ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದಲ್ಲಿ ನಡೆದ ಘಟನೆ
ಬೆಳಗಾವಿ(ಜು.27): ಪತ್ನಿ ಬೇರೆಯವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ವ್ಯಕ್ತಿಯೋರ್ವ ಪತ್ನಿ ಹಾಗೂ ಮಗನ ಕತ್ತು ಸೀಳಿದ ಹೃದಯ ವಿದ್ರಾವಕ ಘಟನೆ ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ಕು ವರ್ಷದ ಬಾಳೇಶ್ ಸ್ಥಳದಲ್ಲೇ ಮೃತಪಟ್ಟಿದ್ದರೆ ಪತ್ನಿ ಲಕ್ಷ್ಮೀ (25) ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಆರೋಪಿ ಮುತ್ತೆಪ್ಪ ಅಕ್ಕನಿ(29)ಯನ್ನು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ(ಮಂಗಳವಾರ) ಸಂಜೆ ಎಂದಿನಂತೆ ದಂಪತಿ ತಮ್ಮ ನಾಲ್ಕು ವರ್ಷದ ಮಗನ ಜೊತೆ ಕಬ್ಬಿನ ಗದ್ದೆಗೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಪತಿ ಪತ್ನಿ ಮಧ್ಯೆ ಗಲಾಟೆ ಶುರುವಾಗಿದೆ. ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ ಮುತ್ತೆಪ್ಪ ಅಕ್ಕನಿ ಪತ್ನಿ ಲಕ್ಷ್ಮೀ ಜೊತೆ ಜಗಳಕ್ಕಿಳಿದಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ ಮಾರಕಾಸ್ತ್ರಗಳಿಂದ ನಾಲ್ಕು ವರ್ಷದ ಮಗ ಬಾಳೇಶ್ ಹಾಗೂ ಪತ್ನಿ ಲಕ್ಷ್ಮೀ ಕತ್ತು ಕೋಯ್ದಿದ್ದಾನೆ. ಪರಿಣಾಮ ನಾಲ್ಕು ವರ್ಷದ ಮಗ ಬಾಳೇಶ್ ಕಬ್ಬಿನ ಗದ್ದೆಯಲ್ಲೇ ಮೃತಪಟ್ಟಿದ್ದಾನೆ.
ಪ್ರೀತಿಸಿ ಮದ್ವೆಯಾದವನಿಗೆ 17 ವರ್ಷದ ನಂತರ ಬೇಡವಾದ್ಲು, ನಂಬಿದ ಗಂಡನಿಂದಲೇ ಹೆಣವಾದ ಹೆಣ್ಮಗಳ ಕಥೆ
ಕತ್ತು ಸೀಳಿದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಕ್ಷ್ಮೀಯನ್ನು ಗೋಕಾಕ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಲಕ್ಷ್ಮೀಗೆ ಚಿಕಿತ್ಸೆ ನಡೆಸಲಾಗುತ್ತಿದ್ದು ಆಕೆ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ಮುತ್ತಪ್ಪ ಅಕ್ಕನಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅದೇನೇ ಜಗಳ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ನಾಲ್ಕು ವರ್ಷದ ಪುಟ್ಟ ಕಂದಮ್ಮನ ಮೃತದೇಹ ನೋಡಿ ಗ್ರಾಮಸ್ಥರು ಪಾಪಿ ತಂದೆಗೆ ಹಿಡಿಶಾಪ ಹಾಕುತ್ತಿದ್ದಾರೆ.