ಆಸ್ತಿ ಬರೆದು ಕೊಡುವಂತೆ ಬಿಜೆಪಿ ಶಾಸಕ ಧಮ್ಕಿ: ಅಳಲು ತೋಡಿಕೊಂಡ ದಂಪತಿ

By Suvarna NewsFirst Published Jun 17, 2022, 6:01 PM IST
Highlights

* ಬಿಜೆಪಿ ಶಾಸಕನ ವಿರುದ್ಧ ದಂಪತಿ ಮೇಲೆ ಹಲ್ಲೆ  ಆರೋಪ
* ಬಾಗಲಕೋಟೆ ಶಾಸಕರೊಬ್ಬರು ದಂಪತಿ ಮೇಲೆ ಗೂಂಡಾಗಿರಿ ಮೆರೆದಿದ್ದಾರೆ ಎಂಬ ಆರೋಪ
* ಆಸ್ತಿ ಬರೆದು ಕೊಡುವಂತೆ ಧಮ್ಕಿ

ಬಾಗಲಕೋಟೆ/ಗದಗ, (ಜೂನ್.17): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇದರ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ಶಾಸಕ ವಿರುದ್ಧ ಆಸ್ತಿ ಆರೋಪ ಕೇಳಿಬಂದಿದೆ.

 ಹೌದು... ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ದಂಪತಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಆಸ್ತಿ ಬರೆದುಕೊಡುವಂತೆ ಧಮ್ಕಿ ಹಾಕಿ ದಂಪತಿಗೆ ಹಿಗ್ಗಾಮುಗ್ಗ ಥಳಿಸಿ ಜೀವ ಬೆದರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 

Latest Videos

ಗದಗ ತಾಲೂಕಿನ ಅಡವಿ ಸೋಮಾಪುರ ನಿವಾಸಿ ಮಲ್ಲಯ್ಯ ಹಿರೇಮಠ ಮತ್ತು ಲಕ್ಷ್ಮಿ ಹಿರೇಮಠ ಎಂಬುವರನ್ನು ಬಾಗಲಕೋಟೆಯಲ್ಲಿನ ತಮ್ಮ ಗೆಸ್ಟ್ ಹೌಸ್​ಗೆ ಕರೆಸಿ ಬೆಲ್ಟ್​ನಿಂದ ಮತ್ತು ಕಬ್ಬಿಣದ ಪೈಪ್​​ಗಳಿಂದ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ದಂಪತಿ ಆರೋಪ ಮಾಡಿದ್ದಾರೆ.

Chitradurga: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ FIR

ತಮ್ಮ ಬೆಂಬಲಿಗರ ಸಮ್ಮುಖದಲ್ಲೇ ಮಹಿಳೆ ಮೇಲೆ ಖುರ್ಚಿ ಎತ್ತಿ ಹಾಕಿ ಹಲ್ಲೆ‌ ಮಾಡಿದ್ದಲ್ಲದೇ ಕಿವಿ, ಕೈ, ತೊಡೆಗೆ ಬಾಸುಂಡೆ ಬರುವಂತೆ ಮನಸ್ಸೋ ಇಚ್ಛೆ ಥಳಿಸಿದ್ದಾರಂತೆ. ಮಹಿಳೆ ಅಂತಾನೂ ನೋಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಸ್ತಿ ಬರೆದು ಕೊಡದಿದ್ದರೆ ಉಳಿಸೋದಿಲ್ಲ ಎಂದು ಬೆದರಿಕೆ ಹಾಕಿದ್ದಾರಂತೆ.

ಅಂದಹಾಗೆ ಈ ದಂಪತಿಗೆ ಬಾಗಲಕೋಟೆಯ ನವನಗರದಲ್ಲಿ 20 ಗುಂಟೆ ಜಾಗ ಇದ್ದು, ಸದ್ಯ ಇದು ಮೂರು ಕೋಟಿ ರೂ.ಗೂ ಅಧಿಕ ಬೆಲೆ ಬಾಳುತ್ತೆ. ಹೀಗಾಗಿ ಕೋಟ್ಯಂತರ ರೂ. ಬೆಲೆ ಬಾಳೋ ಜಾಗದ ಮೇಲೆ ಎಂಎಲ್​ಎ ಕಣ್ಣುಬಿದ್ದಿದೆ. ಆದರೆ ಬಾಗಲಕೋಟೆಯ ಬೀಳೂರು ಗುರುಬಸವ ಪತ್ತಿನ ಸಹಕಾರಿ ಬ್ಯಾಂಕ್​ನಲ್ಲಿ ದಂಪತಿ ಸಾಲ ಮಾಡಿದ್ದರು. 60 ಲಕ್ಷ ಸಾಲ ಮಾಡಿದ್ದ ಹಿರೇಮಠ ದಂಪತಿ, ಸಾಲ ಮರುಪಾವತಿ ಮಾಡೋದು ತಡವಾಗಿತ್ತು. ಸಾಲ ಮರುಪಾವತಿ ಮಾಡಲು ಹೋಗಿದ್ದ ದಂಪತಿಯನ್ನು ಕರೆಸಿ ಹಲ್ಲೆ ಮಾಡಿದ್ದಾರಂತೆ. ಸಾಲ ತುಂಬುವುದು ಬೇಡ ನಿಮ್ಮ ಹೆಸರಲ್ಲಿರುವ ಆಸ್ತಿಯನ್ನು ಬರೆದುಕೊಡು ಇಲ್ಲದಿದ್ದರೆ ನಿಮ್ಮನ್ನು ಉಳಿಸುವುದಿಲ್ಲ ಎಂದು ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಈ ಸಂಬಂಧ ಬಾಗಲಕೋಟೆ ನವನಗರ ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ನೀವು ಆದಷ್ಟು ಬೇಗ ಊರಿಗೆ ಹೋಗಿ ದೂರುಗೀರು ಬಿಟ್ಟು ಸುಮ್ಮನೆ ಮನೆಗೆ ಹೋಗಿ, ಇಲ್ಲದಿದ್ದರೆ ಅವರು ನಿಮ್ಮನ್ನು ಉಳಿಸುವುದಿಲ್ಲ ಎಂದು ಪೊಲೀಸರು ಸಹ ನಮ್ಮನ್ನು ಹೆದರಿಸಿ ಕಳುಹಿಸಿದರು ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ದಂಪತಿ ಹೇಳಿದ್ದಾರೆ.

ಆದ್ರೆ, ಇದಕ್ಕೆ ಶಾಸಕ ವೀರಣ್ಣ ಚರಂತಿಮಠ ಅವರು ದಂಪತಿ ಮಾಡಿದ ಆರೋಪವನ್ನು ತಳ್ಳಿಹಾಕಿದ್ದು, ಆ ದಂಪತಿಯನ್ನು ನೋಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

click me!