ಮಕ್ಕಳ ಬ್ಯಾಗಲ್ಲಿ ಡ್ರಗ್‌ ಇಟ್ಟು ಆಫ್ರಿಕಾಕ್ಕೆ ಸಾಗಿಸಲು ಯತ್ನ

By Kannadaprabha NewsFirst Published Nov 25, 2020, 7:43 AM IST
Highlights

ಏರ್‌ಪೋರ್ಟ್‌ನಲ್ಲಿ ನಾಲ್ವರ ಸೆರೆ 7 ಕೇಜಿ ಡ್ರಗ್‌ ವಶ| ದೆಹಲಿ ಮೂಲಕ ಬೆಂಗಳೂರಿಗೆ ಡ್ರಗ್ಸ್‌ ತರಿಸಿಕೊಂಡು ದಂಧೆಕೋರರು| ಬಟ್ಟೆ ವ್ಯಾಪಾರದ ಸೋಗಿನಲ್ಲಿ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಪ್ರಜೆಗಳು| 

ಬೆಂಗಳೂರು(ನ.25): ಮಕ್ಕಳ ಬ್ಯಾಗ್‌ನಲ್ಲಿ ಡ್ರಗ್ಸ್‌ ಸಾಗಾಣಿಕೆ ಯತ್ನಿಸಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಬೆಂಗಳೂರು ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.

ಅಮೃತಹಳ್ಳಿಯ ಡಿ.ಶುಕ್ಲಾ, ಜಿ.ಮಾರಿಯಾ, ನೈಜೀರಿಯಾ ಪ್ರಜೆಗಳಾದ ಬಿ.ಒನೊವೊ ಹಾಗೂ ಸಿ.ಒಕ್ವಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ ಸೂಡೊಫೆಡ್ರೀನ್‌ ಹೆಸರಿನ 6.870 ಕೆ.ಜಿ. ಡ್ರಗ್ಸ್‌ ಅನ್ನು ಜಪ್ತಿ ಮಾಡಲಾಗಿದೆ. ಮಕ್ಕಳ ಬ್ಯಾಗ್‌ನಲ್ಲಿ ಡ್ರಗ್ಸ್‌ ಅಡಗಿಸಿ ದಕ್ಷಿಣ ಆಫ್ರಿಕಾಕ್ಕೆ ಸಾಗಿಸಲು ಆರೋಪಿಗಳು ಯೋಜಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಡ್ರಗ್ಸ್‌ ಕೇಸಲ್ಲಿ ಇನ್ನಷ್ಟು ಗಣ್ಯರ ಕುಟುಂಬಕ್ಕೆ ನಡುಕ..!

ನೈಜೀರಿಯಾ ಪ್ರಜೆಗಳು ಬಟ್ಟೆ ವ್ಯಾಪಾರದ ಸೋಗಿನಲ್ಲಿ ನಗರಕ್ಕೆ ಬಂದಿದ್ದರು. ಬಳಿಕ ಹಣದಾಸೆಗೆ ಡ್ರಗ್ಸ್‌ ದಂಧೆಯಲ್ಲಿ ನಿರತರಾಗಿದ್ದ ಅವರು, ಇತ್ತೀಚೆಗೆ ಶುಕ್ಲಾ ಹಾಗೂ ಮಾರಿಯಾ ಅವರನ್ನು ಸಹ ಡ್ರಗ್ಸ್‌ ಮಾರಾಟ ಜಾಲಕ್ಕೆ ಸೆಳೆದಿದ್ದರು. ಭಾರತದಲ್ಲಿ ಸುಗಂಧ ದ್ರವ್ಯಗಳು ಹಾಗೂ ಸ್ವಚ್ಛತಾ ವಸ್ತುಗಳ ತಯಾರಿಕೆಯಲ್ಲಿ ಎಫೆಡ್ರೈನ್‌ ಹಾಗೂ ಸೂಡೊಫೆಡ್ರೀನ್‌ ಅನ್ನು ಬಳಸುತ್ತಾರೆ. ಆದರೆ ಆಫ್ರಿಕಾ ದೇಶಗಳಲ್ಲಿ ಆ ಡ್ರಗ್ಸ್‌ಗಳು ಅಲಭ್ಯವಾಗಿವೆ. ಹೀಗಾಗಿ ಆಫ್ರಿಕಾಕ್ಕೆ ಆರೋಪಿಗಳು ಡ್ರಗ್ಸ್‌ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಮೂಲಕ ಬೆಂಗಳೂರಿಗೆ ತರಿಸಿಕೊಂಡು ಡ್ರಗ್ಸ್‌ ದಂಧೆಕೋರರು, ಮಕ್ಕಳ ಬ್ಯಾಗ್‌ನಲ್ಲಿ ಅಡಗಿಸಿ ಪಾರ್ಸಲ್‌ ಕಳುಹಿಸಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!