ಮದುವೆಯಾಗಲು ವಿವಾಹ ನೊಂದಣಿಗೆ ಕಚೇರಿಗೆ ತೆರಳುತ್ತಿದ್ದ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ಬಳಿಕ ಕಾಫಿನಾಡಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಚಿಕ್ಕಮಗಳೂರು, (ಸೆಪ್ಟೆಂಬರ್.14): ಅನ್ಯಕೋಮಿನ ಯುವಕ ಹಾಗೂ ಯುವತಿ ವಿವಾಹ ನೊಂದಣಿಗೆ ತೆರಳಿದ್ದ ವೇಳೆ ಹಿಂದೂ ಸಂಘಟನೆ ಕಾರ್ಯಕರ್ಯರು ಲವ್ ಜಿಹಾದ್ ಆರೋಪ ಮಾಡಿ ಅಡ್ಡಿಪಡಿಸಿದ್ದಾರೆ.
ಹಿನ್ನೆಲೆಯಲ್ಲಿ ಪ್ರಕರಣ ಠಾಣೆ ಮೆಟ್ಟಿಲೇರಿ ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಹಿಂದೂ ಕಾರ್ಯಕರ್ತರ ವಿರುದ್ಧ ನೈತಿಕ ಪೊಲೀಸ್ ಗಿರಿ ಆರೋಪದ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಲವ್ ಜಿಹಾದ್ ಆರೋಪ
ಚಿಕ್ಕಮಗಳೂರು ತಾಲ್ಲೂಕಿನ ದಾಸರಳ್ಳಿಯ ಲಕ್ಷೀಪುರ ಗ್ರಾಮದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಇಬ್ಬರು ಇಂದು ವಿವಾಹ ನೊಂದಣಿಗೆಂದು ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ವಿಚಾರ ತಿಳಿದ ಹಿಂದೂ ಸಂಘಟನೆಯ ಕೆಲವು ಯುವಕರು ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದು ತಂದಿದ್ದಾರೆ.
Love Marriage: ಇಶಿಕಾ ಆದ ಇಕ್ರಾ; ಮದುವೆಗಾಗಿ ಸನಾತನ ಧರ್ಮಕ್ಕೆ ಸೇರಿದ ಮುಸ್ಲಿಂ ಯುವತಿ..!
ಮತ್ತೊಂದೆಡೆ ಈ ವಿಷಯ ತಿಳಿಯುತ್ತಿದ್ದಂತೆಯೇ ಎಸ್ ಡಿ ಪಿ ಐ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಠಾಣೆಗೆ ಧಾವಿಸಿ ಯುವಕ, ಯುವತಿ ಇಬ್ಬರೂ ವಯಸ್ಕರಾಗಿರುವುದರಿಂದ ವಿವಾಹ ನೊಂದಣಿಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ವಲ್ಪ ಸಮಯದಲ್ಲೇ ಬಿಜೆಪಿಯ ಹಲವು ಮುಖಂಡರು ಠಾಣೆ ಬಳಿ ಜಮಾಯಿಸಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಸ್ಪಿ ಉಮಾ ಪ್ರಶಾಂತ್ ಅವರು ಠಾಣೆಗೆ ಭೇಟಿ ನೀಡಿ ಯುವತಿಯನ್ನು ವಿಚಾರಣೆಗೊಳಪಡಿಸಿದರು. ಈ ವೇಳೆ ಯುವಕನನ್ನು ಗ್ರಾಮಾಂತರ ಠಾಣೆಗೆ ಕರೆದೊಯ್ಯಲಾಯಿತು.
ನಾಲ್ವರ ವಿರುದ್ದ ಕೇಸ್ ಬುಕ್
ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್ಪಿ ಉಮಾ ಪ್ರಶಾಂತ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನಿಂದ ವಿವರವಾದ ದೂರು ಪಡೆದಿದ್ದು ನಾಲ್ಕು ಮಂದಿ ವಿರುದ್ಧ ನೈತಿಕ ಪೊಲೀಸ್ ಗಿರಿ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಮದುವೆಯಾಗದಂತೆ ತಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಯುವಕ, ಯುವತಿ ಇಬ್ಬರೂ ವಯಸ್ಕರಾಗಿದ್ದಾರೆ.ಸಂಘಟನೆಯೊಂದರ ಪ್ರಮುಖ ಮುಖಂಡ ಶ್ಯಾಮ್ ಸೇರಿದಂತೆ ನಾಲ್ಕು ಜನರ ವಿರುದ್ದ ದೂರು ದಾಖಲಾಗಿದೆ.ಈ ಪ್ರಕರಣದ ಬಗ್ಗೆ ಪರಿಶೀಲಿಸಿ ನಿಸ್ಪಕ್ಷಪಾತ ಕ್ರಮ ಕೈಗೊಳ್ಳುವಂತೆ ಒಂದು ಸಂಘಟನೆಯವರು ಒತ್ತಾಯಿಸಿದ್ದಾರೆ ಎಂದರು.
ಠಾಣೆ ಮುಂದೆ ತಾಯಿ ಆಕ್ರಂದನ
ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಸಂಜೆ ಆಗಮಿಸಿದ ಯುವತಿಯ ತಾಯಿ ಶೋಭಾ ಠಾಣೆ ಮುಂದೆ ಕಣ್ಣೀರ ಹಾಕಿದ್ರು.ಮಗಳು ಪೊಲೀಸ್ ಜೀಪ್ ಹತ್ತುವಾಗ ಕಣ್ಣೀರು ಹಾಕಿದ ತಾಯಿ ನನ್ನ ಮಗಳನ್ನ ನೋಡಲು, ಮಾತನಾಡಲು ಬಿಡಿ ಎಂದು ಗೋಗರೆದ್ರು.ತದನಂತರ ಪೊಲೀಸ್ರು ತಾಯಿಯನ್ನು ಮಗಳು ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.
ಕೆಲ ಕಾಲ ತಾಯಿ ಮಗಳು ಮಾತುಕತೆ ನಡೆಸಿದ ಬಳಿಕ ಠಾಣೆಯಿಂದ ಹೊರಬಂದಂತಹ ತಾಯಿ ಶೋಭಾ ಮಾಧ್ಯಮಗಳೊಂದಿಗೆ ಮಾತನಾಡಿ ನನ್ನ ಮಗಳೇ ಎಲ್ಲಾ ಕೆಲ್ಸ ಮಾಡುತ್ತಿದ್ದಾಳೆ. ನನ್ನ ದೊಡ್ಡ ಮಗಳು ಕೇಳಿದಾಗಲೂ ನಾನು ಬರುವುದಿಲ್ಲ ಎಂದು ಹೇಳಿದ್ದಾಳೆ. ನನ್ನ ಮಗಳು ನನ್ನ ಮನೆಗೆ ಬರದಿದ್ರೂ ಪರವಾಗಿಲ್ಲ ಅವರ ಅತ್ತೆ, ಮಾವರನ್ನ ಚೆನ್ನಾಗಿ ನೋಡಿಕೊಳ್ಳಲಿ. ಅವಳನ್ನ ಚೆನ್ನಾಗಿ ನೋಡಿಕೊಂಡರೆ ಸಾಕು ನನ್ನ ಮಗಳು ಮದುವೆಯಾಗುವುದು ನನಗೂ ಇಷ್ಟ, ನನ್ನ ಮಗಳು, ಅಳಿಯ ಇಬ್ಬರಿಗೂ ಯಾವುದೇ ತೊಂದರೆಯಾಗದಂತೆ ಲಕ್ಷ್ಮೀಪುರಕ್ಕೆ ಬಂದರೆ ಸಾಕು ಎಂದು ಪ್ರತಿಕ್ರಿಯೆ ನೀಡಿದರು.