
ಮದ್ದೂರು(ಜು.16): ಮೃತ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದು ಹಣ ದುರುಪಯೋಗಪಡಿಸಿಕೊಂಡಿದ್ದೂ ಆಲ್ಲದೆ, ವೈಯಕ್ತಿಕವಾಗಿ ಸಾಲ ಪಡೆದು ಕರ್ತವ್ಯದ ನಿರ್ಲಕ್ಷ್ಯ ಆರೋಪದ ಮೇಲೆ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಲಕ್ಷ್ಮೀನಾರಾಯಣಗೌಡ ಸೇರಿದಂತೆ ನಾಲ್ವರು ನೌಕರರನ್ನು ಮಂಡ್ಯ ಸಹಕಾರ ಉಪ ನಿಬಂಧಕರ ಆದೇಶದ ಮೇರೆಗೆ ಬ್ಯಾಂಕಿನ ಆಡಳಿತ ಮಂಡಳಿ ಅಮಾನತ್ತು ಮಾಡಿದೆ. ಶಿಂಷಾ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣಗೌಡ, ಉಪ ವ್ಯವಸ್ಥಾಪಕ ವಿ.ಉಮಾಶಂಕರ್, ಲೆಕ್ಕಾಧಿಕಾರಿ ಬಿ.ಎನ್.ಕುಮಾರ್ ಹಾಗೂ ಕಿರಿಯ ಸಹಾಯಕ ಟಿ.ಗೋಪಿ ಅವರುಗಳನ್ನು ಅಮಾನತುಗೊಳಿಸಿ ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ. ಚಂದ್ರು ತಿಳಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿ:
ನಾಲ್ವರು ನೌಕರರು ಕಳೆದ ಕೆಲ ವರ್ಷಗಳಿಂದ ಮೃತಪಟ್ಟ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಲಕ್ಷಾಂತ ರೂ. ಸಾಲ ಪಡೆದಿದ್ದಾರೆ. ಅಲ್ಲದೆ, ಯಾವುದೇ ದಾಖಲಾತಿಗಳನ್ನೂ ನೀಡದೆ ವೈಯಕ್ತಿಕವಾಗಿ ಕೋಟ್ಯಂತರ ರು. ಸಾಲ ಪಡೆದು ಮರುಪಾವತಿ ಮಾಡದಿರುವುದು 2022-21ನೇ ಸಾಲಿನಲ್ಲಿ ನಡೆದ ಲೆಕ್ಕ ಪರಿಶೋಧನೆ ವೇಳೆ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.
ಕೊಪ್ಪಳ: ಕಾಮುಕ ಶಿಕ್ಷಕನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಕೇಸ್
ಕ್ರಿಮಿನಲ್ ಪ್ರಕರಣ ದಾಖಲು
ಬ್ಯಾಂಕಿನ ಸಿಇಒ ಲಕ್ಷ್ಮೀನಾರಾಯಣ, ಉಪ ವ್ಯವಸ್ಥಾಪಕ ವಿ.ಉಮಾಶಂಕರ, ಲೆಕ್ಕಾಧಿಕಾರಿ ಬಿ.ಎನ್.ಕುಮಾರ್, ಟಿ.ಗೋಪಿ ಅವರುಗಳು ಅವ್ಯವಹಾರದಲ್ಲಿ ನೇರ ಭಾಗಿಯಾಗಿರುವುದು ಸಾಭೀತಾಗಿದ್ದು, ಇವರುಗಳ ವಿರುದ್ಧ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 70ರಡಿ ದಾವೆ ಹೂಡುವುದರ ಜೊತೆಗೆ ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ ಹಣವನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಎಲ್ಲಾ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ನಂತರ ಆಂತರಿಕ ವಿಚಾರಣೆಯನ್ನು ಕೈಗೊಂಡು ಕಾನೂನು ಕ್ರಮ ಜರುಗಿಸುವಂತೆ ಸಹಕಾರ ಸಂಘಗಳ ಉಪ ನಿಬಂಧಕರು ಬ್ಯಾಂಕಿನ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದರು.
ಈ ಪೈಕಿ ಲೆಕ್ಕಾಧಿಕಾರಿ ಬಿ.ಎನ್.ಕುಮಾರ್ ಬ್ಯಾಂಕಿನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿದ್ದಾರೆ. ಅಲ್ಲದೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೇನಾರಾಯಣಗೌಡ ಸಾಲ ಪಡೆಯಲು ಸಹಕಾರ ನೀಡಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ವಿಚಾರಣೆ ಕಾಯ್ದಿರಿಸಿ ಇವರನ್ನೂ ಸಹ ಅಮಾನತ್ತು ಮಾಡಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ. ಚಂದ್ರು ಸ್ಪಷ್ಟಪಡಿಸಿದ್ದಾರೆ.
1.16 ಕೋಟಿ ಸಾಲಕ್ಕೆ ದಾಖಲೆಗಳಿಲ್ಲ:
ಆರೋಪಿಗಳು ಸಾಲಗಳ ಪೈಕಿ 1,16,55,436 ರೂ. ಸಾಲಗಳನ್ನು ನೀಡಿರುವ ಬಗ್ಗೆ ಬ್ಯಾಂಕಿನಲ್ಲಿ ಪರಿಶೀಲನೆ ನಡೆಸಿದ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿಲ್ಲ. ಈ ಸಾಲ ಬೇನಾಮಿ ಸಾಲವಾಗಿರುತ್ತದೆ. ಈ ಮೇಲ್ಕಂಡ ಸಾಲಗಳನ್ನು ಬ್ಯಾಂಕಿನಲ್ಲಿ 2016-2019ನೇ ಸಾಲಿನಲ್ಲಿ ಕಾರ‍್ಯನಿರ್ವಹಿಸಿರುವ ಆಡಳಿತ ಮಂಡಳಿ ಸಾಲ ಮಂಜೂರು ಮಾಡಿರುವ ಹಾಗೂ ಸಮಿತಿ ಬ್ಯಾಂಕಿನ ವ್ಯವಸ್ಥಾಪಕ ಲಕ್ಷ್ಮೇ ನಾರಾಯಣಗೌಡ ಸಾಲದ ಅರ್ಜಿ ದಾಖಲೆ ಪರಿಶೀಲನೆ ಮಾಡದೆ ಸಾಲ ಮಂಜೂರು ಮಾಡಿ ಆರೋಪಕ್ಕೆ ಗುರಿಯಾಗಿದ್ದಾರೆ.
ವೃದ್ಧರಿಗೆ ಮಸಾಜ್ ಆಸೆ ತೋರಿಸಿ ಚಿನ್ನ ದೋಚುತ್ತಿದ್ದ ಮಹಿಳೆ ಅಂದರ್
14 ಸಾಲಗಾರರ ಅರ್ಜಿ ಮತ್ತು ದಾಖಲಾತಿಗಳನ್ನು ಪಡೆಯದೆ ಇವರ ಹೆಸರಿನಲ್ಲಿ ಸಾಲ ಪಡೆದುರ್ಬಳಕೆ ಮಾಡಿಕೊಂಡಿರುವುದು 2020-21ನೇ ಸಾಲಿನ ಲೆಕ್ಕ ಪರಿಶೋಧನೆ ವೇಳೆ ಕಂಡುಬಂದಿದ್ದು, ಇದಕ್ಕೆ ಆಡಳಿತ ಮಂಡಳಿ ಮಂಜೂರಾತಿ ನೀಡಿರುವ ಬಗ್ಗೆ ದಾಖಲೆಗಳಿಲ್ಲ. ಈ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರ ದುರುಪಯೋಗಪಡಿಸಿಕೊಂಡು ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮಾಡುವಂತೆ ಆಡಳಿತ ಮಂಡಳಿ ತೀರ್ಮಾನ ಮಾಡಿದ್ದು, ಆರೋಪಿತ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಮದ್ದೂರು ಪೊಲೀಸರಿಗೆ ಅಧ್ಯಕ್ಷ ಚಂದ್ರು ದೂರು ನೀಡಿದ್ದಾರೆ.
ವ್ಯವಹಾರ ಮಾಡದಂತೆ ಸೂಚನೆ
ಗ್ರಾಹಕರು, ಠೇವಣಿದಾರರು ಹಾಗೂ ಸಂಘದ ಷೇರುದಾರ ಸದಸ್ಯರುಗಳು ಅಮಾನತ್ತುಗೊಂಡಿರುವ ಸಿಇಓ ಲಕ್ಷ್ಮಿನಾರಾಯಣಗೌಡ, ಉಪ ವ್ಯವಸ್ಥಾಪಕ ವಿ. ಉಮಾಶಂಕರ, ಲೆಕ್ಕಾಧಿಕಾರಿ ಬಿ.ಎನ್. ಕುಮಾರ, ಸಹಾಯಕ ಟಿ. ಗೋಪಿ ಅವರೊಂದಿಗೆ ಶಿಂಷಾ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಹಣಕಾಸು ವ್ಯವಹಾರಗಳನ್ನು ಮಾಡಬಾರದಾಗಿ ಅವರು ಎಚ್ಚರಿಸಿದ್ದಾರೆ.
ಅಮಾನತ್ತುಗೊಂಡ ಎಲ್ಲಾ ನೌಕರರು ತಮ್ಮ ಹಗರಣ ಬೆಳಕಿಗೆ ಬಂದ ನಂತರ ಶಿಂಷಾ ಬ್ಯಾಂಕಿನ ವಿರುದ್ಧ ಇಲ್ಲ ಸಲ್ಲದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇಂತಹ ಸುದ್ಧಿಗಳಿಗೆ ಗ್ರಾಹಕರುಗಳು ಕಿವಿಗೊಡದೆ ಎಂದಿನಂತೆ ಬ್ಯಾಂಕಿನಲ್ಲಿ ವ್ಯವಹಾರ ನಡೆಸಬೇಕು ಎಂದು ಅಧ್ಯಕ್ಷ ಚಂದ್ರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ