ವಿಮಾನದೊಳಗೆ ಸಿಗರೇಟ್‌ ಸೇದಿದ್ದ ಬಾಡಿ ಬಿಲ್ಡರ್‌ ವಿರುದ್ಧ ಕೇಸ್‌ ದಾಖಲು

By BK AshwinFirst Published Aug 16, 2022, 5:04 PM IST
Highlights

ವಿಮಾನದಲ್ಲಿ ಲೈಟರ್‌ ಹಚ್ಚಿ ಸಿಗರೇಟ್‌ ಸೇದಿದ ವಿಡಿಯೋವೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಈ ಸಂಬಂಧ ಸೋಷಿಯಲ್ ಮೀಡಿಯಾ ಸ್ಟಾರ್‌ ಹಾಗೂ ಬಾಡಿ ಬಿಲ್ಡರ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ. 

ಸ್ಪೈಸ್‌ಜೆಟ್‌ ವಿಮಾನದಲ್ಲಿ ಸಿಗರೇಟ್‌ ಸೇದಿ ಅದರ ವಿಡಿಯೋವನ್ನೂ ಅಪ್ಲೋಡ್‌ ಮಾಡಿದ್ದ ಸೋಷಿಯಲ್‌ ಮೀಡಿಯಾ ಸ್ಟಾರ್‌ ವಿರುದ್ಧ ಕೇಸ್‌ ದಾಖಲಾಗಿದೆ. ಕಳೆದ ವಾರ ಆ ಘಟನೆಯ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್‌ ಮಾಡಿದ್ದರು. ಈಗ ಬಾಬಿ ಕಟಾರಿಯಾ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಾಗಿ ದೆಹಲಿ ಪೊಲೀಸ್‌ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌, ವಿಡಿಯೋ ವೈರಲ್‌ ಮಾಡಲು ನೆಟ್ಟಿಗರು ನಾನಾ ಸಾಹಸಗಳನ್ನು ಮಾಡುತ್ತಾರೆ. ಅದೇ ರೀತಿ, ಕೆಲವು ವಿಡಿಯೋಗಳಿಂದ ಸ್ಟಾರ್‌ಗಳಾದ ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳು ಮತ್ತೆ ಮತ್ತೆ ಸುದ್ದಿಯಾಗಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇದೇ ರೀತಿ, ವಿಮಾನದಲ್ಲಿ ಸಿಗರೇಟ್ ಸೇದಿದ ಸೋಷಿಯಲ್ ಮೀಡಿಯಾ ಸ್ಟಾರ್‌ವೊಬ್ಬರ ವಿಡಿಯೋ ವೈರಲ್‌ ಆಗಿದ್ದು, ಈಗ ಅವರ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

ಇದನ್ನು ಓದಿ: ವಿಮಾನದಲ್ಲಿ ಸಿಗರೇಟ್‌ ಸೇದಿದ ಸೋಷಿಯಲ್‌ ಮೀಡಿಯಾ ಸ್ಟಾರ್‌: ವಿಡಿಯೋ ವೈರಲ್..!

ಕಟಾರಿಯಾ ವಿರುದ್ಧ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಆಗಸ್ಟ್‌ 13 ರಂದು ಕೇಸ್‌ ದಾಖಲಿಸಲಾಗಿತ್ತು. ಸ್ಪೈಸ್‌ಜೆಟ್‌ನ ಕಾನೂನು ಮತ್ತು ಕಂಪನಿ ವ್ಯವಹಾರಗಳ ವ್ಯವಸ್ಥಾಪಕ ಜಸ್ಬೀರ್ ಸಿಂಗ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಭದ್ರತೆ ಮತ್ತು ಸುರಕ್ಷತಾ ಕ್ರಮಗಳ ಉಲ್ಲಂಘನೆಯ ಆರೋಪದ ಮೇಲೆ ಕಟಾರಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

2022 ರ ಜನವರಿಯಲ್ಲಿ ದುಬೈನಿಂದ ದೆಹಲಿಗೆ ಬಂದ SG 706 ಸ್ಪೈಸ್‌ಜೆಟ್ ವಿಮಾನದಲ್ಲಿ ಬಲ್ವಂತ್ ಕಟಾರಿಯಾ ಅಲಿಯಾಸ್ ಬಾಬಿ ಕಟಾರಿಯಾ ಲೈಟರ್‌ನೊಂದಿಗೆ ಮತ್ತು ಸಿಗರೇಟ್ ಸೇದುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಜಸ್ಬೀರ್ ಸಿಂಗ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಬಾಡಿಬಿಲ್ಡರ್ ಆಗಿರುವ ಕಟಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ 6.3 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಈ ದೂರಿನ ಆಧಾರದ ಮೇಲೆ ಸೋಮವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸುರಕ್ಷತೆ ಕಾಯ್ದೆ 1982 ರ ವಿರುದ್ಧ ಕಾನೂನುಬಾಹಿರ ಕಾಯ್ದೆಗಳ ನಿಗ್ರಹದ ಸೆಕ್ಷನ್ 3(1)(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದೂ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಅತ್ತೆಗೆ ಗುಂಡು ಹಾರಿಸಲು ಹೋಗಿ ಜೈಲು ಕಂಬಿ ಎಣಿಸುತ್ತಿರುವ ಭೂಪ..!

ಇನ್ನೊಂದೆಡೆ, ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್‌ ಅದ ಬೆನ್ನಲ್ಲೇ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ತನಿಖೆಗೆ ಆದೇಶಿಸಿದ್ದರು ಹಾಗೂ ಬಾಬಿ ಕಟಾರಿಯಾ ವಿರುದ್ಧ ಸೂಕ್ತ ಕ್ರಮದ ಭರವಸೆಯನ್ನೂ ನೀಡಿದ್ದರು. ಈ ಸಂಬಂಧ ಮಾಹಿತಿ ನೀಡಿದ್ದ ಸ್ಪೈಸ್ ಜೆಟ್‌ ಏರ್‌ಲೈನ್ಸ್‌ ವಕ್ತಾರ ‘’ಈ ವಿಡಿಯೋವನ್ನು ಜನವರಿ 20, 2022 ರಂದು ದುಬೈನಿಂದ ದೆಹಲಿಗೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿರುವ SG 706 ವಿಮಾನವನ್ನು ಹತ್ತುವಾಗ ಚಿತ್ರೀಕರಿಸಲಾಗಿದೆ. ಆರೋಪಿ ಪ್ರಯಾಣಿಕ ಮತ್ತು ಅವರ ಜತೆಗಿದ್ದ ಸಹ ಪ್ರಯಾಣಿಕರು 21ನೇ ಸಾಲಿನಲ್ಲಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ವೇಳೆ ಕ್ಯಾಬಿನ್ ಸಿಬ್ಬಂದಿ ಆನ್-ಬೋರ್ಡಿಂಗ್ ಕಾರ್ಯವಿಧಾನವನ್ನು ಪೂರ್ಣಗೊಳಿಸುವುದರಲ್ಲಿ ನಿರತರಾಗಿದ್ದರು. ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಈ ಕೃತ್ಯದ ಬಗ್ಗೆ ತಿಳಿದಿರಲಿಲ್ಲ. ಈ ವಿಷಯವು ಜನವರಿ 24, 2022 ರಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಏರ್‌ಲೈನ್‌ನ ಗಮನಕ್ಕೆ ಬಂದಿತು’’ ಎಂದು ಹೇಳಿದ್ದರು. 

ಹಾಗೂ, “ವಿಡಿಯೋ ನಮ್ಮ ಗಮನಕ್ಕೆ ಬಂದ ತಕ್ಷಣ 2022 ರ ಜನವರಿಯಲ್ಲಿ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲಾಯಿತು ಮತ್ತು ಗುರುಗ್ರಾಮ್‌ನಲ್ಲಿ ನಮ್ಮ ಕೇಂದ್ರ ಕಚೇರಿ ಇರುವುದರಿಂದ ವಿಮಾನಯಾನ ಸಂಸ್ಥೆಯು ಗುರುಗ್ರಾಮ್‌ನ ಉದ್ಯೋಗ್ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಆದರೆ, ಆ ಪೊಲೀಸ್ ಅಧಿಕಾರಿಗಳು, ಇದು ನಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ನಮಗೆ ಆಗಸ್ಟ್ 12, 2022 ರಂದು ಸಲಹೆ ನೀಡಲಾಯಿತು ಮತ್ತು ಅದರ ಪ್ರಕಾರ ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆ’’ ಎಂದು ಅವರು ಹೇಳಿದರು.
 ಸಾಮಾನ್ಯವಾಗಿ ಪ್ರಯಾಣಿಕರು ವಿಮಾನದೊಳಗೆ ಲೈಟರ್ ಮತ್ತು ಸಿಗರೇಟ್‌ ಸಾಗಿಸಲು ಅನುಮತಿಸಲಾಗುವುದಿಲ್ಲ. ಆದರೂ, ಸಾಮಾಜಿಕ ಜಾಲತಾಣ ಸ್ಟಾರ್‌ ವಿಮಾನದೊಳಗೆ ಸಿಗರೇಟ್‌ ಸೇದಿರುವ ವಿಡಿಯೋ ವೈರಲ್‌ ಆಗಿತ್ತು. 

click me!