ಮದ್ವೆಯಾಗಲು ಹುಡುಗಿಯ ಆಧಾರ್‌ ಕಾರ್ಡ್‌ನಲ್ಲಿ ವಯಸ್ಸು ತಿದ್ದುಪಡಿ, ನಾಲ್ವರು ಅರೆಸ್ಟ್

Published : Jul 17, 2022, 04:21 PM IST
ಮದ್ವೆಯಾಗಲು ಹುಡುಗಿಯ ಆಧಾರ್‌ ಕಾರ್ಡ್‌ನಲ್ಲಿ ವಯಸ್ಸು ತಿದ್ದುಪಡಿ, ನಾಲ್ವರು ಅರೆಸ್ಟ್

ಸಾರಾಂಶ

ಮದುವೆಯಾಗಲು ಅಪ್ರಾಪ್ತ ಹುಡುಗಿಯ ವಯಸ್ಸು ತಿದ್ದುಪಡಿ ಮಾಡಿದ ನಾಲ್ವರು ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ.  

ಬೆಂಗಳೂರು, (ಜುಲೈ.17): ಅಪ್ರಾಪ್ತೆಯನ್ನು ಮದುವೆಯಾಗಲು ಆಕೆಯ ಆಧಾರ್‌ ಕಾರ್ಡ್‌ ನಲ್ಲಿ ವಯಸ್ಸು ತಿದ್ದುಪಡಿ ಮಾಡಿದ ಆರೋಪಿ ಸೇರಿ ನಾಲ್ವರನ್ನು ಬೆಂಗಳೂರಿನ  ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಲಿಯೂರು ದುರ್ಗ ಮೂಲದ ಮನು (21) ಹಾಗೂ ಆತನ ಸ್ನೇಹಿತರಾದ ವೆಂಕಟೇಶ್‌, ಪ್ರಭು, ಮಲ್ಲೇಶ್‌ ಬಂಧಿತರು. ಹುಲಿಯೂರು ದುರ್ಗದ ನಿವಾಸಿ ಮನು ಲಗ್ಗೆರೆಯಲ್ಲಿ ವಾಸವಾಗಿದ್ದು, ಬೆಂಗಳೂರಿನಲ್ಲಿ ಚಾಲಕನಾಗಿದ್ದಾನೆ. 

ಅತ್ತೆ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಈ ಮಧ್ಯೆ ಈತ ತನ್ನಅತ್ತೆಯ ಮಗಳಾದ 17 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆಕೆ ಒಪ್ಪದಿದ್ದಾಗ ಹತ್ಯೆ ಮಾಡುವುದಾಗಿ ಬೆದರಿಸಿದ್ದ. ಹೆದರಿದ ಬಾಲಕಿ ಮದುವೆಗೆ ಒಪ್ಪಿಕೊಂಡಿದ್ದಳು.

Crime News ; ಮಾಜಿ ಪ್ರೇಯಸಿ ಮನೆ ಬಳಿ ಗಲಾಟೆ ಮಾಡಿದ್ದವನ ಕೊಲೆ!

ಏ.16 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಟಾಟಾ ಏಸ್‌ ವಾಹನದಲ್ಲಿ  ಸ್ನೇಹಿತ ವೆಂಕಟೇಶ್‌ ಜತೆ ಕರೆದುಕೊಂಡು ಹೋಗಿ, ವಿಧಾನಸೌಧ ಲೇಔಟ್‌ ಗಣಪತಿ ದೇವಾಲಯದಲ್ಲಿ ತಾಳಿ ಕಟ್ಟಿದ್ದಾನೆ. 

ಬಳಿಕ ಸ್ನೇಹಿತರಾದ ಮಲ್ಲೇಶ್‌, ಪ್ರಭು ಸಹಾಯದಿಂದ ಆಧಾರ್‌ ಕಾರ್ಡ್‌ನಲ್ಲಿ ಜನ್ಮ ದಿನಾಂಕ ತಿದ್ದುಪಡಿ ಲಗ್ಗೆರೆ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹೋಗಿ ವಿವಾಹ ನೋಂದಣಿ ಮಾಡಿಸಿದ್ದಾರೆ. ಅನಂತರ ಕೊಟ್ಟಿಗೆಪಾಳ್ಯದಲ್ಲಿ ಅಪ್ರಾಪ್ತೆಯ ಇಚ್ಛೆಯ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಕೆಲ ದಿನಗಳ ನಂತರ ಬಾಲಕಿ ಈ ವಿಚಾರನ್ನು ಪೋಷಕರಿಗೆ ಹೇಳಿದ್ದಾಳೆ. ಈ ಸಂಬಂಧ ಜು.12ರಂದು ಆರೋಪಿಯ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ರಾಜಗೋಪಾಲನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಜಿ ಪ್ರೇಯಸಿ ಮನೆ ಬಳಿ ಗಲಾಟೆ ಮಾಡಿದ್ದವನ ಕೊಲೆ!
ಬೆಂಗಳೂರು:
 ಪ್ರೀತಿ ವಿಚಾರವಾಗಿ ತಮ್ಮ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಯುವಕನೊಬ್ಬನನ್ನು ಆತನ ಮಾಜಿ ಪ್ರೇಯಸಿಯ ಪತಿ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ಶಿವಾಜಿ ನಗರದಲ್ಲಿ ನಡೆದಿದೆ. ಶಿವಾಜಿ ನಗರದ ನಿವಾಸಿ ಜಾವದ್‌ ಖಾನ್‌ (25) ಕೊಲೆಯಾದ ವ್ಯಕ್ತಿ. ಈ ಹತ್ಯೆ ಸಂಬಂಧ ಮೃತನ ಮಾಜಿ ಪ್ರಿಯತಮೆ ಸಿಮ್ರಾನ್‌ ಹಾಗೂ ಆಕೆಯ ಗಂಡ ಜಿಶಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಮ್ರಾನ್‌ ಮನೆಗೆ ಶುಕ್ರವಾರ ರಾತ್ರಿ 9.30ಕ್ಕೆ ತೆರಳಿ ಜಾವದ್‌ ಖಾನ್‌ ಗಲಾಟೆ ಮಾಡಿದ್ದು, ಆಗ ಪರಸ್ಪರ ಜಗಳದಲ್ಲಿ ಖಾನ್‌ ಕುತ್ತಿಗೆಗೆ ಕತ್ತರಿಯಿಂದ ಜಿಶಾನ್‌ ಇರಿದಿದ್ದಾನೆ.

ಹಲ್ಲೆಗೊಳಗಾದ ಖಾನ್‌ ಅಲ್ಲೇ ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾನೆ. ಆದರೆ ಆಸ್ಪತ್ರೆ ಸೇರಿದ ಕೆಲವೇ ಕ್ಷಣಗಳಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತ ಜಾವದ್‌ ಖಾನ್‌ ಎಲೆಕ್ಟ್ರಿಕಲ್‌ ಉಪಕರಣ ಮೆಕ್ಯಾನಿಕ್‌ ಆಗಿದ್ದು, ರಸೆಲ್‌ ಮಾರುಕಟ್ಟೆಸಮೀಪ ನೆಲೆಸಿದ್ದ. ಎರಡು ವರ್ಷಗಳಿಂದ ಸಿಮ್ರಾನ್‌ಳನ್ನು ಆತ ಪ್ರೀತಿಸುತ್ತಿದ್ದ. ಆದರೆ ಕೆಲ ದಿನಗಳ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಬಂದು ಪ್ರತ್ಯೇಕವಾಗಿದ್ದರು. ನಂತರ ಔಷಧಿ ಮಾರಾಟ ಪ್ರತಿನಿಧಿ ಜಿನಾಶ್‌ ಜತೆ ಆಕೆ ವಿವಾಹವಾಗಿದ್ದಳು.

ಈ ಮದುವೆಯಿಂದ ಕೆರಳಿದ ಖಾನ್‌, ಆಗಾಗ್ಗೆ ಮಾಜಿ ಪ್ರೇಯಸಿ ಮನೆ ಬಳಿ ತೆರಳಿ ಗಲಾಟೆ ಮಾಡುತ್ತಿದ್ದ. ಅಂತೆಯೇ ಶುಕ್ರವಾರ ರಾತ್ರಿ ತೆರಳಿದಾಗ ಖಾನ್‌ ಹಾಗೂ ಆತನ ಮಾಜಿ ಪ್ರಿಯತಮೆ ದಂಪತಿ ಮಧ್ಯೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಶಿವಾಜಿ ನಗರ ಠಾಣೆ ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ