ಖದೀಮರು ಹೇಗೆಲ್ಲ ವಂಚನೆ ಮಾಡ್ತಾರೆ ನೋಡಿ; ಸಾಲ ಕೊಡಿಸೋದಾಗಿ ನಂಬಿಸಿ ಉದ್ಯಮಿಗೆ ಬರೋಬ್ಬರಿ ₹2.40 ಕೋಟಿ ಟೋಪಿ!

By Kannadaprabha News  |  First Published Nov 27, 2023, 5:41 AM IST

ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ಹೋಟೆಲ್‌ ಉದ್ಯಮಿಯೊಬ್ಬರನ್ನು ನಂಬಿಸಿ ದಾಖಲೆಗಳನ್ನು ಪಡೆದು ಬ್ಯಾಂಕ್‌ನಲ್ಲಿ ಶ್ಯೂರಿಟಿ ಇರಿಸಿ ₹2.40 ಕೋಟಿ ಸಾಲ ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ಬೆಂಗಳೂರು (ನ.27) :  ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ಹೋಟೆಲ್‌ ಉದ್ಯಮಿಯೊಬ್ಬರನ್ನು ನಂಬಿಸಿ ದಾಖಲೆಗಳನ್ನು ಪಡೆದು ಬ್ಯಾಂಕ್‌ನಲ್ಲಿ ಶ್ಯೂರಿಟಿ ಇರಿಸಿ ₹2.40 ಕೋಟಿ ಸಾಲ ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಲ್ಲೇಶ್ವರದ ಹೋಟೆಲ್‌ ಉದ್ಯಮಿ ಶಾಜಿ ಕೃಷ್ಣನ್‌ (52) ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಯೂಸೆಫ್‌ ಸುಬ್ಬಯ್ಯ ಕಟ್ಟೆ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

Latest Videos

undefined

ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ಖತರ್ನಾಕ್‌ ಖದೀಮರ ಬಂಧನ

ಏನಿದು ಪ್ರಕರಣ

ದೂರುದಾರ ಶಾಜಿ ಕೃಷ್ಣನ್‌ ಅವರಿಗೆ ಆರೋಪಿ ಯೂಸೆಫ್‌ ಹಲವು ವರ್ಷಗಳಿಂದ ಪರಿಚಿತನಾಗಿದ್ದ. ಈ ನಡುವೆ ಶಾಜಿ ಕೃಷ್ಣನ್‌ ಉದ್ಯಮಕ್ಕಾಗಿ 2019ನೇ ಸಾಲಿನಲ್ಲಿ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ವಿಚಾರ ತಿಳಿದುಕೊಂಡ ಯೂಸೆಫ್‌, ಹಲಸೂರಿನ ಕೆನರಾ ಬ್ಯಾಂಕ್‌ನ ಮ್ಯಾನೇಜರ್‌ ತನಗೆ ಪರಿಚಯವಿದ್ದು, ಸಾಲ ಕೊಡಿಸುವುದಾಗಿ ನಂಬಿಸಿದ್ದಾನೆ. ಬಳಿಕ ಶಾಜಿ ಕೃಷ್ಣನ್‌ ಅವರನ್ನು ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಬಳಿ ಕರೆದುಕೊಂಡು ಹೋಗಿ ಪರಿಚಯಿಸಿದ್ದಾನೆ. ಬಳಿಕ ಶಾಜಿ ಕೃಷ್ಣನ್‌ ಅವರಿಂದ ಕೆಲವು ದಾಖಲೆ ಪಡೆಯುವ ಜತೆಗೆ ಕೆಲವು ದಾಖಲೆಗಳಿಗೆ ಸಹಿ ಪಡೆದು ಸಾಲ ಸಿಗಲಿದೆ ಎಂದು ಎಂದು ಹೇಳಿದ್ದಾನೆ.

ದಾಖಲೆ ಆಧರಿಸಿ ಸಾಲ ಪಡೆದ ಆರೋಪಿ:

ಕೆಲ ದಿನಗಳ ಬಳಿಕ ಶಾಜಿ ಕೃಷ್ಣನ್‌ ಅವರು ವೈಯಕ್ತಿಕ ಕೆಲಸಕ್ಕಾಗಿ ಕೆನರಾ ಬ್ಯಾಂಕ್‌ಗೆ ತೆರಳಿದ್ದಾಗ ಆರೋಪಿ ಯೂಸೆಫ್‌, ಮಲ್ಲೇಶ್ವರದ ಡಿ.ಎಸ್‌.ಮ್ಯಾಕ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಸಲು ತಾವು ನೀಡಿದ್ದ ದಾಖಲೆಗಳನ್ನು ಬ್ಯಾಂಕ್‌ಗೆ ಶ್ಯೂರಿಟಿಯಾಗಿ ಇರಿಸಿ ₹2.40 ಕೋಟಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಅಂತೆಯೇ ಕೆಲವು ತಿಂಗಳು ಲೋನ್‌ ಕಂತುಗಳನ್ನು ಪಾವತಿಸಿ ಬಳಿಕ ಯಾವುದೇ ಕಂತು ಕಟ್ಟದೆ ಸುಸ್ತಿದಾರನಾಗಿರುವುದು ಗೊತ್ತಾಗಿದೆ. ಬಳಿಕ ಈ ಸಾಲದ ಬಗ್ಗೆ ವಿಚಾರಿಸಲು ಶಾಜಿ ಕೃಷ್ಣನ್‌ ಮುಂದಾದಾಗ ಆರೋಪಿಯು ಅವಾಚ್ಯಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವರಿಗೆ ಯೂಸೆಫ್‌ ಟೋಪಿ

ಆರೋಪಿ ಯೂಸೆಫ್‌ ಪ್ರಭಾವಿ ರಾಜಕಾರಣಿಗಳು, ಉನ್ನತ ಅಧಿಕಾರಿಗಳ ಹೆಸರು ಹೇಳಿಕೊಂಡು ಉದ್ಯಮಿಗಳನ್ನು ಪರಿಚಯಿಸಿಕೊಂಡು ಬಳಿಕ ಅವರಿಗೆ ಸಹಾಯ ಮಾಡುವುದಾಗಿ ಲಕ್ಷಾಂತರ ರುಪಾಯಿ ಪಡೆದು ವಂಚಿಸಿರುವ ಆರೋಪಗಳು ಕೇಳಿ ಬಂದಿವೆ. ಉದ್ಯಮಿ ಶಿವಾನಂದಮೂರ್ತಿ ಎಂಬುವರಿಗೆ ತನ್ನ ಸ್ನೇಹಿತರಿಂದ ಸೆಕೆಂಡ್‌ ಹ್ಯಾಂಡ್‌ ಫಾರ್ಚೂನರ್‌ ಕಾರು ಕೊಡಿಸುವುದಾಗಿ ₹5 ಲಕ್ಷ ಮುಂಗಡ ಪಡೆದು ಬಳಿ ಕಾರು ಕೊಡಿಸದೆ ವಂಚನೆ ಮಾಡಿದ ಆರೋಪ ಸಂಬಂಧ ಕಳೆದ ಆಗಸ್ಟ್‌ನಲ್ಲಿ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸಮಸ್ಯೆ ತಿಳಿದು ಉದ್ಯಮಿಗಳಿಗೆ ಬಲೆ

ಆರೋಪಿ ಯೂಸೆಫ್‌ ಉದ್ಯಮಿಗಳಿಗೆ ಸಮಸ್ಯೆ ತಿಳಿದುಕೊಂಡು ಬಳಿಕ ಅವರ ಸ್ನೇಹ ಬೆಳೆಸುತ್ತಿದ್ದ. ನಂತರ ಸಹಾಯ ಮಾಡುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ. ತನಗೆ ಜಿಎಸ್‌ಟಿ ಕಮಿಷನರ್‌ ಪರಿಚಯವೆಂದು ಟ್ರಾವೆಲ್ಸ್‌ ಕಂಪನಿ ಮಾಲೀಕರಿಗೆ ನಂಬಿಸಿ, ಶೇ.50ರಷ್ಟು ಜಿಎಸ್‌ಟಿ ಕಡಿಮೆ ಮಾಡಿಸುವುದಾಗಿ ಸುಮಾರು ₹15 ಲಕ್ಷ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ.

ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ಗೃಹಿಣಿ ಆತ್ಮಹತ್ಯೆ!

ಬಿ.ವೈ.ವಿಜಯೇಂದ್ರ ಹೆಸರು ಬಳಸಿ ಮೋಸ

ಆರೋಪಿ ಯೂಸೆಫ್‌ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರು ಹೇಳಿಕೊಂಡು ಕೆಲವರಿಂದ ಹಣ ಪಡೆದು ವಂಚಿಸಿದ್ದಾನೆ. ಬಿಜೆಪಿ ಹೈಕಮಾಂಡ್‌ ನಾಯಕರು ತನಗೆ ಪರಿಯಯವಿದ್ದು, ರಾಜಕೀಯವಾಗಿ ಕೆಲಸ ಮಾಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣವನ್ನು ಸಿಸಿಬಿ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

click me!