Shivamogga News: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ತಾಯಿ ನೇಣಿಗೆ ಶರಣಾಗಿರುವ ಘಟನೆ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ (ಜು. 17): ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು (Dowry Harassment) ಮಗುವಿನೊಂದಿಗೆ ತಾಯಿ ನೇಣಿಗೆ ಶರಣಾಗಿರುವ ಘಟನೆ ಸೊರಬ (Soraba) ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ನಡೆದಿದೆ. ತಾಯಿ ಮತ್ತು ಮಗು ನೇಣಿಗೆ ಶರಣಾಗಿದ್ದಾರೆ. ನಯನಾ (27), ಆಕೆಯ ಮಗ ಗುರು (4) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು. 5 ವರ್ಷಗಳ ಹಿಂದೆ ಕುಂಭತ್ತಿ ಗ್ರಾಮದ ನಯನಾ, ಕಪ್ಪಗಳಲೆ ಗ್ರಾಮದ ಶರತ್ ಪ್ರೀತಿಸಿ ವಿವಾಹವಾಗಿದ್ದರು. ಮಗಳು ಮತ್ತು ಮೊಮ್ಮಗನ ಸಾವಿಗೆ ಆಕೆಯ ಪತಿ ಮತ್ತವನ ಕುಟುಂಬ ಕಾರಣ ಎಂದು ತಂದೆ ನಾಗರಾಜ್ ದೂರು ನೀಡಿದ್ದಾರೆ.
ನಯನಾ ಪತಿ ಶರತ್, ಮಾವ ಹಾಲೇಶ್ ಹಾಗೂ ಅತ್ತೆ ಸೀತಮ್ಮ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ಕಾರಣ ಎಂದು ನಾಗರಾಜ್ ದೂರು ನೀಡಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆಗಾಗಿ ಮಹಿಳೆಯ ಕೊಲೆ: ದೂರು: ವಿವಾಹ ಆದಾಗಿನಿಂದಲೂ ವರದಕ್ಷಿಣೆ ಹಣ ತರುವಂತೆ ಪೀಡಿಸಿ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ, ಕೊನೆಗೆ ಕೊಲೆ ಮಾಡಿರುವ ಘಟನೆ ಬುಧವಾರ ಜರುಗಿದೆ. ಅರುಣಾ(25) ಕೊಲೆಯಾಗಿರುವ ಗೃಹಿಣಿ. ಪಟ್ಟಣದ ಬ್ಯಾಂಕ್ ಆಫ್ ಬರೋಡಾದ ಶಾಖೆಯ ಸಹಾಯಕ ವ್ಯವಸ್ಥಾಪಕ ರಾಮಕೃಷ್ಣ 7 ವರ್ಷಗಳ ಹಿಂದೆ ಅರುಣಾರನ್ನು ವಿವಾಹವಾಗಿದ್ದರು.
ಇದನ್ನೂ ಓದಿ: ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕರ್ ಪಡೆದ ವರ: ಏಕೆ ಗೊತ್ತಾ?
ವಿವಾಹ ಆದಾಗಿನಿಂದಲೂ ಹಣಕ್ಕಾಗಿ ಪೀಡಿಸಿ, ಹಿಂಸೆ ನೀಡುತ್ತಿದ್ದರು. ಇದೀಗ ತಮ್ಮ ಹಣದಾಸೆಗೆ ಕೊಲೆ ಮಾಡಿದ್ದಾರೆ ಎಂದು ಅರುಣಾ ಸಹೋದರ ವೆಂಕಟೇಶ ಜಕ್ಕುಲಾ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಅರುಣಾಳ ಪತಿ ರಾಮಕೃಷ್ಣ ನಕ್ಕಾ, ಮಾವ ವೆಂಕಟಯ್ಯ ಹಾಗೂ ಅತ್ತೆ ಕೊಂಡಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.
ಮದುವೆ ಆಮಿಷ: ಆಭರಣ ಪಡೆದು ಪರಾರಿಯಾಗಿದ್ದ ಯುವಕನ ಸೆರೆ: ಒಂದೂವರೆ ವರ್ಷದಿಂದ ಯುವತಿಯ ಪ್ರೀತಿಸಿ ಮದುವೆಯಾಗುವುದಾಗಿ ನಿಶ್ಚಿತಾರ್ಥ ನೆರವೇರಿಸಿ ನಂತರ ವರದಕ್ಷಿಣೆ ರೂಪದಲ್ಲಿ ಉಂಗುರ, ಬ್ರಾಸ್‌ಲೈಟ್, ಸರ ಪಡೆದು ಬಳಿಕ ಮದುವೆಯಾಗಲು ನಿರಾಕರಿಸಿದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿ ಪತ್ತೆಹಚ್ಚಿ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ನೀಡಿ ಹೆಂಡತಿ ಬಲಿಪಡೆದ, ಸರ್ಕಾರಿ ಕೆಲಸದಲ್ಲಿದ್ದಾತನಿಗೆ ಜೈಲಿನಲ್ಲಿ 63 ರೂ. ದಿನಗೂಲಿ!
ಚಳ್ಳಕೆರೆ ತಾಲೂಕಿನ ಗೊರ್ಲಕಟ್ಟೆಗ್ರಾಮದ ಟೈಲರಿಂಗ್ ಮಾಡುತ್ತಿದ್ದ ಯುವತಿಯ ಒಂದೂವರೆ ವರ್ಷದಿಂದ ಸಂಪರ್ಕವಿಟ್ಟು ಆಕೆಯ ಪೋಷಕರಿಗೂ ಮದುವೆ ವಿಚಾರ ತಿಳಿಸಿ ನಂತರ ನಾಪತ್ತೆಯಾಗಿದ್ದ ಬಗ್ಗೆ ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ಆರೋಪಿ ಭಾನು ಯಾನೆ ಭಾನು ದೊಡ್ಡಮನಿ ಪಗಡಲಬಂಡೆ ಗ್ರಾಮ ಇವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಭಾನು ದೊಡ್ಡಮನಿ ಈ ಹಿಂದೆ ಮದುವೆ ನಿಶ್ಚಿತಾರ್ಥ ಮುರಿದು ತಾನೇ ಮದುವೆಯಾಗುವ ಭರವಸೆ ನೀಡಿ ತನ್ನ ಪೋಷಕರು, ಬಂಧುಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಾಗ್ದಾನ ಮಾಡಿ ನಾಪತ್ತೆಯಾಗಿದ್ದನು.