ಯುವಕನೊಬ್ಬನ ಬ್ಲಾಕ್ ಮೇಲ್ ಹಾಗೂ ಈ ಬಗ್ಗೆ ಎರಡು ಬಾರಿ ದೂರು ಕೊಟ್ಟರು ಪೊಲೀಸರು ದೂರು ದಾಖಲು ಮಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದೆ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ವರದಿ - ಪುಟ್ಟರಾಜು. ಆರ್.ಸಿ.ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಜೂ.08): ಈಗ ರಾಜ್ಯದಲ್ಲಿ ಎಲ್ಲೆಲ್ಲೂ ಆಶ್ಲೀಲ ವಿಡಿಯೋ ಸದ್ದು, ಇಂತಹುದ್ದೆ ಒಂದು ಪ್ರಕರಣದಿಂದ ನೊಂದ ಕುಟುಂಬವೊಂದರ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿದ್ರೆ, ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಯುವಕನೊಬ್ಬನ ಬ್ಲಾಕ್ ಮೇಲ್ ಹಾಗೂ ಈ ಬಗ್ಗೆ ಎರಡು ಬಾರಿ ದೂರು ಕೊಟ್ಟರು ಪೊಲೀಸರು ದೂರು ದಾಖಲು ಮಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದೆ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಅದೊಂದು ಬಡ ಕುಟುಂಬ, ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೋಕಿನ ಚಂದಗಾಲು ಗ್ರಾಮದ ಆ ಕುಟುಂಬದ ಅಪ್ರಾಪ್ತ ವಯಸ್ಸಿನ ಯುವತಿ ನಿತ್ಯ ಕೆಆರ್ ನಗರದ ಕಾಲೇಜಿಗೆ ಹೋಗುತ್ತಿದ್ದಳು. ಪಕ್ಕದ ಚೀರನಹಳ್ಳಿ ಗ್ರಾಮದ ಯುವಕ ಲೋಕೇಶ್ ಎಂಬಾತ ಆ ಯುವತಿಯ ಹಿಂದೆ ಬಿದ್ದಿದ್ದ.ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.ಇದನ್ನೇ ಬಂಡವಾಳ ಮಾಡಿಕೊಂಡ ಯುವಕ,ಯುವತಿಯೊಟ್ಟಿಗೆ ಖಾಸಗಿ ಕ್ಷಣಗಳ ಆಶ್ಲೀಲ ವೀಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.ಈ ವೀಡಿಯೋ ಗಳನ್ನು ಇಟ್ಟುಕೊಂಡು ಆಕೆ ಹಾಗೂ ಕುಟುಂಬಸ್ಥರನ್ನು ಬ್ಲಾಕ್ ಮೇಲ್ ಮಾಡ ತೊಡಗಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಲೈಂಗಿಕ ಕಿರುಕುಳ ನೀಡಿದ ಆರೋಪ: ಪುರಸಭೆ ಅಧ್ಯಕ್ಷೆ ಪತಿಗೆ ಮಹಿಳೆಯರಿಂದ ಥಳಿತ..!
ಯುವಕನ ನಡೆಯಿಂದ ಬೇಸತ್ತ ಯುವತಿ ಆತನಿಂದ ಮೊಬೈಲ್ ಕಸಿದು ಚುಂಚನಕಟ್ಟೆ ಬಳಿ ನೀರಿಗೆ ಎಸೆದಿದ್ದಳು. ಇದರಿಂದ ಕೋಪಗೊಂಡ ಯುವಕ ಯುವತಿಯ ಮನೆಗೆ ಬಂದು ಜಗಳವಾಡಿದ್ದಾನೆ. ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತೇನೆಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಯುವತಿಯ ಕುಟುಂಬ ಕೆಆರ್ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆದ್ರೆ ಅಲ್ಲಿನ ಪೊಲೀಸರು ಯುವಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನೊಂದ ಕುಟುಂಬಕ್ಕೆ ಕೆ.ಆರ್.ನಗರ ಪೊಲೀಸರಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಒಂದು ಕಡೆ ಅಶ್ಲೀಲ ವಿಡಿಯೋಗಳಿಂದ ತಮ್ಮ ಮಾನ ಮರ್ಯಾದೆ ಹೋಯ್ತು, ಇನ್ನೊಂದು ಕಡೆ ಪೊಲೀಸರಿಂದ ತಮಗೆ ನ್ಯಾಯವೂ ದೊರೆಯಲಿಲ್ಲ ಎಂದು ಬೇಸತ್ತ ಕುಟುಂಬ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದೆ. ಮಾದಪ್ಪನ ಸನ್ನಿದಿಗೆ ಕೆಲವೇ ಕಿಲೋಮೀಟರ್ ದೂರದಲ್ಲಿರುವ ತಾಳಬೆಟ್ಟದ ಬಳಿ ಯುವತಿ,ಯುವತಿಯ ತಾಯಿ,ಆಕೆಯ ಅಜ್ಜ,ಅಜ್ಜಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಜ್ಜ ಮಹಾದೇವ ನಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಜ್ಜಿ ಗೌರಮ್ಮ, ತಾಯಿ ಲೀಲಾವತಿ ಹಾಗೂ ಯುವತಿ ರಿಷಿಕಾ ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೂ ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕ ಲೋಕೇಶ್ ವಿರುದ್ಧ ಕ್ರಮ ಜರುಗಿಸುವಂತೆ ಯುವತಿ ಕುಟುಂಬಸ್ಥರು ಎರಡು ಬಾರಿ ಕೆ.ಆರ್ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯುವಕನ ವಿರುದ್ಧ ದೂರು ದಾಖಲಿಸಿಕೊಳ್ಳದೆ ಅಲ್ಲಿನ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ ಕನಿಷ್ಢ ಆತನನ್ನು ಕರೆಸಿ ಬುದ್ದಿ ಹೇಳುವ ಕೆಲಸಕ್ಕು ಪೊಲೀಸರು ಮುಂದಾಗಿಲ್ಲ. ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪೊಲೀಸರು ಮೊದಲೇ ಎಚ್ಚೆತ್ತುಕೊಂಡಿದ್ದರೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಪೊಲೀಸರಿಂದ ನ್ಯಾಯ ಸಿಗಲ್ಲವೆಂದು ಮನನೊಂದು ಕುಟುಂಬ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಾಳಬೆಟ್ಟದಲ್ಲಿ ವಿಷ ಸೇವಿಸಿದೆ. ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಅಜ್ಜಿ ಗೌರಮ್ಮ, ತಾಯಿ ಲೀಲಾವತಿಗೆ ಚಿಕಿತ್ಸೆ ಕೊಡ್ತಿದ್ರೆ ಅತ್ತ ಯುವತಿ ರಿಷಿಕಾಗೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಹಿಳೆಯರ ಸ್ಯಾನಿಟರಿ ಪ್ಯಾಡ್ ವಿಚಾರಕ್ಕೆ ಗಲಾಟೆ, ಮೆಡಿಕಲ್ ಶಾಪ್ ಸಿಬ್ಬಂದಿ ಮೇಲೆ ಹಲ್ಲೆ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಪದ್ಮಿನಿ ಸಾಹು ತಾಳ ಬೆಟ್ಟದ ಸಮೀಪ ನಾಲ್ವರು ವಿಷ ಸೇವಿಸಿರುವ ಬಗ್ಗರ ಬೆಳಿಗ್ಗೆ 11 ಮಾಹಿತಿ ಸಿಕ್ಕಿತು. ಮಹದೇವನಾಯಕ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ಮುಟ್ಟಿಸಲಾಗಿದೆ ಯುವಕನೊಬ್ಬ ಕೆಲವು ವೀಡಿಯೋ, ಪೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದ ಅಂತ ದೂರು ಬಂದಿದೆ ಈ ಬಗ್ಗೆ ಮಹದೇವನಾಯಕ ಕುಟುಂಬದವರು ಒಂದೆರಡು ಬಾರಿ ಕೆ.ಆರ್.ನಗರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದ್ರೆ ಪ್ರಕರಣ ಅಲ್ಲಿ ದಾಖಲಿಸಿಕೊಂಡಿಲ್ಲ ಅಂತ ಕುಟುಂಬದವರು ಹೇಳ್ತಿದ್ದಾರೆ. ಈ ಬಗ್ಗೆ ಈಗಾಗ್ಲೇ ಮೈಸೂರಿನ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಆತ್ಮಹತ್ಯೆಗೆ ಯತ್ನ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ
ಒಟ್ನಲ್ಲಿ ಆಶ್ಲೀಲ ವೀಡಿಯೋದ ಪರಿಣಾಮ ಈ ಘಟನೆ ಜರುಗಿದೆ . ಅಶ್ಲೀಲ ವೀಡಿಯೋ ಇಟ್ಟುಕೊಂಡು ಬೆದರಿಸುತ್ತಿದ್ದ ಆರೋಪಿಯ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದರೆ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸುವ ಪ್ರಮೇಯವೇ ಬರುತ್ತಿರಲಿಲ್ಲ.ಇನ್ನಾದ್ರೂ ಪೊಲೀಸರು ಎಚ್ಚೆತ್ತುಕೊಂಡು ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ.