Chikkamagaluru: ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ

By Suvarna NewsFirst Published Nov 10, 2022, 10:40 PM IST
Highlights

ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗ, ಹಳದಿ ಎಲೆರೋಗ ಬಾಧೆಗಳು ಕಾಡುತ್ತಿದ್ದು, ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ಯುವ ಕೃಷಿಕ ವಿಷಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ವ್ಯಾಪ್ತಿಯ ಕೊಡತಲು ಅವಿನಾಶ್ ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ನ.10): ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗ, ಹಳದಿ ಎಲೆರೋಗ ಬಾಧೆಗಳು ಕಾಡುತ್ತಿದ್ದು, ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ಯುವ ಕೃಷಿಕ ವಿಷಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ವ್ಯಾಪ್ತಿಯ ಕೊಡತಲು ಅವಿನಾಶ್ ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ. ತೆಕ್ಕೂರಿನ ಶೇಖರೇಗೌಡ ಎಂಬುವವರ ಪುತ್ರನಾದ ಅಭಿಲಾಷ್, ತೋಟಕ್ಕಾಗಿ 3.5 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ತೋಟವನ್ನು ಸಂಪೂರ್ಣವಾಗಿ ರೋಗ ಬಾಧಿಸಿರುವುದರಿಂದ ಕಂಗಾಲಾಗಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಲೆನಾಡಿನ ಬಹುತೇಕ ಅಡಿಕೆ ತೋಟಗಳನ್ನು ಎಲೆಚುಕ್ಕಿ ರೋಗ ಆವರಿಸಿದ್ದು, ದಿನೇ ದಿನೇ ರೋಗಬಾಧೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ರೈತರು ಆತಂಕಕ್ಕೆ ಸಿಲುಕಿದ್ದು ಪರಿಹಾರ ಕ್ರಮಗಳು ಕಾಣದೇ ಇರುವುದರಿಂದ ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.

ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳು ಆದಷ್ಟು ಶೀಘ್ರವಾಗಿ ಈ ಕುರಿತು ಗಮನಹರಿಸಿ ಪರಿಹಾರ ಕ್ರಮಗಳನ್ನು ಕೈಗೊಂಡು ರೈತರ ಪರವಾಗಿ ನಿಲ್ಲಬೇಕಿದೆ. ಘಟನಾ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೃಂಗೇರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಮಗನನ್ನು ಕಳೆದುಕೊಂಡಿರುವ ಕುಟುಂಬಸ್ಥರು ಸೂಕ್ತ ಪರಿಹಾರ ಒದಗಿಸುವಂತೆ ಕೋರಿದ್ದಾರೆ.

ಎಲೆಚುಕ್ಕಿ ತಡೆಗೆ ಶಾಶ್ವತ ಪರಿಹಾರಕ್ಕೆ ಸರ್ವ ಪ್ರಯತ್ನ ಜಾರಿ
ತೀರ್ಥಹಳ್ಳಿ: ಮಲೆನಾಡು ಭಾಗದ ಪ್ರಮುಖ ಬೆಳೆಯಾದ ಅಡಕೆಗೆ ಮಾರಕವಾಗಿ ಎರಗಿರುವ ಎಲೆಚುಕ್ಕಿ ರೋಗದ ನಿವಾರಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ. ಇದರ ಜೊತೆಯಲ್ಲಿ ಜನರ ಆತಂಕ ನಿವಾರಣೆಗೆ ದೇವರ ಕೃಪಾಶೀರ್ವಾದ ಅಗತ್ಯವೂ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರೀ ರಾಮೇಶ್ವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಆರಂಭಗೊಂಡ ಮನೆ ಮನೆಗಳಲ್ಲಿ ಲೋಕಕಲ್ಯಾಣಾರ್ಥ ಆರಂಭಗೊಂಡ ಸಾಮೂಹಿಕ ‘ಓಂ ನಮಃ ಶಿವಾಯ’ ಮಂತ್ರೋಚ್ಚಾರಣೆಯ ಧಾರ್ಮಿಕ ಕಾರ್ಯಕ್ಕೆ ಸಂಕಲ್ಪ ಪೂಜೆಗೆ ಶನಿವಾರ ರಾತ್ರಿ ಚಾಲನೆ ನೀಡಿ, ಸಾಮಾಜಿಕ ಕಾಳಜಿ ಹೊಂದಿರುವ ಅನ್ನ ಸಂತರ್ಪಣೆ ಸಮಿತಿಯವರ ಈ ಕಾರ್ಯ ಅರ್ಥಪೂರ್ಣವಾಗಿದೆ ಎಂದರು.

ಅಡಕೆ ಬೆಳೆ ಎಲೆಚುಕ್ಕಿ ರೋಗ ಮುಂತಾದ ಮಾರಕ ರೋಗಗಳಿಂದ ಈ ಬೆಳೆ ಉಳಿಯುವುದೇ ಕಷ್ಟಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾತ್ರವಲ್ಲದೇ ಕೇಂದ್ರ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಇಂತಹಾ ಸಂಕಷ್ಟದ ಕಾಲದಲ್ಲಿ ಶ್ರೀ ರಾಮೇಶ್ವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಂಡಿರುವ ಸಾಮೂಹಿಕ ಓಂ ನಮಃಶಿವಾಯ ಮಂತ್ರೋಚ್ಚಾರಣೆಯ ಧಾರ್ಮಿಕ ಕಾರ್ಯದಿಂದ ಆತಂಕದಲ್ಲಿರುವ ಜನರ ಮಾನಸಿಕ ನೆಮ್ಮದಿಗೂ ಕಾರಣವಾಗಲಿದೆ ಎಂದರು.

ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಜಗದ್ಗುರುಗಳ ಮೊರೆಹೋದ ಕೃಷಿಕರು

ಅನ್ನ ಸಂತರ್ಪಣಾ ಸಮಿತಿಯ ಮುಖ್ಯಸ್ಥರಾದ ಗೋವರ್ಧನ್‌ ಮಾತನಾಡಿ, ಅಡಕೆ ಬೆಳೆ ಎಲೆಚುಕ್ಕಿ ರೋಗ ನಿವಾರಣೆ ಮತ್ತು ಆಂತರಿಕ ಭಯ ನಿವಾರಣೆ, ಗ್ರಹಚಾರದೋಷ ಪರಿಹಾರ ಸೇರಿದಂತೆ ಸಮಸ್ತ ಜನರ ಇಷ್ಟಾರ್ಥ ಸಿದ್ದಿಗಾಗಿ ಸೋಮವಾರದಿಂದ ಒಂದು ವಾರದ ಪರ್ಯಂತ ಭಕ್ತರ ಮನೆಗಳಲ್ಲಿ ಮಂತ್ರೋಚ್ಚಾರಣೆ ಮಾಡಿ ಬಿಲ್ವಪತ್ರೆಯ ಮೂಲಕ ರಾಮೇಶ್ವರನಿಗೆ ಸಮರ್ಪಣೆ ಮಾಡಲಾಗುವುದು. ಈ ನಡುವೆ ನಡೆಯುವ ಹೋಮಹವನಗಳ ಭಸ್ಮವನ್ನು ರೈತರಿಗೆ ವಿತರಣೆ ಮಾಡಿ ರೋಗ ನಿವಾರಣೆಗೆ ಪ್ರಾರ್ಥಿಸಿ ತೋಟಗಳಲ್ಲಿ ಪೋ›ಕ್ಷಣೆ ಮಾಡಲಾಗುವುದು. ಮುಂದಿನ ಸೋಮವಾರ ದೇವಸ್ಥಾನದ ಆರಂಭಗೊಳ್ಳಲಿರುವ ನಿತ್ಯ ಅನ್ನ ಸಂತರ್ಪಣೆಗೆ ಹೊರನಾಡಿನ ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ಚಾಲನೆ ನೀಡಲಿದ್ದಾರೆ ಎಂದರು.

ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡಿನಲ್ಲಿ ಮಹಾ ಚಂಡಿಕಾ ಹೋಮ

ಡಾ. ಜೀವಂಧರ ಜೈನ್‌, ವಕೀಲರ ಸಂಘದ ಅದ್ಯಕ್ಷ ಸರಳ ಲೋಕೇಶ್‌, ಮೂರ್ತಿರಾವ್‌, ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ವಿಶಾಲ್‌ ಕುಮಾರ್‌, ಸುಕೇಶ್‌, ವಿಜಯ ಪದ್ಮನಾಭ್‌ ಇತರರು ಇದ್ದರು.

click me!