ಬೆಂಗ್ಳೂರಲ್ಲಿ ಟ್ರಾಫಿಕ್‌ ದಂಡ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್‌..!

By Kannadaprabha News  |  First Published May 24, 2024, 7:00 AM IST

ಪಶ್ಚಿಮ ಬಂಗಾಳ ರಾಜ್ಯ ಕೊಲ್ಕತ್ತಾ ಮೂಲದ ರಂಜನ್‌ ಕುಮಾರ್‌, ಇಸ್ಮಾಯಿಲ್ ಆಲಿ ಹಾಗೂ ಶಬೀರ್‌ ಮಲ್ಲಿಕ್ ಬಂಧಿತರಾಗಿದ್ದು, ಆರೋಪಿಗಳ ಖಾತೆಯಲ್ಲಿದ್ದ ₹1 ಲಕ್ಷ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತಪ್ಪಿಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಹೇಳಿದ ಪೊಲೀಸರು 


ಬೆಂಗಳೂರು(ಮೇ.24):  ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಬಂಧ ಬೆಂಗಳೂರು ಸಂಚಾರ ಪೊಲೀಸರ ಸೋಗಿನಲ್ಲಿ ಜನರಿಗೆ ವಂಚಿಸಿ ದಂಡ ವಸೂಲಿ ಮಾಡುತ್ತಿದ್ದ ಮೂವರು ನಕಲಿ ಪೊಲೀಸರು ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯ ಕೊಲ್ಕತ್ತಾ ಮೂಲದ ರಂಜನ್‌ ಕುಮಾರ್‌, ಇಸ್ಮಾಯಿಲ್ ಆಲಿ ಹಾಗೂ ಶಬೀರ್‌ ಮಲ್ಲಿಕ್ ಬಂಧಿತರಾಗಿದ್ದು, ಆರೋಪಿಗಳ ಖಾತೆಯಲ್ಲಿದ್ದ ₹1 ಲಕ್ಷ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತಪ್ಪಿಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

Latest Videos

undefined

ಬೆಂಗಳೂರು: ಡುಮ್ಮಿ ಎಂದು ಹೀಳಾಯಿಸಿದ ಪತಿ, ನೇಣು ಬಿಗಿದುಕೊಂಡು ಶಿಕ್ಷಕಿ ಸಾವು

ಕೆಲ ದಿನಗಳ ಹಿಂದೆ ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ ಮೃತ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಹೆಸರಿನ ಗುರುತಿನ ಪತ್ರ ಬಳಸಿ ಕಿಡಿಗೇಡಿಗಳು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಂಚಾರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಈ ವಿಷಯವನ್ನು ತಿಳಿದು ಕಿಡಿಗೇಡಿಗಳ ವಿರುದ್ಧ ಈಶಾನ್ಯ ವಿಭಾಗದ ಸಿಇಎನ್‌ ಠಾಣೆಗೆ ಮೃತ ಎಎಸ್‌ಐ ಪುತ್ರ ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ್‌ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಕೊಲ್ಕತ್ತಾ ನಗರದಲ್ಲಿ ಆರೋಪಿಗಳನ್ನು ಸೆರೆ ಹಿಡಿದು ನಗರಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ವಂಚನೆ?:

ಐದು ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಬ್ಯಾಂಕಿಂಗ್‌ ವ್ಯವಸ್ಥೆ ಸಂಬಂಧ ತರಬೇತಿ ಸಲುವಾಗಿ ಬೆಂಗಳೂರಿಗೆ ರಂಜನ್ ಬಂದಿದ್ದ. ಆ ವೇಳೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ಪಿಡಿಎ ಯಂತ್ರದಲ್ಲಿ ದಂಡ ವಿಧಿಸಿ ಆನ್‌ಲೈನ್‌ ಹಣ ಪಾವತಿಸುವ ವ್ಯವಸ್ಥೆ ಆತನಿಗೆ ಗೊತ್ತಾಗಿದೆ. ಇದಾದ ನಂತರ ಬ್ಯಾಂಕ್‌ ಕೆಲಸ ತೊರೆದ ಆತ, ಸುಲಭವಾಗಿ ಹಣ ಸಂಪಾದನೆಗೆ ನಕಲಿ ಪೊಲೀಸರ ಛದ್ಮ ವೇಷದಲ್ಲಿ ಜನರಿಗೆ ಟೋಪಿ ಹಾಕಲು ಶುರು ಮಾಡಿದ್ದಾನೆ.

ಆಗ ಆನ್‌ಲೈನ್‌ನಲ್ಲಿ ಬೆಂಗಳೂರು ಪೊಲೀಸರ ಐಡಿ ಕಾರ್ಡ್‌ಗೆ ಹುಡುಕಾಡಿದಾಗ ಗೂಗಲ್‌ನಲ್ಲಿ ಮೃತ ಎಎಸ್‌ಐ ಐಡಿ ಸಿಕ್ಕಿದೆ. 2020ರಲ್ಲಿ ನಂದಿನಿಲೇಔಟ್‌ ಬಳಿ ಅಪಘಾತದಲ್ಲಿ ಎಎಸ್‌ಐ ಭಕ್ತರಾಮ್‌ ಮೃತಪಟ್ಟಿದ್ದ ಸುದ್ದಿ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇವರ ಹೆಸರಿನ ಕಾರ್ಡನ್ನು ಗೂಗಲ್‌ನಲ್ಲಿ ಪಡೆದು ಬಳಿಕ ಅವರ ಹೆಸರು ಬದಲಿಸಿ ಕುಮಾರಸ್ವಾಮಿ ಹೆಸರಿನಲ್ಲಿ ಆತ ನಕಲಿ ಐಡಿ ಸೃಷ್ಟಿಸಿಕೊಂಡಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆನಂತರ ಟ್ರಾಫಿಕ್ ದಂಡದ ಕುರಿತು ಮೊಬೈಲ್ ಆ್ಯಪ್‌ಗಳ ಮೂಲಕ ಮಾಹಿತಿ ಪಡೆದ ಆತ, ಆ ವಾಹನಗಳ ಮಾಲೀಕರ ಕುರಿತು ಮಾಹಿತಿಯನ್ನು ಸಾರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಸಂಗ್ರಹಿಸಿದ್ದ. ಆ ವಾಹನಗಳ ಮಾಲೀಕರಿಗೆ ಕುಮಾರಸ್ವಾಮಿ ಹೆಸರಿನಲ್ಲಿ ಕರೆ ಮಾಡಿ ದಂಡ ಪಾವತಿಸುವಂತೆ ಸೂಚಿಸುತ್ತಿದ್ದ ಆರೋಪಿ, ದಂಡ ಕಟ್ಟದೆ ಹೋದರೆ ವಾಹನ ಜಪ್ತಿ ಮಾಡುವುದಾಗಿ ಬೆದರಿಸುತ್ತಿದ್ದ. ಆಗ ಹೆದರಿ ದಂಡ ಪಾವತಿಸಲು ಮುಂದಾಗುವ ಜನರಿಗೆ ವಾಟ್ಸ್ ಆ್ಯಪ್‌ನಲ್ಲಿ ಕ್ಯೂಆರ್ ಕೋಡ್‌ ಲಿಂಕ್ ಕಳುಹಿಸುತ್ತಿದ್ದ. ಅಂತೆಯೇ ಜನರು ದಂಡ ಪಾವತಿಸಿದಾಗ ವಂಚಕರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿತ್ತು. ಇತ್ತೀಚಿಗೆ ಸಂಚಾರ ಪೊಲೀಸರಿಗೆ ಈ ವಂಚನೆ ಕೃತ್ಯ ತಿಳಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಯಾಂಕ್‌ ಖಾತೆಗಳ ಸೃಷ್ಟಿ

ವಂಚನೆ ಕೃತ್ಯಕ್ಕೆ ಆಲಿ ಮತ್ತು ಶಬೀರ್‌ ಮೂಲಕ ಬೇರೆಯವರ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ರಂಜನ್ ಖಾತೆಗಳನ್ನು ತೆರೆಸಿದ್ದ. ಜನರು ದಂಡ ಪಾವತಿಸಿದಾಗ ಆ ಹಣವು ರಂಜನ್ ಸೂಚಿಸಿದವರ ಖಾತೆಗಳಿಗೆ ಜಮೆಯಾಗುತ್ತಿತ್ತು. ಆನಂತರ ಕಮಿಷನ್ ಪಡೆದು ಆ ಹಣವನ್ನು ರಂಜನ್‌ಗೆ ಆಲಿ ಮತ್ತು ಶಬೀರ್ ವರ್ಗಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹಾಸನ: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

100ಕ್ಕೂ ಜನರಿಗೆ ಟೋಪಿ

ಇದೇ ರೀತಿ 100ಕ್ಕೂ ಹೆಚ್ಚಿನ ಜನರಿಗೆ ಟೋಪಿ ಹಾಕಿ ಆರೋಪಿಗಳು ಹಣ ವಸೂಲಿ ಮಾಡಿದ್ದಾರೆ. ಆದರೆ ₹100, ₹500 ಹೀಗೆ ವಂಚನೆ ಹಣ ಅಲ್ಪ ಪ್ರಮಾಣವಾಗಿದ್ದ ಕಾರಣ ಬಹುತೇಕರು ದೂರು ಕೊಡಲು ಹಿಂದೇಟು ಹಾಕಿದ್ದಾರೆ. ಇದುವರೆಗೆ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಬಿಎ ಪದವೀಧರ ಕಿಂಗ್‌ಪಿನ್‌

ವಂಚನೆ ತಂಡಕ್ಕೆ ಮಾಸ್ಟರ್‌ ಮೈಂಡ್‌ ರಂಜನ್ ಆಗಿದ್ದು, ಎಂಬಿಎ ಓದಿ ಖಾಸಗಿ ಬ್ಯಾಂಕ್‌ನಲ್ಲಿ ಕೆಲ ವರ್ಷಗಳು ಆತ ಕೆಲಸ ಮಾಡಿದ್ದ. ಇನ್ನುಳಿದ ಆತನ ಸ್ನೇಹಿತರಾದ ಇಸ್ಮಾಯಿಲ್‌ ಜೆರಾಕ್ಸ್ ಅಂಗಡಿ ಇಟ್ಟಿದ್ದರೆ, ಸೈಬರ್ ಸೆಂಟರನ್ನು ಶಬೀರ್‌ ನಡೆಸುತ್ತಿದ್ದಾನೆ. ಹಣದಾಸೆಗೆ ರಂಜನ್‌ಗೆ ಈ ಗೆಳೆಯರು ಸಾಥ್ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

click me!