
ಬೆಂಗಳೂರು(ಡಿ.24): ಟ್ರಾವೆಲ್ಸ್ ಏಜೆನ್ಸಿಗಳಲ್ಲಿ ಬಾಡಿಗೆ ನೆಪದಲ್ಲಿ ವಾಹನಗಳನ್ನು ಪಡೆದು ಬಳಿಕ ಮಾರಾಟ ಮಾಡುತ್ತಿದ್ದ ಐವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಆರೀಫ್, ಕೌಸ್ತುಭ, ಚಂದ್ರಾಲೇಔಟ್‌ನ ಸೈಯದ್ ಅರ್ಮಾನ್, ಸುಲೇಮಾನ್ ಪಾಷಾ ಹಾಗೂ ಚಾಮರಾಜಪೇಟೆಯ ತೌಸಿಫ್ ಬಂಧಿತರಾಗಿದ್ದು, ಆರೋಪಿಗಳಿಂದ 32 ಲಕ್ಷ ಮೌಲ್ಯದ 1 ಫಾರ್ಚೂನರ್ ಕಾರು ಮತ್ತು ವಿವಿಧ ಕಂಪನಿಯ 13 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಗೋವಾಕ್ಕೆ ಪ್ರವಾಸ ಹೋಗಿದ್ದಾಗ ಸ್ಥಳೀಯ ಟ್ರಾವೆಲ್ಸ್‌ನಿಂದ ಫಾರ್ಚೂನರ್ ಕಾರನ್ನು ಬಾಡಿಗೆಗೆ ಪಡೆದ ಆರೋಪಿಗಳು, ಬಳಿಕ ಅದನ್ನು ಬೆಳಗಾವಿಗೆ ತಂದು ನಂಬರ್ ಪ್ಲೇಟ್ ಬದಲಾಯಿಸಿದ್ದರು. ಹೀಗಿರುವಾಗ ವ್ಯವಹಾರ ಸಲುವಾಗಿ ಬೆಳಗಾವಿಗೆ ಭೇಟಿಗೆ ನೀಡಿದ್ದಾಗ ಮತ್ತಿಕೆರೆಯ ಗಿರೀಶ್ ಅವರಿಗೆ ಆರೀಫ್ ಮತ್ತು ಕೌಸ್ತುಭ ಪರಿಚಯವಾಗಿದೆ. ಸೆಕೆಂಡ್ ಹ್ಯಾಂಡ್ ಕಾರು ಇದ್ದರೆ ಹೇಳಿ ಖರೀದಿಸುವೆ ಎಂದು ಗಿರೀಶ್ ಹೇಳಿದ್ದರು.
ಗಾಂಜಾ ಸಾಗಾಟಕ್ಕೆಂದೇ ಐಷಾರಾಮಿ ಕಾರು ಖರೀದಿಸಿದ್ದ ಖದೀಮರು..!
ಡಿ.20ರ ಮಧ್ಯಾಹ್ನ 12.30ಕ್ಕೆ ಗಿರೀಶ್ ಅವರಿಗೆ ಕರೆ ಮಾಡಿದ ಆರೋಪಿಗಳು, ಫಾರ್ಚೂನರ್ ಕಾರು .5 ಲಕ್ಷಕ್ಕೆ ಮಾರಾಟಕ್ಕಿದೆ ಎಂದು ತಿಳಿಸಿ .5 ಸಾವಿರ ಮುಂಗಡ ಹಣ ಪಡೆದಿದ್ದರು. ಆನಂತರ ಮತ್ತಿಕೆರೆಯ ಗಿರೀಶ್ ಅವರ ಬಳಿ ಫಾರ್ಚೂನರ್ ಕಾರು ತಂದು ಟ್ರೈಯಲ್ ನೋಡಲು ಕೊಟ್ಟಿದ್ದರು. ಕಾರನ್ನು ಓಡಿಸಿ ನೋಡಿದ ಗಿರೀಶ್, ದಾಖಲೆ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಶಂಕೆಗೊಂಡ ಗಿರೀಶ್, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ನಂತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈಕ್‌ಗಳಿಗೆ ಉತ್ತಮ ಬೆಲೆ ನೆಪದಲ್ಲಿ ವಂಚನೆ
ಈ ಪ್ರಕರಣದಲ್ಲಿ ಆರೋಪಿಗಳಿಂದ 13 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಬೈಕ್‌ಗಳ ಮಾಲೀಕರಿಗೆ ನಿಮ್ಮ ವಾಹನಕ್ಕೆ ಒಳ್ಳೆಯ ಬೆಲೆ ಕೊಡಿಸುತ್ತೇವೆ ಎಂದು ನಂಬಿಸಿ ಅವರು ವಂಚಿಸಿದ್ದರು. ಬೈಕ್‌ಗೆ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದರು. ಗೋವಾ, ಬೆಳಗಾವಿ, ಕೋಲಾರ, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ