2.7 ಕೋಟಿ ನಕಲಿ ಛಾಪಾ ಕಾಗದ ಹಗ​ರ​ಣ: ‘ಛೋ​ಟಾ ತೆಲ​ಗಿ’ ಸೇರಿ 4 ಮಂದಿ ಬಂಧ​ನ

By Kannadaprabha NewsFirst Published Oct 11, 2020, 7:13 AM IST
Highlights

ಸುಳ್ಳು ದಾವೆ ಹೂಡಲು ಇವು​ಗಳ ಬಳ​ಕೆ| ನಕಲಿ ವಿಲ್‌, ನಕಲಿ ಕರಾ​ರು ಪತ್ರ ಸೃಷ್ಟಿಸಿ ವಂಚ​ನೆ| ಆರೋಪಿಗಳಿಂದ 2.71 ಕೋಟಿ ಮೌಲ್ಯದ 443 ನಕಲಿ ಛಾಪಾ ಕಾಗದ ವಶ| ಮೈಸೂರು ಮಹಾರಾಜರ ಕಾಲದ ಛಾಪಕಾಗದ ಪತ್ತೆ| 

ಬೆಂಗಳೂರು(ಅ.11): ದಶಕಗಳ ಹಿಂದೆ ರಾಜ್ಯದಲ್ಲಿ ನಡೆದಿದ್ದ ನೂರಾರು ಕೋಟಿ ನಕಲಿ ಛಾಪಾಕಾಗದ ವಂಚನೆ ಪ್ರಕರಣ ಮತ್ತೊಮ್ಮೆ ನಗರದಲ್ಲಿ ಬೆಳಕಿಗೆ ಬಂದಿದೆ. ನಿಷೇಧಿತ ಛಾಪಾ ಕಾಗದಗಳನ್ನು ನಕಲಿ ಮಾಡಿ ಮುದ್ರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ, ಸರ್ಕಾರಕ್ಕೆ ವಂಚಿಸುತ್ತಿದ್ದ ತಂಡವನ್ನು ಎಸ್‌.ಜೆ.ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2.71 ಕೋಟಿ ರು. ಮೌಲ್ಯದ ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿವೇಕನಗರ ನಿವಾಸಿ ಹುಸ್ಸೈನ್‌ ಮೋದಿ ಬಾಬು ಅಲಿಯಾಸ್‌ ಛೋಟಾ ತೆಲಗಿ (53), ಬಸವೇಶ್ವರ ನಗರ ನಿವಾಸಿ ಹರೀಶ್‌ (55) ಮತ್ತು ಕಂದಾಯ ಭವನ ಬಳಿ ಸ್ಟಾಂಪ್‌ ವೆಂಡರ್‌ ಮತ್ತು ಟೈಪಿಂಗ್‌ ಕೆಲಸ ಮಾಡುತ್ತಿದ್ದ ಶವರ್‌ ಅಲಿಯಾಸ್‌ ಸೀಮಾ (42) ಮತ್ತು ನಜ್ಮಾ ಫಾತಿಮಾ (35) ಅವರನ್ನು ಬಂಧಿಸಲಾಗಿದೆ.

ವಶ ಪಡಿಸಿಕೊಂಡಿರುವ ಛಾಪಾ ಕಾಗದಗಳಿಂದ ನ್ಯಾಯಾಲಯಗಳಲ್ಲಿ ತಕರಾರು ಸುಳ್ಳು ದಾವೆ ಹೂಡಲು, ಸುಳ್ಳು ಜಿಪಿಎ, ವಿಲ್‌ ಹಾಗೂ ಸುಳ್ಳು ಕರಾರು ಪತ್ರಗಳನ್ನು ಮಾಡಿ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಲು ಈ ದಂಧೆಯನ್ನು ಆರೋಪಿಗಳು ಬಳಸಿಕೊಳ್ಳುತ್ತಿದ್ದರು. ಆರೋಪಿಗಳಿಂದ 10, 20, 30 ರು. ನಿಂದ 25 ಸಾವಿರ ರು.ವರೆಗಿನ ಮುಖಬೆಲೆಯ ಒಟ್ಟು 443 ಛಾಪಾ ಕಾಗದಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಪಡಿಸಿಕೊಂಡ ಛಾಪಾಕಾಗದ ಮೌಲ್ಯವು 2.71 ಕೋಟಿ ರು.ನಷ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿವಾಳಿ ಹೆಸರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ; ಹೆಣ್ಣು ಬಾಕ ಸ್ವಾಮಿಗೆ ಸಿಕ್ತು ಸರಿಯಾದ ಶಿಕ್ಷೆ!

ನಗರದ ಎಸ್‌.ಪಿ.ರಸ್ತೆಯಲ್ಲಿನ ಅಮರ್‌ ರೇಡಿಯೋ ಅಂಗಡಿ ಬಳಿ 2002ರಲ್ಲಿ ನಿಷೇಧಿಸಿದ್ದ ಛಾಪಾ ಕಾಗದಗಳನ್ನು ನಕಲಿಯಾಗಿ ತಯಾರಿಸಿ, ಮಾರಾಟ ಮಾಡಲು ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಹುಸ್ಸೈನ್‌ ಮೋದಿ ಬಾಬು ಮತ್ತು ಹರೀಶ್‌ರನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು. ಈ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನಕಲಿ ಛಾಪಾ ಕಾಗದಗಳನ್ನು ಖರೀದಿ ಮಾಡಿ ಮಾರಾಟ ಮಾಡುತ್ತಿದ್ದ ಸೀಮಾ ಮತ್ತು ನಜ್ಮಾ ಫಾತೀಮಾರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳ ನಕಲಿ ಸೀಲ್‌ಗಳು ಪತ್ತೆ:

ನಕಲಿ ಛಾಪಾ ಕಾಗದ ಮಾತ್ರವಲ್ಲದೇ, ಆರೋಪಿ ಹುಸ್ಸೈನ್‌ ಮೋದಿ ಬಾಬು ನಿವಾಸದಲ್ಲಿ ಶೋಧ ನಡೆಸಿದಾಗ ದಿನಾಂಕಗಳನ್ನು ನಮೂದಿಸಿರುವ ಸೀಲು, ತಾಲೂಕು ಉಪ ಖಜಾನೆ ಸೀಲು, ಹಿರಿಯ ಉಪನೋಂದಾಣಿಧಿಕಾರಿ, ಶಿವಾಜಿನಗರ ಮತ್ತು ಹಿರಿಯ ಉಪನೋಂದಣಾಧಿಕಾರಿ, ಕೆಂಗೇರಿ, ಬೊಮ್ಮನಹಳ್ಳಿಯ ಹಿರಿಯ ಉಪನೋಂದಾಣಿಧಿಕಾರಿ, ವಿಶ್ವಭಾರತಿ ಹೌಸಿಂಗ್‌ ಬಿಲ್ಡಿಂಗ್‌ ಕಾರ್ಪೋರೇಷನ್‌ ಸೊಸೈಟಿ ಸೀಲು ಮತ್ತು ಒಂದು ಇಂಕ್‌ ಪ್ಯಾಡ್‌, ಖಾಲಿ ಎ4 ಪೇಪರ್‌ಗಳಿಗೆ ವಾಟರ್‌ ಮಾರ್ಕಿಂಗ್‌ ಮಾಡಿ ನಕಲಿ ಬಾಂಡ್‌ ಪೇಪರ್‌ ಆಗಿ ಪರಿವರ್ತಿಸಲು 10 ಡಿಟಿಪಿ ಅಚ್ಚುಗಳು, ಛಾಪಾ ಕಾಗದಗಳ ಇಮೇಜ್‌ ಅನ್ನು ಸೇವ್‌ ಮಾಡಿಟ್ಟಿದ್ದ ಕಂಪ್ಯೂಟರ್‌ ಮತ್ತು ಪ್ರಿಂಟ್‌ ತೆಗೆಯಲು ಉಪಯೋಗಿಸುತ್ತಿದ್ದ ಕಲರ್‌ ಪ್ರಿಂಟರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹುಸ್ಸೈನ್‌ ಮೋದಿ ‘ಛೋಟಾ ತೆಲಗಿ’ ಎಂದೇ ಖ್ಯಾತಿ

ಬಂಧಿತ ಆರೋಪಿ ಹುಸ್ಸೈನ್‌ ಮೋದಿ ಬಾಬು ಸುಮಾರು ವರ್ಷಗಳಿಂದ ದಂಧೆಯಲ್ಲಿ ತೊಡಿಗಿಸಿಕೊಂಡಿದ್ದು, ‘ಛೋಟಾ ತೆಲಗಿ’ ಎಂದು ಕರೆಸಿಕೊಳ್ಳುತ್ತಿದ್ದ. 2013ರಲ್ಲಿ ಹಲಸೂರು ಗೇಟ್‌ ಪೊಲೀಸರು, ನಕಲಿ ಛಾಪಾ ಕಾಗದ ಮತ್ತು ನಕಲಿ ಸೀಲುಗಳನ್ನು ತಯಾರಿಸುತ್ತಿದ್ದ ಪ್ರಕರಣದಲ್ಲಿ ಬಂಧಿಸಿದ್ದರು. ಮತ್ತೋರ್ವ ಆರೋಪಿ ಹರೀಶ್‌ ಸಿಟಿ ಸಿವಿಲ್‌ ನ್ಯಾಯಾಲಯದ ಬಳಿ ಟೈಪಿಂಗ್‌ ಕೆಲಸ ಮಾಡುತ್ತಿದ್ದ. ಈ ಇಬ್ಬರು ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮತ್ತೆ ಹಳೆಯ ದಂಧೆಯನ್ನು ಮುಂದುವರಿಸಿದ್ದರು ಎಂದಿದ್ದಾರೆ.

ಶವರ್‌ ಅಲಿಯಾಸ್‌ ಸೀಮಾ ಬಿಕಾಂ ಅರ್ಧಕ್ಕೆ ಮೊಟಕುಗೊಳಿಸಿ ಕಳೆದ 16 ವರ್ಷಗಳಿಂದ ಕಂದಾಯ ಭವನದ ಬಳಿ ಟೈಪಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಳು. ನಜ್ಮಾ ಫಾತಿಮಾ 7ನೇ ತರಗತಿವರೆಗೆ ವ್ಯಾಸಂಗ ಮಾಡಿ 13 ವರ್ಷಗಳಿಂದ ಕಂದಾಯ ಭವನ ಬಳಿ ಬಾಡಿಗೆ ಕರಾರು, ಭೋಗ್ಯದ ಕರಾರು ಮತ್ತು ಇತರೆ ದಾಖಲಾತಿಗಳಿಗೆ ನೋಟರಿ ಮಾಡಿಸಿಕೊಡುವ ಬ್ರೋಕರ್‌ ಕೆಲಸ ಮಾಡಿಕೊಂಡಿದ್ದರು. ಆರೋಪಿ ಹುಸ್ಸೈನ್‌ ಮೋದಿ ಬಾಬು ಜತೆ ಸೇರಿ ದಂಧೆ ನಡೆಸುತ್ತಿದ್ದರು ಎಂದು ಹೇಳಿದ್ದಾರೆ.

ಡಿಸಿಪಿ ಅನುಚೇತ್‌ ಮಾರ್ಗದರ್ಶನದಲ್ಲಿ ಹಲಸೂರು ಗೇಟ್‌ ಉಪವಿಭಾಗ ಎಸಿಪಿ ನಜ್ಮಾ ಫಾರೂಖಿ ನೇತೃತ್ವದಲ್ಲಿ, ಎಸ್‌.ಜೆ.ಪಾರ್ಕ್ ಇನ್ಸ್‌ಪೆಕ್ಟರ್‌ ಮಿರ್ಜಾ ಆಲಿ ರಝಾ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ.

ಮೈಸೂರು ಮಹಾರಾಜರ ಕಾಲದ ಛಾಪಕಾಗದ ಪತ್ತೆ!

ನೂರಾರು ವರ್ಷಗಳ ಹಿಂದೆ ಮೈಸೂರು ಮಹಾರಾಜರು ಬಳಕೆ ಮಾಡುತ್ತಿದ್ದ ಛಾಪಾ ಕಾಗದದ ಮಾದರಿಯಲ್ಲಿಯೇ ನಕಲಿ ಛಾಪಾಕಾಗದಗಳು ಆರೋಪಿಗಳ ಬಳಿ ಪತ್ತೆಯಾಗಿವೆ. ಆಸ್ತಿ ಲಪಾಟಿಸುವವರಿಗೆ, ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದರೆ ಅವುಗಳನ್ನು ಬಳಕೆ ಮಾಡಲು ಮೈಸೂರು ಮಹಾರಾಜರ ಕಾಲದ ಛಾಪಾಕಾಗದಗಳು ಉಪಯೋಗಿಸಲಾಗುತ್ತಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಳಿ ನಾಲ್ಕಾಣೆ, ಎಂಟಾಣೆ ಬೆಲೆಯ ನಕಲಿ ಛಾಪಾ ಕಾಗದಗಳು ಪತ್ತೆಯಾಗಿವೆ.
 

click me!