ಉದ್ಯೋಗ ಕೊಡಿಸೋದಾಗಿ ಹಣ ಪಡೆದು ವಂಚನೆ: ಆಂಧ್ರ ಗ್ಯಾಂಗ್‌ ಅಂದರ್‌

By Kannadaprabha NewsFirst Published Nov 18, 2020, 8:30 AM IST
Highlights

ಲಾಕ್‌ಡೌನ್‌ನಲ್ಲಿ ಕೆಲಸ ಕೊಂಡವರಿಗೆ ಕೆಲಸ ಕೊಡುಸುವುದಾಗಿ ವಂಚನೆ| 500ಕ್ಕೂ ಅಧಿಕ ಮಂದಿಗೆ ವಂಚಿಸಿದ ಖದೀಮರು| ಸಂತ್ರಸ್ತರಿಂದ 20 ಸಾವಿರದಿಂದ 1 ಲಕ್ಷ ವರೆಗೆ ಶುಲ್ಕ ರೂಪದಲ್ಲಿ ಹಣ ವಸೂಲಿ| ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ ಸಂತ್ರಸ್ತರು| 

ಬೆಂಗಳೂರು(ನ.18): ಲಾಕ್‌ಡೌನ್‌ನಲ್ಲಿ ವೇಳೆ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸಿದ್ದ ಆಂಧ್ರಪ್ರದೇಶದ ತಂಡವೊಂದು ಸಂಪಿಗೆಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದೆ.

ಆಂಧ್ರಪ್ರದೇಶ ಮೂಲದ ಸಾಯಿ ಕಲ್ಯಾಣ್‌ ರಾಮ್‌, ದಿಲೀಪ್‌ ಕುಮಾರ್‌, ವಿಶ್ವನಾಥ್‌, ಪತ್ತಿ ಶಿವ ಹಾಗೂ ಬೆಂಗಳೂರಿನ ಶ್ರೀಧರ್‌ ಕೊಲ್ಲೂರು ಬಂಧಿತರು. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಪ್ರಕರಣದ ಇತರ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ.

ಕೆಲ ತಿಂಗಳ ಹಿಂದೆ ಶಿವಾಜಿನಗರದ ಯೂನಿಯನ್‌ ಸ್ಟ್ರೀಟ್‌ ಇನ್‌ಫೆಂಟ್ರಿ ರಸ್ತೆಯಲ್ಲಿ ರೆಂಟ್‌ ಎ ಡೆಸ್ಕ್‌ ಕಟ್ಟಡದಲ್ಲಿ ಕೊಠಡಿ ಬಾಡಿಗೆ ಪಡೆದು ‘ಎಚ್‌ಆರ್‌ ಇಂಡಿಯಾ ಸವೀರ್‍ಸ್‌’ ಎಂಬ ಕಚೇರಿಯನ್ನು ಈ ತಂಡ ಆರಂಭಿಸಿತ್ತು. ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಸಂಪರ್ಕಿಸಿದ ಆರೋಪಿಗಳು, ಆ ಕಂಪನಿಗಳಿಗೆ ಸಲ್ಲಿಕೆಯಾಗಿದ್ದ ಉದ್ಯೋಗಾಂಕ್ಷಿಗಳ ವಿವರ ಪಡೆಯುತ್ತಿದ್ದರು. ಅದರಲ್ಲಿರುವ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ತಾವು ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದರು.

ಕೊನೆಗೂ ಸಿಕ್ಕಿಬಿದ್ದ ಸೀರೆಕಳ್ಳಿ, ವಂಚಿಸಿದ್ದು ಒಂದೆರಡಲ್ಲ 120  ಸೀರೆ!

ಸಂತ್ರಸ್ತರಿಂದ 20 ಸಾವಿರದಿಂದ 1 ಲಕ್ಷ ವರೆಗೆ ಶುಲ್ಕ ರೂಪದಲ್ಲಿ ಹಣ ವಸೂಲಿ ಮಾಡಿದ್ದರು. ಆನ್‌ಲೈನ್‌ನಲ್ಲಿ ಸಂದರ್ಶನ ನಡೆಸಿ ಕೆಲಸ ನೇಮಕಾತಿ ಪ್ರತಿಯನ್ನು ಕೊಟ್ಟು ತಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿಕೊಂಡು ಟೋಪಿ ಹಾಕುತ್ತಿದ್ದರು. ಹೀಗೆ ನೇಮಕಾತಿ ಪ್ರಮಾಣ ಪತ್ರ ಪಡೆದವರ ಪೈಕಿ ಕೆಲವರು ನ.1ರಂದು ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಇರುವ ರೀಗಸ್‌ ಈ ವನ್‌ ಬ್ಲಾಕ್‌ ಮಾನ್ಯತಾ ಎಂಬೆಸಿಗೆ ಸಂದರ್ಶನಕ್ಕೆ ತೆರಳಿದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಳಿಕ ಸಂಪಿಗೆಹಳ್ಳಿ ಠಾಣೆಯಲ್ಲಿ ಸಂತ್ರಸ್ತರು ದೂರು ದಾಖಲಿಸಿದ್ದರು. ಅದನ್ವಯ ಆರೋಪಿಗಳನ್ನು ಬಂಧಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ 500ಕ್ಕೂ ಅಧಿಕ ಮಂದಿಗೆ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
 

click me!