ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ| ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಭೀಮರಾಯನಗುಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಶಹಾಪೂರ(ಮಾ.25): ಸಾಲಬಾಧೆ ತಾಳದೆ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಮತ್ತೊಬ್ಬ ರೈತ ತಮ್ಮ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಮಲ್ಲಪ್ಪ (40) ಆತ್ಮಹತ್ಯೆ ಮಾಡಿಕೊಂಡ ರೈತ.
ಮಾ.21ರ ರಾತ್ರಿ ಗ್ರಾಮದ ತಿಪ್ಪಣ್ಣ ಎಂಬ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಹಸಿಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದ್ದು, ಗ್ರಾಮದ ಜನರನ್ನು ತಲ್ಲಣಗೊಳಿಸಿದೆ. ಮಲ್ಲಪ್ಪ ಎಂಬುವರು ತಮ್ಮ ಸ್ವಂತ 3 ಎಕರೆ ಜಮೀನಿದ್ದು, ಮತ್ತು 4 ಎಕರೆ ಜಮೀನು ಲೀಸಿಗೆ ಪಡೆದು ಬೀಜ ಗೊಬ್ಬರಕ್ಕಾಗಿ ಬ್ಯಾಂಕ್ ಹಾಗೂ ಕೈ ಸಾಲ ಮಾಡಿಕೊಂಡಿದ್ದರು. ಕಳೆದ ಎರಡ್ಮೂರು ವರ್ಷದಿಂದ ಹತ್ತಿ, ಮೆಣಸಿನಕಾಯಿ, ಜೋಳ ಬೆಳೆ ಬೆಳೆಯುತ್ತಿದ್ದರು. ಬೆಳೆ ಸರಿಯಾಗಿ ಬರದೇ ಇತ್ತ ಸಾಲ ತೀರಿಸಲಾಗದೆ, ಮನನೊಂದಿದ್ದರು ಎಂದು ತಿಳಿದು ಬಂದಿದೆ.
undefined
ಸಾಲಬಾಧೆ: ಕೃಷಿ ಹೊಂಡಕ್ಕೆ ಹಾರಿ ಮೂವರು ಆತ್ಮಹತ್ಯೆ
ದೋರನಹಳ್ಳಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ವಿಎಸ್‌ಎಸ್‌ಎನ್ ಸೊಸೈಟಿ, 5 ಲಕ್ಷಕ್ಕೆ ತನ್ನ ಜಮೀನು ಮುದ್ದತ್ತು ರಜಿಸ್ಟರ್ ಮೇಲೆ ಸಾಲ ಹಾಗೂ ಕೈ ಸಾಲ ಸೇರಿ ಒಟ್ಟು 10 ಲಕ್ಷ ದವರೆಗೂ ಸಾಲ ಮಾಡಿದ್ದರೆಂದು ಎನ್ನಲಾಗಿದೆ. ಮಾ.23 ರಂದು ಮಂಗಳವಾರ ರಾತ್ರಿ ಮನೆಯವರಿಗೆ ತಾನು ಹೊಲಕ್ಕೆ ಹೋಗಿ ಬರುವುದಾಗಿ ತಿಳಿಸಿ ಮಡ್ನಾಳ ಸೀಮೆಯಲ್ಲಿರುವ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಶವವಾಗಿದ್ದಾನೆ. ಈ ಸುದ್ದಿ ಬುಧವಾರ ಬೆಳಗ್ಗೆ ಆಂಧ್ರ ಕ್ಯಾಂಪ್ ಜನತೆಗೆ ತಿಳಿದು ಅವರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸ್ ಠಾಣೆಗೆ ಮತ್ತು ತಹಸೀಲ್ದಾರರಿಗೆ ಮಾಹಿತಿ ನೀಡಲಾಗಿದೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.
ಮೃತನಿಗೆ 2 ಗಂಡು ಮತ್ತು 2 ಹೆಣ್ಣು ಮಕ್ಕಳಿದ್ದಾರೆ. ಭೀಮರಾಯನಗುಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ ಎಂದು ತಿಳಿದುಬಂದಿದೆ.