ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆಗೆ ಕೆಲ ವೈದ್ಯರು ಸಹ ಸಾಥ್ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿರುವ ದಂಧೆಕೋರ ವೀರೇಶ್‌ನ ಚಿಕ್ಕಪ್ಪ ಡಾ। ಮಲ್ಲಿಕಾರ್ಜುನ್ ಸೇರಿದಂತೆ ಕೆಲವು ವೈದ್ಯರಿಗೆ ಹುಡುಕಾಟ ನಡೆದಿದೆ. ಇನ್ನು ಕಳೆದ ವರ್ಷದ ಸಹ ಇದೇ ರೀತಿಯ ಪ್ರಕರಣದಲ್ಲಿ ಡಾ। ಮಲ್ಲಿಕಾರ್ಜುನ್ ಬಂಧಿತನಾಗಿದ್ದು, ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ಆತ ಚಾಳಿ ಮುಂದುವರೆಸಿದ್ದಾನೆ.
ಬೆಂಗಳೂರು(ಅ.25): ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಭೇದಿಸಿದ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಈ ಸಂಬಂಧ ನಾಲ್ವರು ಕಿಡಿಗೇಡಿಗಳನ್ನು ಸೆರೆ ಹಿಡಿದಿದ್ದಾರೆ.
ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನ್‌ಕುಮಾರ್, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನ್‌ಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ.ವೀರೇಶ್ ಬಂಧಿತರಾಗಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ವೀರೇಶ್‌ನ ಚಿಕ್ಕಪ್ಪ ಡಾ। ಮಲ್ಲಿಕಾರ್ಜುನ್ ಹಾಗೂ ಸಹಚರ ಸಿದ್ದೇಶ್ ಪತ್ತೆಗೆ ತನಿಖೆ ನಡೆದಿದೆ. ಇನ್ನು ಈ ಪ್ರಕರಣದ ಆರೋಪಿ ಆಗಿರುವ ಶಿವಲಿಂಗೇಗೌಡನ ಪತ್ನಿ ಸುನಂದಾಳನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮದನ್ ಭೀಕರ ಹತ್ಯೆ ದೃಶ್ಯ ಮೊಬೈಲ್‌ನಲ್ಲಿ ಸೆರೆ, ನಡುರಸ್ತೆಯಲ್ಲಿ ನಡೆದಿತ್ತು ಮರ್ಡರ್!
ಇತ್ತೀಚೆಗೆ ಹೆಣ್ಣು ಭ್ರೂಣ ಪತ್ತೆ ದಂಧೆ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಎಂ.ಪ್ರಶಾಂತ್ ಅವರು, ಕೂಡಲೇ ಪಿಎಸ್‌ಐ ಮಂಜುನಾಥ್, ಬೈಯಪ್ಪನಹಳ್ಳಿ ಠಾಣೆ ಪಿಎಸ್‌ಐ ಮಂಜುನಾಥ್, ಎಎಸ್‌ಐಗಳಾದ ಗೋವಿಂದರಾಜು, ನಾಗಯ್ಯ ಒಳಗೊಂಡ ತಂಡ ರಚಿಸಿಕೊಂಡು ದಂಧೆಕೋರರ ಬೆನ್ನುಹತ್ತಿದ್ದಾಗ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.
ಮಂಡ್ಯದ ಅಲೆಮನೆಯೇ ಸ್ಕ್ಯಾನಿಂಗ್ ಸೆಂಟರ್!
ಈ ನಾಲ್ವರು ಆರೋಪಿಗಳು ಇದೇ ದಂಧೆಯನ್ನೇ ವೃತ್ತಿಯಾಗಿಸಿಕೊಂಡಿದ್ದು, ಹಲವು ವರ್ಷಗಳಿಂದ ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದರು. ಆರೋಪಿಗಳ ಪೈಕಿ ಶಿವಲಿಂಗೇಗೌಡನಿಗೆ ಈ ಮೊದಲು ಲ್ಯಾಬ್‌ನಲ್ಲಿ ಕೆಲಸ ಮಾಡಿದ ಅನುಭವಿದೆ. ಇನ್ನುಳಿದಂತೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ವೈದ್ಯನಾಗಿರುವ ತನ್ನ ಚಿಕ್ಕಪ್ಪ ಡಾ। ಮಲ್ಲಿಕಾರ್ಜುನ್ ಬಳಿ ವೀರೇಶ್ ಕೆಲಸ ಮಾಡುತ್ತಿದ್ದ, ಉಳಿದಿಬ್ಬರ ಪೈಕಿ ನವೀನ್ ಪರೀಕ್ಷೆಗೆ ಸ್ಥಳಗಳನ್ನು ಗುರುತಿಸುತ್ತಿದ್ದ. ನಯನ್ ದಲ್ಲಾಳಿಯಾಗಿದ್ದು, ಗರ್ಭಿಣಿಯರ ಪರೀಕ್ಷೆಗೆ ಸಾಗಿಸುವ ಕಾರಿನ ಚಾಲಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಿಗೆರೆ ಜಿಲ್ಲೆಯವನಾದರೂ ಹಲವು ವರ್ಷಗಳಿಂದ ಮಂಡ್ಯದಲ್ಲೇ ವೀರೇಶ್ ಠಿಕಾಣಿ ಹೂಡಿದ್ದ. ಈ ಆರೋಪಿಗಳು, ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮೂಲಕ ಗರ್ಭಿಣಿಯರಿಗೆ ಗಾಳ ಹಾರುತ್ತಿದ್ದರು. ಗಂಡು ಸಂತಾನ ಬಯಸುವ ದಂಪತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಆ ದಂಪತಿಗೆ ಲಿಂಗ ಪತ್ತೆ ಹಚ್ಚುತ್ತೇವೆ ಎಂದು ಹೇಳಿ ಸೆಳೆಯುತ್ತಿದ್ದರು. ಹೀಗೆ ತಮ್ಮ ಬಲೆಗೆ ಬಿದ್ದ ಬಳಿಕ ಮಂಡ್ಯ ಬಸ್ ನಿಲ್ದಾಣಕ್ಕೆ ಕರೆಸಿಕೊಳ್ಳುತ್ತಿದ್ದರು. ಆನಂತರ ಅಲ್ಲಿಂದ ಮಂಡ್ಯ ಜಿಲ್ಲೆ ವ್ಯಾಪ್ತಿಯ ರಹಸ್ಯ ಸ್ಥಳಗಳಿಗೆ ಕರೆದೊಯ್ದು ಅಲ್ಲಿಯೇ ಸ್ಕ್ಯಾನಿಂಗ್ ಮಾಡಿ ಹೆಣ್ಣು ಭ್ರೂಣ ಪತ್ತೆ ಹಚ್ಚುತ್ತಿದ್ದರು. ಒಂದು ವೇಳೆ ಹೆಣ್ಣು ಭ್ರೂಣ ಪತ್ತೆಯಾದರೆ ಬಳಿಕ ಕೆಲ ದಿನಗಳ ತಾವೇ ಗರ್ಭಪಾತ ಮಾಡಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಈ ಜಾಲವು ಸಕ್ರಿಯವಾಗಿದ್ದು, ಮಂಡ್ಯ-ಪಾಂಡವಪುರ ರಸ್ತೆಯಲ್ಲಿ ಆರೋಪಿ ನವೀನ್ ಸಂಬಂಧಿಕರಿಗೆ ಸೇರಿದ್ದ ಅಲೆಮನೆಯನ್ನೇ ಸ್ಕ್ಯಾನಿಂಗ್ ಸೆಂಟರ್ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸೆರೆಯಾಗಿದ್ದು ಹೇಗೆ?
ಇತ್ತೀಚೆಗೆ ಹಳೇ ಮದ್ರಾಸ್ ರಸ್ತೆ ಕಡೆಯಿಂದ ಗರ್ಭಿಣಿಯನ್ನು ಪರೀಕ್ಷೆಗೆ ಕರೆದೊಯ್ಯಲು ವೀರೇಶ್ ತಂಡ ಬರುವ ಖಚಿತ ಮಾಹಿತಿ ಪಿಐ ಪ್ರಶಾಂತ್ ತಂಡಕ್ಕೆ ಸಿಕ್ಕಿತು. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಹಳೇ ಮದ್ರಾಸ್ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ ದಂಧೆಕೋರರು, ಪೊಲೀಸರನ್ನು ಕಂಡು ಭೀತಿಯಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಶಂಕೆಗೊಂಡ ಪೊಲೀಸರು, ಕೂಡಲೇ ಆ ಕಾರನ್ನು ಬೈಕ್‌ಗಳಲ್ಲಿ ಸ್ಪಲ್ಪದೂರ ಬೆನ್ನಹತ್ತಿ ಹೋಗಿ ತಡೆದಿದ್ದಾರೆ. ಬಳಿಕ ಕಾರಿನಲ್ಲಿದ್ದ ಶಿವಲಿಂಗೇಗೌಡ, ನಯನ್ ಹಾಗೂ ಗರ್ಭಿಣಿಯನ್ನು ಠಾಣೆ ಕರೆತಂದು ವಿಚಾರಿಸಿದಾಗ ಸತ್ಯ ಬಯಲಾಯಿತು ಎಂದು ಮೂಲಗಳು ಹೇಳಿವೆ.
ಈ ಆರೋಪಿಗಳ ಮಾಹಿತಿ ಆಧರಿಸಿ ಮಂಡ್ಯ-ಪಾಂಡಪುರ ರಸ್ತೆಯಲ್ಲಿದ್ದ ಅಲೆಮನೆ ಮೇಲೆ ಪೊಲೀಸರು ಕ್ಷಿಪ್ರ ದಾಳಿ ನಡೆಸಿದಾಗ ಇನ್ನುಳಿದ್ದಿಬ್ಬರು ಸೆರೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭ್ರೂಣ ಪತ್ತೆಗೆ 15-20 ಸಾವಿರ
ಹೆಣ್ಣು ಭ್ರೂಣ ಪತ್ತೆ ಹಚ್ಚಲು ಗರ್ಭಿಣಿಯರಿಂದ 15 ರಿಂದ 20 ಸಾವಿರ ರುಪಾಯಿಯನ್ನು ವೀರೇಶ್ ತಂಡ ವಸೂಲಿ ಮಾಡುತ್ತಿತ್ತು. ಕಳೆದ ಮೂರು ವರ್ಷಗಳಿಂದ ಹಲವು ಮಹಿಳೆಯರಿಗೆ ಗರ್ಭಪಾತ ಮಾಡಿಸಿರುವ ಅನುಮಾನವಿದೆ. ಆರೋಪಿಗಳ ಬಳಿ ಪತ್ತೆಯಾದ ಡೈರಿಯಲ್ಲಿ ಹೆಣ್ಣು ಭ್ರೂಣ ಪರೀಕ್ಷೆಗೆ ಒಳಗಾದ ಕೆಲವರ ಮೊಬೈಲ್ ಸಂಖ್ಯೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತುಮಕೂರಿನಲ್ಲಿ ರೌಡಿಶೀಟರ್ ಪೊಲಾರ್ಡ್ ಬರ್ಬರ ಹತ್ಯೆ
ಗರ್ಭಿಣಿಯರ ವಿಚಾರಣೆ
ದಂಧೆಕೋರರ ಅಡ್ಡೆಯಾದ ಪಾಂಡಪುರ ರಸ್ತೆಯ ಅಲೆಮನೆ ಮೇಲೆ ದಾಳಿ ನಡೆಸಿದಾಗ ಐದಕ್ಕೂ ಹೆಚ್ಚಿನ ಗರ್ಭೀಣಿಯರು ಪತ್ತೆಯಾದರು. ಆ ಮಹಿಳೆಯರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಂಧೆಗೆ ವೈದ್ಯರ ಸಾಥ್
ಈ ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆಗೆ ಕೆಲ ವೈದ್ಯರು ಸಹ ಸಾಥ್ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿರುವ ದಂಧೆಕೋರ ವೀರೇಶ್‌ನ ಚಿಕ್ಕಪ್ಪ ಡಾ। ಮಲ್ಲಿಕಾರ್ಜುನ್ ಸೇರಿದಂತೆ ಕೆಲವು ವೈದ್ಯರಿಗೆ ಹುಡುಕಾಟ ನಡೆದಿದೆ. ಇನ್ನು ಕಳೆದ ವರ್ಷದ ಸಹ ಇದೇ ರೀತಿಯ ಪ್ರಕರಣದಲ್ಲಿ ಡಾ। ಮಲ್ಲಿಕಾರ್ಜುನ್ ಬಂಧಿತನಾಗಿದ್ದು, ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ಆತ ಚಾಳಿ ಮುಂದುವರೆಸಿದ್ದಾನೆ ಎಂದು ಮೂಲಗಳು ಹೇಳಿವೆ.