
ಹುಕ್ಕೇರಿ(ಜ.19): ಕಾರು ಖರೀದಿಸಿ ಮಾರಾಟ ಮಾಡಿ, ಅದೇ ಕಾರನ್ನು ಜಿಪಿಎಸ್ ಮೂಲಕ ಪತ್ತೆ ಮಾಡಿ ಕಳ್ಳತನ ಮಾಡಿ ಮತ್ತೆ ಮಾರಾಟ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಚಾಲಾಕಿ ಆರೋಪಿಗಳನ್ನು ಬಂಧಿಸಿ ಅವರಿಂದ .7.30 ಲಕ್ಷ ಮೌಲ್ಯದ ಕಾರು, 1 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಔರಾಂಗಾಬಾದ್ ರವೀಂದ್ರ ದಾಮೋದರ ರಾಥೋಡ (33), ಗಂಡಹಿಂಗ್ಲಜ್ ತಾಲೂಕಿನ ದುಂಡಗಿಯ ಮಂಜುನಾಥ ಮಡಕೇರಿ (38), ಶಿವಪ್ರಸಾದ ಕೇರಿ (27), ಸೋಮನಾಥ ಪಾಟೀಲ (24) ಬಂಧಿತ ಆರೋಪಿಗಳು.
ಪ್ರಕರಣದ ಪ್ರಮುಖ ಆರೋಪಿ ಮಹಾರಾಷ್ಟ್ರದ ಔರಾಂಗಾಬಾದ್ ರವೀಂದ್ರ ರಾಥೋಡ ಮಹಾರಾಷ್ಟ್ರ ರಾಜ್ಯ ಸಾರಿಗೆಯಲ್ಲಿ ಗುಮಾಸ್ತನಾಗಿದ್ದ. ನಂತರ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕೆಲಸ ಕಳೆದುಕೊಂಡಿದ್ದ ಈತ ಹಳೆಯ ಕಾರುಗಳನ್ನು ಕೊಳ್ಳುವಿಕೆ ವ್ಯವಹಾರ ಪ್ರಾರಂಭಿಸಿದ್ದ. ಬೇರೆಯವರ ಕಾರುಗಳನ್ನು ತಾನು ನಡೆಸುವುದಾಗಿ ಹೇಳಿ ಅವುಗಳನ್ನು ಪಡೆದ ನಂತರ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪ್ರೀತಿ ನಿರಾಕರಿಸಿದ್ದಕ್ಕೆ ಕತ್ತು ಕೊಯ್ದ ರಾಕ್ಷಸ; ಕೊಯ್ದ ಕತ್ತನ್ನು ಹಿಡಿದು 200 ಮೀಟರ್ ಓಡಿದ್ದ ಯುವತಿ!
ಬಳಿಕ ಕಾರು ಎಲ್ಲಿದೆ ಎಂಬುವುದನ್ನು ಜಿಪಿಎಸ್ ಮೂಲಕ ಪತ್ತೆ ಹಚ್ಚಿ ಗಡಹಿಂಗ್ಲಜ್‌ನ ತನ್ನ ಮೂವರು ಸಹಚರರಿಗೆ ಅದು ಇರುವ ಸ್ಥಳ ತಿಳಿಸಿ ಕಳ್ಳತನ ಮಾಡಿಸಿ ಅದೇ ಕಾರನ್ನು ಮತ್ತೆ ಬೇರೆಯವರಿಗೆ ಮಾರಾಟ ಮಾಡಿ ಹಣ ಪಡೆದು ಮೋಸ ಮಾಡುತ್ತಿದ್ದ ಎನ್ನಲಾಗಿದೆ. 2022ರ ಜುಲೈನಲ್ಲಿ ಹುಕ್ಕೇರಿ ತಾಲೂಕಿನ ಹಂಜ್ಯಾನಟ್ಟಿ ಗ್ರಾಮದಲ್ಲಿ ಟೊಯೋಟಾ ಕಂಪನಿಯ ಇಟಿಯೋಸ್‌ಲಿವಾ ಕಾರ್ ಅನ್ನು ಇದೇ ರೀತಿ ಕಳವು ಮಾಡಿಸಿದ್ದ. ಈ ಕುರಿತು ಕಾರಿನ ಮಾಲೀಕರು ಹುಕ್ಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಬೆನ್ನುಬಿದ್ದ ಹುಕ್ಕೇರಿ ಪೊಲೀಸರು, ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆ ಪಿಐ ಅವರ ನೇತೃತ್ವದ ತಂಡ ಮಹಾರಾಷ್ಟ್ರದ ಗಡಹಿಂಗ್ಲಜ್, ಕೊಲ್ಲಾಪುರ, ಪುಣೆ, ನಾಸಿಕ್, ಔರಂಗಾಬಾದ್ ಹಾಗೂ ಪಂಡರಾಪುರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿತರು, ಕಳುವಾದ ಕಾರು ಹಾಗೂ ಕಳುವಿಗೆ ಬಳಸಿದ 1 ಮೋಟರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ