
ಬೆಂಗಳೂರು (ಫೆ.27): ಅದೊಂದು ಖತರ್ನಾಕ್ ಅಂತರಾಜ್ಯ ಗ್ಯಾಂಗ್, ಕೇವಲ ಶಾಲಾ ಕಾಲೇಜುಗಳನ್ನೇ ಟಾರ್ಗೆಟ್ ಮಾಡಿಕೊಂಡು ರಾತ್ರೋ ರಾತ್ರಿ ಬಂದು ಎಲೆಕ್ಟ್ರಾನಿಕ್ ವಸ್ತುಗಳನ್ನಷ್ಟೇ ದೋಚಿಕೊಂಡು ಹೋಗುತ್ತಿದ್ದರು. ಹೀಗೆಯೇ ಕಳೆದ 22 ವರ್ಷಗಳಿಂದ ಶಾಲಾ- ಕಾಲೇಜುಗಳಲ್ಲಿ ಆಗಿಂದಾಗ್ಗೆ ಕಳ್ಳತನ ಮಾಡಿಕೊಂಡು ಹೋಗುವ ಮೂಲಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಆದರೆ, ಈ ಬಾರಿ ಕಳ್ಳರ ಗ್ರಹಚಾರ ಕೆಟ್ಟಿದ್ದು, ಪೊಲೀಸರ ನಸೀಬು ಚೆನ್ನಾಗಿದ್ದರಿಂದ ಅಂತರರಾಜ್ಯ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಈ ಖತರ್ನಾಕ್ ಕಳ್ಳರ ಗ್ಯಾಂಗ್ ಬೆಂಗಳೂರಿನಲ್ಲಿರುವ ಶಾಲೆ, ಕಾಲೇಜುಗಳನ್ನು ಟಾರ್ಗೆಟ್ ಮಾಡಿ ಕದಿಯುತ್ತಿದ್ದರು. ಇವರು ಒಂದು ಬಾರಿ ಕಳ್ಳತನ ಮಾಡಿಕೊಂಡು ಹೋದರೆ, ಮತ್ತೆ ಬಹಳ ದಿನಗಳ ಕಾಲ ಕಳ್ಳತಕ್ಕೆ ಕೈ ಹಾಕುತ್ತಿರಲಿಲ್ಲ. ಒಂದು ಬಾರಿ ಕದಿಯಲು ಯೋಜನೆ ಹಾಕಿಕೊಂಡು ಬಂದರೆ ಶಾಲೆ ಅಥವಾ ಕಾಲೇಜುಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು, ಲ್ಯಾಪ್ ಟ್ಯಾಪ್ ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಿ ಇಡುವ ನಗದು ಹಣವನ್ನೆಲ್ಲ ಗುಡಿಸಿ ಗಂಡಾಂತರ ಮಾಡಿಬಿಡುತ್ತಿದ್ದರು.
ಪ್ರತಿದಿನ 1 ಕೋಟಿ ರೂ. ಕದಿಯುವುದು ಸೈಬರ್ ಕಳ್ಳರ ಟಾರ್ಗೆಟ್: ನಿಮ್ಮ ಹಣ ಸೇಫ್ಟಿಗೆ ಇಲ್ಲಿದೆ ಮಾರ್ಗ..!
ತಮಿಳುನಾಡಿನ ಮೂಲದ ಗ್ಯಾಂಗ್: ಹೀಗೆ ಮತ್ತೊಮ್ಮೆ ಕಳ್ಳತನಕ್ಕೆ ಬಂದಿದ್ದ ಖದೀಮರ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಅಣ್ಣಾದೊರೈ, ವೀರಮಲೈ ಹಾಗೂ ಬಾಬು ಎಂಬ ಖತರ್ನಾಕ್ ಕಳ್ಳರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಇನ್ನು ಬಂಧಿತರಾದ ಮೂವರು ಆರೋಪಿಗಳು ಮೂಲತಃ ತಮಿಳುನಾಡಿನ ಸೇಲಂ ನಗರದವರಾಗಿದ್ದಾರೆ. ಇವರು ಮಾಡಿರುವ ಕೆಲಸ ಕೇಳಿದರೆ ಶಾಕ್ ಆಗುವುದಂತೂ ಗ್ಯಾರಂಟಿ. ಈ ಆಸಾಮಿಗಳು ತಮಿಳುನಾಡಿನ ಮೂಲದವರು ಆಗಿದ್ದರೂ, ಅವರು ಮಾಡೋ ಕಳ್ಳತನ ಕೃತ್ಯಕ್ಕೆ ಒಂದು ರಾಜ್ಯದ ಗಡಿ ಅನ್ನೋದೇ ಇಲ್ಲ.
12 ಕಳ್ಳತನ ಪ್ರಕರಣ ಬಾಯಿಬಿಟ್ಟ ಆರೋಪಿಗಳು: ಇನ್ನು 2001 ರಿಂದ ಶಾಲಾ ಕಾಲೇಜುಗಳನ್ನೇ ಟಾರ್ಗೆಟ್ ಮಾಡ್ತಿದ್ದ ಆರೋಪಿಗಳು ರಾತ್ರೋ ರಾತ್ರಿ ಬಂದು ಎಲೆಕ್ಟ್ರಾನಿಕ್ ವಸ್ತುಗಳು, ಲ್ಯಾಪ್ ಟಾಪ್ ಹಾಗೂ ಹಣ ಕದ್ದು ಪರಾರಿ ಆಗುತ್ತಿದ್ದರು. ಆದರೆ ಇದುವರೆಗೂ ಪೊಲೀಸರ ಕೈಗೆ ಸಿಗದೇ 22 ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಆದರೆ, ಕೊನೆಗೂ ಜ್ಙಾನಭಾರತಿ ಠಾಣೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳ ಬಂಧನದಿಂದ ಜ್ಙಾನಭಾರತಿ, ಹುಳಿಮಾವು, ಕೋಲಾರ, ದಾವಣಗೆರೆ, ಕೆ.ಆರ್ ಪುರಂ, ಆವಲಹಳ್ಳಿ ಸೇರಿದಂತೆ 12 ಪ್ರಕರಣ ಬೆಳಕಿಗೆ ಬಂದಿವೆ.
ಅಂತರ್ಜಾತಿ ವಿವಾಹ ಆಗಿದ್ದ ಯುವತಿ ನೇಣಿಗೆ ಶರಣು: ಕುಟುಂಬಸ್ಥರಿಂದ ಭಾರೀ ಕಿರುಕುಳ
ಪರೀಕ್ಷೆ, ಅಡ್ಮಿಷನ್ ಅವಧಿಯೇ ಕಳ್ಳರ ಟಾರ್ಗೆಟ್: ಖತರ್ನಾಕ್ ಆರೋಪಿಗಳು ಶಾಲೆ ಕಾಲೇಜುಗಳಲ್ಲಿ ಲೂಟಿ ಮಾಡಲು ಮಾರ್ಚ್, ಏಪ್ರಿಲ್, ಮೇ, ಜೂನ್ ತಿಂಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಇದಕ್ಕೆ ಕಾರಣ ಜೂನ್ ನಲ್ಲಿ ಶಾಲಾ ಕಾಲೇಜು ಪ್ರಾರಂಭ ಆಗೋದ್ರಿಂದ ಅಡ್ಮಿಷನ್ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆಗ ಹೆಚ್ಚಾಗಿ ದುಡ್ಡು ಕೂಡ ಸಂಗ್ರಹ ಆಗಿರುತ್ತದೆ ಅನ್ನೋ ಲೆಕ್ಕಾಚಾರದಲ್ಲಿ ಇರುತ್ತಿದ್ದರು. ಕಳ್ಳತನ ಎಸಗಿ ಖಾಸಗಿ ಬಸ್ ಹತ್ತಿ ತಮಿಳುನಾಡು ಸೇರಿಕೊಳ್ಳುತ್ತಿದ್ದರು. ಹೀಗೆ ಜ್ಙಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಚೈತನ್ಯ ಮತ್ತು ವಿಎಸ್ಎಸ್ ಶಾಲೆಯಲ್ಲಿ ಕಳ್ಳತನ ಎಸಗಿ ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿರೊ ಜ್ಙಾನಭಾರತಿ ಠಾಣೆ ಪೊಲೀಸರು ಐದು ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತು ಮತ್ತು ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿರೊ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ವಿಚಾರಣೆ ವೇಳೆ ಮತ್ತಷ್ಟು ಪ್ರಕರಣ ಬೆಳಕಿಗೆ ಬರೋ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ