್ತುಗಳನ್ನು ಜಪ್ತಿ ಮಾಡಿರುವ ಪೊಲೀಸರು 11 ಮಂದಿ ಅಂತಾರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ಸೇರಿದಂತೆ 41 ಮಂದಿಯನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ 10 ಮಂದಿ ಬಂಧನ, 37.630 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಕಲಬುರಗಿಯ ಚಿಂಚೋಳಿ ತಾಲೂಕಿನಲ್ಲಿ ಬೆಳೆದಿದ್ದ .3.50 ಲಕ್ಷ ಮೌಲ್ಯದ ಬರೋಬ್ಬರಿ 88 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ. ಶಿವಮೊಗ್ಗದ ಭದ್ರಾವತಿಯಲ್ಲಿ 8 ಮಂದಿ ಬಂಧಿಸಿ, .2 ಲಕ್ಷ ಮೌಲ್ಯದ 6.4 ಕೆಜಿ ಜಪ್ತಿ ಮಾಡಲಾಗಿದೆ. ಧಾರವಾಡದ ಪ್ರತ್ಯೇಕ ಘಟನೆಗಳಲ್ಲಿ 7 ಜನರನ್ನು ಬಂಧಿಸಿ, .70 ಬೆಲೆಯ 3.500 ಕೆ.ಜಿ. ಗಾಂಜಾ, .8.75 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ 32 ಕೆ.ಜಿ ಗಾಂಜಾ ಜಪ್ತಿ ಮಾಡಿರುವ ಮೂವರನ್ನು ಬಂಧಿಸಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಆರೋಪಿ ಬಂಧಿಸಿ, 15 ಕೆ.ಜಿ. ಗಾಂಜಾ ಗಿಡ ಜಪ್ತಿ ಮಾಡಿದ್ದು, ರಾಮನಗರ ಜಿಲ್ಲೆಯಲ್ಲಿ ವ್ಯಕ್ತಿ ಬಂಧಿಸಿ 3.230 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಂಡ್ಯದಲ್ಲಿ ರೈತ​ನನ್ನು ಬಂಧಿಸಿ, 25 ಕೆ.ಜಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ.

ಈವರೆಗೆ 166 ಮಂದಿ ಸೆರೆ, 1000 ಕೆ.ಜಿ ಗಾಂಜಾ ವಶ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಂದು ವಾರದಿಂದಿಚೆಗೆ ಡ್ರಗ್ಸ್‌, ಗಾಂಜಾ ದಂಧೆಕೋರರ ವಿರುದ್ಧ ಭರ್ಜರಿ ಬೇಟೆಯಾಡುತ್ತಿರುವ ಪೊಲೀಸರು ಈವರೆಗೆ 923 ಕೆ.ಜಿ ಗಾಂಜಾ ವಶ, 166 ಮಂದಿಯನ್ನು ಬಂಧಿಸಿರುವ ಪೊಲೀಸರು 62 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

click me!