ಮಾಟಕ್ಕೆ ಹೆದರಿ ಇಬ್ಬರು ಮಕ್ಕಳ ಕೊಂದ ತಂದೆ, ರಕ್ತ ದೇವರಿಗೆ ಅರ್ಪಣೆ!

By Kannadaprabha News  |  First Published Jul 16, 2021, 7:35 AM IST

* ಮೌಢ್ಯತೆಗೆ ಇಬ್ಬರು ಮಕ್ಕಳು ಬಲಿಯಾದರೆ?

* ಮನೆಯ ಮುಂದೆ ಮಾಟ ಮಂತ್ರ ಮಾಡಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದನೇ ಅನಿಲ?

* ತನ್ನ ಕೈ ಕುಯ್ದುಕೊಂಡು ಮನೆಯ ಜಗಲಿ ಮೇಲಿನ ಶಿವಲಿಂಗ, ಸಾಯಿಬಾಬಾ ಮೂರ್ತಿ ಮೇಲೆ ರಕ್ತ ಚೆಲ್ಲಿದ್ದ


ಬೆಳಗಾವಿ(ಜು.16): ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಎಚ್‌.ಗ್ರಾಮದಲ್ಲಿ ನಡೆದ ಇಬ್ಬರು ಹೆಣ್ಣುಮಕ್ಕಳಿಗೆ ವಿಷವುಣಿಸಿ ಹತ್ಯೆಮಾಡಿ ತಂದೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಮೌಢ್ಯತೆ, ಅಂಧಶ್ರದ್ಧೆಗೆ ಮುಗ್ಧ ಮಕ್ಕಳು ಬಲಿಯಾದವಾ ಎನ್ನುವ ಪ್ರಶ್ನೆ ಮೂಡಿದೆ. ಮನೆ ಎದುರು ಮಾಟ ಮಂತ್ರ ಮಾಡಿದ್ದರಿಂದ ತಂದೆÜ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಇದೆ ಕಾರಣದಿಂದ ಆತ ಈ ರೀತಿಯಾಗಿ ವರ್ತಿಸಿದ್ದಾನೆ ಎಂದು ಪತ್ನಿ ಜಯಶ್ರೀ ದೂರು ನೀಡಿದ್ದಾಳೆ.

ಅಂಜಲಿ ಬಾಂದೇಕರ (08) ಹಾಗೂ ಅನನ್ಯ ಬಾಂದೇಕರ (04) ಸಾವಿಗೀಡಾದ ಮಕ್ಕಳು. ಅನಿಲ ಚಂದ್ರಕಾಂತ ಬಾಂದೇಕರ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಈಗಲೂ ಅಸ್ವಸ್ಥನಾಗಿ ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅನಿಲ ಬಾಂದೆಕರ ತನ್ನೆರಡು ಹೆಣ್ಣುಮಕ್ಕಳಿಗೆ ವಿಷವುಣಿಸಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ತನ್ನ ಕೈ ಕುಯ್ದುಕೊಂಡು ಮನೆಯ ಜಗುಲಿ ಮೇಲಿನ ಶಿವಲಿಂಗ, ಸಾಯಿಬಾಬಾ ಮೂರ್ತಿ ಮೇಲೆ ರಕ್ತ ಚೆಲ್ಲಿದ್ದಾನೆ ಎನ್ನಲಾಗಿದೆ.

Tap to resize

Latest Videos

ಲಾಕ್‌ಡೌನ್‌ ಆದಾಗಿನಿಂದಲೂ ಬೆಳಗಾವಿಯ ವಿಜಯನಗರದಲ್ಲಿ ಹೆಂಡತಿ ತವರು ಮನೆಯಲ್ಲಿ ಪತ್ನಿ , ಮಕ್ಕಳೊಂದಿಗೆ ವಾಸವಾಗಿದ್ದ. ನಿತ್ಯ ಕಂಗ್ರಾಳಿ ಗ್ರಾಮದ ಬಾಡಿಗೆ ಮನೆಗೆ ಪೂಜೆಗೆಂದು ಬರುತ್ತಿದ್ದ. ಅದೇ ರೀತಿ ಜುಲೈ 11 ರಂದು ಮನೆಗೆ ಬಂದಾಗ ಮನೆ ಎದುರು ಮಾಟ, ಮಂತ್ರ ಮಾಡಲಾಗಿತ್ತು. ಎರಡು ನಿಂಬೆಹಣ್ಣು, ಹಸಿರು ಬಳೆಗಳು, ಕುಂಕುಮ, ಮೆಣಸಿನಕಾಯಿ, ಅರಿಷಿಣ , ಗಿಡವೊಂದರ ಬೇರು, ಕೆಂಪುದಾರ, ಕೆಂಪು ಬಟ್ಟೆ, ಕೇರು ಬೀಜ, ಒಂದು ಚೀಟಿಯನ್ನು ಕ್ಯಾರಿ (ಪ್ಲಾಸ್ಟಿಕ್‌) ಬ್ಯಾಗ್‌ನಲ್ಲಿಟ್ಟು ಅಪರಿಚಿತರು ಹೋಗಿದ್ದರು. ಇದನ್ನು ಕಂಡು ಬೆದರಿದ ಅನಿಲ ಅವುಗಳೆಲ್ಲ ಸುಟ್ಟುಹಾಕಿದ್ದ. ಇದಾದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಅಲ್ಲದೆ, ಭಯವಾಗುತ್ತಿದೆ. ನನ್ನ ಜೀವಕ್ಕೆ ಏನಾದ್ರೂ ಆಗುತ್ತದೆ ಎಂದು ಹೇಳಿದ್ದನಂತೆ. ಮಾಟ, ಮಂತ್ರದಿಂದ ತನ್ನೆರಡು ಮಕ್ಕಳಿಗೆ ವಿಷವುಣಿಸಿ ಹತ್ಯೆ ಮಾಡಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಈತನ ಪತ್ನಿ ಜಯಶ್ರೀ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಎಪಿಎಂಸಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹೇಗೆ ಬೆಳಕಿಗೆ ಬಂತು ಘಟನೆ?:

ಮಕ್ಕಳನ್ನು ಬಾಡಿಗೆ ಮನೆಗೆ ಕರೆದುಕೊಂಡು ಬಂದ ಮೇಲೆ ಪತಿಗೆ ಪತ್ನಿ ಜಯಶ್ರೀ ಅವರು ಮೇಲಿಂದ ಮೇಲೆ ಕರೆ ಮಾಡಿದ್ದಾರೆ. ಆದರೆ, ಯಾವುದಕ್ಕೂ ಅನಿಲ ಕರೆ ಸ್ವೀಕರಿಸಿಲ್ಲ. ಇದರಿಂದಾಗಿ ಅನುಮಾನಗೊಂಡ ಜಯಶ್ರೀ ಬಾಡಿಗೆ ಮನೆಗೆ ಬಂದು ಬೆಡ್‌ ರೂಂನ ಕಿಟಕಿ ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಾಟ ಮಂತ್ರ ಮಾಡಿದವರು ಯಾರು ಎಂಬುವರ ಪತ್ತೆಗೆ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಮನೆ ಮುಂದೆ ಮಾಟ ಮಂತ್ರ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಕರ್ನಾಟಕ ಅಮಾನವೀಯ ದುಷ್ಟಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧ ನಿರ್ಮೂಲನಾ ಅಧಿನಿಯಮ 2017ರಡಿ ಪ್ರಕರಣ ದಾಖಲಾಗುವುದು ಎಂದು ಡಿಸಿಪಿ ಡಾ.ವಿಕ್ರಮ ಅಮಟೆ ತಿಳಿಸಿದ್ದಾರೆ.

click me!