
ಮೈಸೂರು (ಅ.8): ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಆಟೋದಲ್ಲಿ ಬಂದ ದುಷ್ಕರ್ಮಿಗಳು ಹಾಡಹಗಲೇ ಅಡ್ಡಗಟ್ಟಿ, ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಅರಮನೆ ಎದುರಿನ ದೊಡ್ಡಕೆರೆ ಮೈದಾನ ಬಳಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ನಗರದ ಕ್ಯಾತಮಾರನಹಳ್ಳಿಯ ನಿವಾಸಿ ವೆಂಕಟೇಶ್ ಅ. ಗಿಲ್ಕಿ (45) ಎಂಬವರೇ ಕೊಲೆಯಾದವರು. ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವೆಂಕಟೇಶ್ ಬೆಳಗ್ಗೆ 11.30ರ ಸಮಯದಲ್ಲಿ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋದಲ್ಲಿ ಬಂದ 4- 5 ಮಂದಿ ವೆಂಕಟೇಶ್ ಮೇಲೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಕಾರಿನಿಂದ ಹೊರಗೆ ಎಳೆದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಶ್ವಾನದಳದೊಂದಿಗೆ ಬೆರಳಚ್ಚು ತಂಡವು ಸ್ಥಳದಲ್ಲಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಕಲೆ ಹಾಕಿತು. ಈ ವಿಷಯ ತಿಳಿದು ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ದೇವರಾಜ ಉಪ ವಿಭಾಗದ ಎಸಿಪಿ ರಾಜೇಂದ್ರ, ನಜರ್ ಬಾದ್ ಠಾಣೆಯ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ: ಗಣತಿಗೆ ತೆರಳಿದ್ದ ಶಿಕ್ಷಕಿಯ ಮೇಲೆ ಬೀದಿನಾಯಿ ದಾಳಿ | ಸಮೀಕ್ಷೆ ಮಾಡುತ್ತಲೇ ಮೂರ್ಛೆ ಹೋದ ಟೀಚರ್!
ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಫೋಟೋ ವೈರಲ್ದಸರಾ ವಸ್ತುಪ್ರದರ್ಶನದ ಎದುರಿನ ರಸ್ತೆ ಬದಿಯಲ್ಲಿ ಹಾಡು ಹಗಲೇ ಕಾರಿನಿಂದ ಎಳೆದು ಹಲ್ಲೆ ನಡೆಸುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಪೊಲೀಸರಿಗೆ ಆರೋಪಿಗಳ ಪತ್ತೆಗೆ ಮಹತ್ವದ ಸುಳಿವು ಸಿಕ್ಕಂತಾಗಿದೆ. ದಾಳಿ ನಡೆಸುತ್ತಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತಿಕಾರದ ಕೊಲೆ ಶಂಕೆ:
ಕಳೆದ ಮೇ ತಿಂಗಳಲ್ಲಿ ಮೈಸೂರು- ಟಿ. ನರಸೀಪುರ ರಸ್ತೆಯ ವರುಣ ಕೆರೆ ಬಳಿಯ ಹೊಟೇಲ್ ಮುಂಭಾಗದಲ್ಲಿ ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್ ಎಂಬಾತನ ಕೊಲೆಯಾಗಿತ್ತು. ಕಾರ್ತಿಕ್ ನೊಂದಿಗೆ ವೆಂಕಟೇಶ್ ಹಣಕಾಸು ವ್ಯವಹಾರ ಹೊಂದಿದ್ದು, ಲೇವಾದೇವಿ ನಡೆಸುತ್ತಿದ್ದರು. ಕಾರ್ತಿಕ್ ಕೊಲೆಗೆ ವೆಂಕಟೇಶ್ ಸಹಕಾರ ನೀಡಿದ್ದ ಎಂಬ ದ್ವೇಷಕ್ಕೆ ಪ್ರತಿಕಾರವಾಗಿ ಯುವಕರ ಗುಂಪು ಹಲವು ದಿನಗಳಿಂದ ವೆಂಕಟೇಶ್ ಚಲನವಲನಗಳನ್ನು ಗಮನಿಸಿ, ಸಂಚು ರೂಪಿಸಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಮತ್ತೆ ಗ್ಯಾಂಗ್‌ವಾರ್: 5 ತಿಂಗಳ ಹಿಂದೆ ಕೊಲೆಯಾದ ರೌಡಿಶೀಟರ್ ಕಾರ್ತಿಕ್ ಆಪ್ತ ಗಿಲ್ಕಿ ವೆಂಕಟೇಶ್ ಹತ್ಯೆ!
ಮಂಗಳವಾರ ಬೆಳಗ್ಗೆ 9ಕ್ಕೆ ಕ್ಯಾತಮಾರನಹಳ್ಳಿಯ ಮನೆಯಿಂದ ಹೊರಟ ವೆಂಕಟೇಶ್ ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಗಳ ತಂಡ, ದೊಡ್ಡಕೆರೆ ಮೈದಾನ ಬಳಿಯ ಕಾರನ್ನು ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ. ಕಾರ್ತಿಕ್ ಕೊಲೆಗೆ ಪ್ರತಿಕಾರವಾಗಿ ವೆಂಕಟೇಶ್ ಕೊಲೆಯಾಗಿಬಹುದೆಂಬ ಶಂಕೆಯ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ