ರಾತ್ರಿ ಗುಂಡು-ತುಂಡಿನ ಪಾರ್ಟಿ ಮಾಡಿ ಶಿಸ್ತು ಮರೆತು ಅಂದರ್ -ಬಾಹರ್ ಆಟದಲ್ಲಿ ಮೈಮರೆತಿದ್ದವರಿಗೆ ಚಳಿ ಬಿಡಿಸಿದ ಪೊಲೀಸರು
ಹುಬ್ಬಳ್ಳಿ(ಜು.30): ಬೇಲಿಯೇ ಎದ್ದು ಹೊಲ ಮೇಯ್ದಂಥ ಕಥೆ ಇದು.. ಜೂಜುಕೋರರ ವಿರುದ್ಧ ಸಮರ ಸಾರಬೇಕಿದ್ದ ಶಿಸ್ತಿನ ಇಲಾಖೆಯ ಸಿಪಾಯಿಗಳೇ ಇಲ್ಲಿ ಶಿಸ್ತು ಮರೆತು ಇಸ್ಪೀಟ್ ಜೂಜಾಡುತ್ತಿದ್ದರು. ಅಂತಹವರಿಗೆ- ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರೇ- ತಮ್ಮದೇ ಇಲಾಖೆ ಪೋಲೀಸರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಕುಳಿತು ಎಕ್ಕ-ರಾಜ-ರಾಣಿ ಎಲೆ ತಟ್ಟುತ್ತಿದ್ದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ತಂಡದ ಮೇಲೆ ಪೊಲೀಸರೇ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ ಘಟನೆಯೊಂದು ನಡೆದಿದೆ.ರಾತ್ರಿ ಗುಂಡು-ತುಂಡಿನ ಪಾರ್ಟಿ ಮಾಡಿ ಶಿಸ್ತು ಮರೆತು ಅಂದರ್ -ಬಾಹರ್ ಆಟದಲ್ಲಿ ಮೈಮರೆತಿದ್ದವರಿಗೆ ಸಿವಿಲ್ ಪೊಲೀಸರು ಚಳಿ ಬಿಡಿಸಿದ್ದಾರೆ.
ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಓರ್ವ ಇನ್‌ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ಸ್‌ಟೆಬಲ್‌ಗಳು, ಓರ್ವ ಕಾನ್ ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಗಳಿದ್ದ ಐವರ ತಂಡ ಅಕ್ಷಯ ಕಾಲನಿ ಎರಡನೇ ಹಂತದ ಮನೆ ಸಂಖ್ಯೆ 337ರಲ್ಲಿ ಇಸ್ಪೀಟ್ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತ ಲಾಭೂರಾಮ ಅವರ ಸೂಚನೆ ಹಿನ್ನೆಲೆಯಲ್ಲಿ ಗೋಕುಲ ರೋಡ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ದಾಳಿ ನಡೆಸಿತ್ತು.
ಮಟ್ಕಾ ಬುಕ್ಕಿಗೆ ಬ್ಲಾಕ್‌ಮೇಲ್ ಮೂವರು ನಕಲಿ CBI ಅಧಿಕಾರಿಗಳ ಬಂಧನ
ದಾಳಿಯಲ್ಲಿ ಸಿಎಆರ್‌ನ ಇಬ್ಬರು ಹೆಡ್ ಕಾನ್‌ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್ ಸ್ಟೆಬಲ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಆರ್ ಇನ್ಸ್ಪೆಕ್ಟರ್ ಪರಾರಿಯಾಗಿದ್ದು, 9 ಸಾವಿರ ನಗದು ಹಾಗೂ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.