* ಐವರನ್ನು ಬಂಧಿಸಿದ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು
* ಮಗು ಮಾರಾಟ ಪ್ರಕರಣ ತನಿಖೆ ಚುರುಕು
* ಹತ್ಯೆ ಮಾಡಿ ಅಪಘಾತವಾಗಿದೆ ಎಂದಿದ್ದ ಕೊಲೆಗಡುಕರು
ವಿಜಯಪುರ(ಸೆ.18): ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ ಪ್ರಕರಣವನ್ನು ಭೇದಿಸಿದ ವಿಜಯಪುರ ಗ್ರಾಮೀಣ ಪೊಲೀಸರು, ಈ ಸಂಬಂಧ ಐವರು ಸುಪಾರಿ ಹಂತಕರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ ತಿಳಿಸಿದರು.
ದಂಧರಗಿಯ ಬನ್ನೆಪ್ಪ ಹನಮಪ್ಪ ಬಿರಾದಾರ (41), ಸುರೇಶ ಕಲ್ಲಪ್ಪ ಅವಟಿ (34), ಲೋಗಾವಿಯ ಬೀರಪ್ಪ ಸದಾಶಿವ ಗೂಗವಾಡ (22) ದದಾಮಟ್ಟಿಯ ಕಿರಣ ಉಮೇಶ ಅಸ್ಕಿ (23)ಹಾಗೂ ತೊರವಿಯ ರಾಜು ಕಿಶೋರ ಆಸಂಗಿ (23) ಬಂಧಿತ ಸುಪಾರಿ ಹಂತಕರು ಎಂದು ಅವರು ಮಾಹಿತಿ ನೀಡಿದರು.
undefined
ಶುಕ್ರವಾರ ಜಿಲ್ಲಾ ಪೊಲೀಸ್ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 26.8.21ರಂದು ಇಟ್ಟಂಗಿಹಾಳ ಕ್ರಾಸ್ಹತ್ತಿರ ದಂಧರಗಿಯ ಅನಿಲ ಮಹಾದೇವ ಬಿರಾದಾರ (32) ಎಂಬಾತನ ಶವ ಮೋಟಾರ್ ಸೈಕಲ್ ಸಮೇತ ರಸ್ತೆ ಬದಿ ಬಿದ್ದಿತ್ತು. ಮೃತನ ಪತ್ನಿ ಮಹಾದೇವಿ ಬಿರಾದಾರ ರಸ್ತೆ ಅಪಘಾತದಲ್ಲಿ ನನ್ನ ಗಂಡ ಮೃತಪಟ್ಟಿದ್ದಾನೆ ಎಂದು ದೂರು ನೀಡಿದ್ದಳು. ತೀವ್ರ ತನಿಖೆ ನಂತರ ಇದು ಅಪಘಾತವಲ್ಲ. ಕೊಲೆ ಪ್ರಕರಣ ಎಂಬುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ವಿಜಯಪುರದಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯ..?
ಹತ್ಯೆ ಮಾಡಿ ಅಪಘಾತವಾಗಿದೆ ಎಂದ್ರು:
ಮೃತ ಅನಿಲ ಬಿರಾದಾರ ತಮ್ಮ ಜಮೀನಿನಲ್ಲಿನ ಬಾವಿಯ ನೀರಿನ ಬಾಂದಿನ ಸಲುವಾಗಿ ಅನಿಲ ಅವಟಿ ಜತೆಗೆ ವಿವಾದವಿತ್ತು. ಮೃತ ಅನಿಲ ಮತ್ತು ಅನಿಲ ಅವಟಿ ನಡುವೆ ಗ್ರಾಪಂ ಚುನಾವಣೆಯಿಂದಲೂ ತಕರಾರು ಇತ್ತು. ಇವೆಲ್ಲ ಕಾರಣಗಳಿಂದ ಅಪ್ಪು ಬಿರಾದಾರ ಮತ್ತು ಅನಿಲ ಅವಟಿ ಸೇರಿಕೊಂಡು ಅನಿಲ ಬಿರಾದಾರ ಹತ್ಯೆಗೆ ನಿರ್ಧರಿಸಿ, ನಾಲ್ವರು ಆರೋಪಿಗಳಿಗೆ 2.50 ಲಕ್ಷ ಸುಪಾರಿಗೆ ನೀಡಿದ್ದಾರೆ.
ಅದರಂತೆ ಆರೋಪಿಗಳು ಅನಿಲ ಬಿರಾದಾರನಿಗೆ ದಾಬಾದಲ್ಲಿ ಮದ್ಯ ಕುಡಿಸಿ ಕಬ್ಬಿಣದ ಬೆಡಗಿನಿಂದ ಅನಿಲನ ತಲೆಗೆ ಹೊಡೆದು ಗುಪ್ತಾಂಗಕ್ಕೆ ಒದ್ದು ಹತ್ಯೆ ಮಾಡಿದ್ದಾರೆ. ಅಪಘಾತದಿಂದ ಆತನ ಸಾವು ಸಂಭವಿಸಿದೆ ಎಂಬುದನ್ನು ಬಿಂಬಿಸಲು ಆತನ ಮೋಟಾರ್ ಸೈಕಲ್ ಸಮೇತ ರಸ್ತೆ ಬದಿ ಹೆಣವನ್ನು ಎಸೆಯಲಾಗಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ಅವರು ವಿವರಿಸಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಗು ಮಾರಾಟ ಪ್ರಕರಣ ತನಿಖೆ ಚುರುಕು:
ಇದೇ ಸಂದರ್ಭದಲ್ಲಿ ಮಗು ಮಾರಾಟ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಆನಂದಕುಮಾರ ಅವರು, ಮಗುವಿನ ತಂದೆ ತಾಯಿಗೆ ಪೊಲೀಸರು ಕೇಳುವ ಪ್ರಶ್ನೆಗೆ ಆಗೊಂದು, ಈಗೊಂದು ಉತ್ತರ ನೀಡುತ್ತಿದ್ದಾರೆ. ಹೀಗಾಗಿ ತನಿಖೆಗೆ ಸ್ವಲ್ಪ ಅಡಚಣೆಯಾಗುತ್ತಿದೆ. ಮಗುವಿನ ತೂಕ ಸಹಿತ 1.6 ಕೆ.ಜಿ ಇರುವುದರಿಂದ ಮಗು ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯಕ್ಕೆ ಈ ಪ್ರಕರಣ ತನಿಖಾ ಹಂತದಲ್ಲಿದೆ. ಹಾಗಾಗಿ ಈ ಸಂಬಂಧ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಮಗು ಮಾರಾಟ ಪ್ರಕರಣದ ತನಿಖೆಗೆ 3 ತಂಡಗಳನ್ನು ರಚಿಸಲಾಗಿದ್ದು, ಸಂಪೂರ್ಣ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದರು.