ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಿರುವ ನಡುವೆಯೇ ಇದೀಗ ಕೆಪಿಟಿಸಿಎಲ್ ಹುದ್ದೆಗಳಿಗೆ ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಭಾರೀ ಅಕ್ರಮ ನಡೆದಿರುವ ಶಂಕೆ ಮೂಡಿದೆ.
ಬೆಳಗಾವಿ (ಆ.22): ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಿರುವ ನಡುವೆಯೇ ಇದೀಗ ಕೆಪಿಟಿಸಿಎಲ್ ಹುದ್ದೆಗಳಿಗೆ ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಭಾರೀ ಅಕ್ರಮ ನಡೆದಿರುವ ಶಂಕೆ ಮೂಡಿದೆ. ಬೆಳಗಾವಿಯಲ್ಲಿ ಸ್ಮಾರ್ಟ್‌ವಾಚ್ ಬಳಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯನ್ನು ಬಂಧಿಸಿದ ಬೆನ್ನಲ್ಲೇ, ಇದೀಗ ಪೊಲೀಸರು ಅಕ್ರಮಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ಅಪ್ಪ-ಮಗನನ್ನು ಬಂಧಿಸಿದ್ದಾರೆ.
ಗದಗ ನಗರದ ಮುನ್ಸಿಪಲ್ ಪಿಯು ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಆತನ ಪುತ್ರ ಬಂಧಿತ ಆರೋಪಿಗಳು. ಆ.7ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಮದಿಹಳ್ಳಿ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆತ ನೀಡಿದ ಮಾಹಿತಿ ಆಧಾರದ ಮೇರೆಗೆ ಈ ಇಬ್ಬರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ಬೆಳಗಾವಿಗೆ ಕರೆದುಕೊಂಡು ಬಂದಿರುವ ಪೊಲೀಸರು ಅಕ್ರಮಕ್ಕೆ ಸಂಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಕೆಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಸ್ಮಾರ್ಚ್‌ವಾಚ್ ಮೂಲಕ ಅಕ್ರಮ: ಓರ್ವನ ಬಂಧನ
ಸಿಕ್ಕಿಬಿದ್ದಿದ್ದ ಪರೀಕ್ಷಾರ್ಥಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ವೇಳೆ ಬೆಳಗಾವಿಯಲ್ಲಿ ಅಕ್ರಮವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪರೀಕ್ಷಾರ್ಥಿಗಳಿಂದ ಬಂದ ದೂರು ಮತ್ತು ಗೋಕಾಕದ ಪರೀಕ್ಷಾ ಕೇಂದ್ರದಲ್ಲಿದ್ದ ಸಿಸಿಟೀವಿ ಪರಿಶೀಲಿಸಿದ ವೇಳೆ ಆರೋಪಿ ಸಿದ್ದಪ್ಪ ಮದಿಹಳ್ಳಿ ಸ್ಮಾರ್ಟ್‌ವಾಚ್ ನೋಡಿಕೊಂಡು ಉತ್ತರ ಬರೆಯುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈತನ ವಿಚಾರಣೆ ವೇಳೆ ಗದಗದಿಂದ ಪ್ರಶ್ನೆಪತ್ರಿಕೆ ಲೀಕ್ ಆಗಿರುವುದು ಖಚಿತಪಟ್ಟಿತ್ತು.
ಗದಗದ ಮುನ್ಸಿಪಲ್ ಕಾಲೇಜಿನಲ್ಲಿ ನಡೆದ ಪರೀಕ್ಷೆ ವೇಳೆ ಉಪ ಪ್ರಾಂಶುಪಾಲನ ಪುತ್ರ ಪತ್ರಕರ್ತರ ಸೋಗಿನಲ್ಲಿ ಪರೀಕ್ಷಾ ಕೇಂದ್ರದೊಳಗೆ ಹೋಗಿದ್ದು, ಈ ವೇಳೆ ಅಲ್ಲಿನ ಪರೀಕ್ಷಾರ್ಥಿ ಬಳಿ ಇದ್ದ ಪ್ರಶ್ನೆ ಪತ್ರಿಕೆಯ ಫೋಟೊ ತೆಗೆದುಕೊಂಡು ಬಂದಿದ್ದಾನೆ. ಬಳಿಕ ತಮಗೆ ಬೇಕಾದವರಿಗೆ ಸರಿಯಾದ ಉತ್ತರಗಳನ್ನು ರವಾನಿಸುವ ಕಾರ್ಯ ಮಾಡಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.
ಗ್ರಾಮೀಣರಿಗೆ ಉತ್ತಮ ಆರೋಗ್ಯ ನೀಡುವ ಗುರಿ: ಸಚಿವ ಸುಧಾಕರ್
ಏನಿದು ಕೇಸ್?
- ಆ.7ರಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ
- ಬೆಳಗಾವಿಯಲ್ಲಿ ಅಕ್ರಮ ನಡೆದ ಆರೋಪ: ಒಬ್ಬನ ಬಂಧನ
- ಬಂಧಿತನ ವಿಚಾರಣೆ ವೇಳೆ ತಂದೆ- ಮಗನ ಬಗ್ಗೆ ಮಾಹಿತಿ
- ತಂದೆಯ ಕಾಲೇಜಿನಲ್ಲಿ ಪ್ರಶ್ನೆಪತ್ರಿಕೆ ಫೋಟೋ ತೆಗೆದಿದ್ದ ಮಗ
- ಪತ್ರಕರ್ತನ ಸೋಗಿನಲ್ಲಿ ಹೋಗಿ ಫೋಟೋ ತೆಗೆದು ಸೋರಿಕೆ