ಲೇಡಿ ಡಾಕ್ಟರ್‌ ವೇಷದಲ್ಲಿ ಮಹಿಳಾ ರೋಗಿಗಳ ಚಿನ್ನ ಕಳವು

By Kannadaprabha NewsFirst Published Jan 17, 2023, 8:16 AM IST
Highlights

-ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ತಪಾಸಣೆಯ ನೆಪದಲ್ಲಿ ಕೃತ್ಯ. ರೋಗಿಗಳ ಸಂಬಂಧಿಕರನ್ನು 45 ನಿಮಿಷ ಡಿಸ್ಟರ್ಬ್ ಮಾಡಬೇಡಿ ಎಂದು ವಾರ್ಡ್‌ನಿಂದ ಹೊರಗೆ ಕಳುಹಿಸಿ ಕೈಚಳಕ

ಬೆಂಗಳೂರು: ವೈದ್ಯೆಯ ಸೋಗಿನಲ್ಲಿ ಖತರ್ನಾಕ್‌ ಕಳ್ಳಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಮಹಿಳಾ ರೋಗಿಗಳ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದ್ದು ಪರಾರಿ ಆಗಿರುವ ಘಟನೆ ಅಶೋಕ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಜ.14ರಂದು ಈ ದುರ್ಘಟನೆ ನಡೆದಿದೆ. ಕೋಮಲಾ(58) ಮತ್ತು ಸರಸಾ(72) ಎಂಬ ರೋಗಿಗಳು ಚಿನ್ನಾಭರಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಟಿ.ಸಿ.ಪಾಳ್ಯದ ನಿವಾಸಿ ಜೆ.ರಮೇಶ್‌ಕುಮಾರ್‌ ನೀಡಿದ ದೂರಿನ ಮೇರೆಗೆ ಅಪರಿಚಿತ ಮಹಿಳೆ ಹಾಗೂ ಆಸ್ಪತ್ರೆ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ಚಾಲಾಕಿ ಕಳ್ಳಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ದೂರುದಾರ ರಮೇಶ್‌ ಅವರ ತಾಯಿ ಸರಸಾ ಅವರಿಗೆ ಜ.12ರಂದು ರಾತ್ರಿ 11.30ರ ಸುಮಾರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇಂಟ್‌ ಫಿಲೋಮಿನಾ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಜ.14ರ ಮಧ್ಯಾಹ್ನ 2.45ರಲ್ಲಿ ಸುಮಾರು 35 ವರ್ಷದ ಮಹಿಳೆ ಬಿಳಿ ಕೋಟ್‌ ಧರಿಸಿಕೊಂಡು ವಾರ್ಡ್‌ಗೆ ಬಂದಿದ್ದಾಳೆ. ಈ ವೇಳೆ ರಮೇಶ್‌ ಅವರ ಬಳಿ ಬಂದು, ‘ನಾನು ಡಾಕ್ಟರ್‌. ನಿಮ್ಮ ತಾಯಿಯ ಖಾಸಗಿ ಅಂಗ ತಪಾಸಣೆ ಮಾಡಬೇಕು. ನೀವು ಸ್ವಲ್ಪ ಹೊರಗೆ ಇರಿ’ ಎಂದು ಹೇಳಿದ್ದಾಳೆ. ಈಕೆಯ ಮಾತು ನಂಬಿದ ರಮೇಶ್‌ ವಾರ್ಡ್‌ನಿಂದ ಹೊರಗೆ ಹೋಗಿದ್ದಾರೆ.

ಭಾವನೊಂದಿಗೆ ಅನೈತಿಕ ಸಂಬಂಧ ಶಂಕೆ: ಪತ್ನಿ ಕೊಂದು ಆಕೆಯ ಅಣ್ಣನಿಗೆ ಹತ್ಯೆ ಮೆಸೇಜ್‌!

10 ನಿಮಿಷದಲ್ಲಿ ಇಬ್ಬರಿಗೆ ಟೋಪಿ
ಹತ್ತು ನಿಮಿಷಗಳ ಬಳಿಕ ವೈದ್ಯೆ ಸೋಗಿನ ಮಹಿಳೆ ಹೊರಗೆ ಬಂದು, ‘ನಿಮ್ಮ ತಾಯಿಗೆ ತೊಂದರೆ ಕೊಡಬೇಡಿ. ಆಕೆ ಮಲಗಿದ್ದಾರೆ. ಎಲ್ಲಾ ನಾರ್ಮಲ್‌ ಇದೆ’ ಎಂದು ಹೇಳಿ ಹೊರಟ್ಟಿದ್ದಾಳೆ. ಇದಾದ ಹತ್ತು ನಿಮಿಷದಲ್ಲಿ ನರ್ಸ್‌ ಬಂದು ‘ನಿಮ್ಮ ತಾಯಿಯ ರಕ್ತ ಪರೀಕ್ಷೆ ಮಾಡುವ ಸಲುವಾಗಿ ರಕ್ತ ತೆಗೆದುಕೊಳ್ಳಬೇಕು’ ಎಂದಿದ್ದಾರೆ. ಇದಕ್ಕೆ ರಮೇಶ್‌, ‘ಈಗಷ್ಟೇ ವೈದ್ಯೆಯೊಬ್ಬರು ಬಂದು ತಪಾಸಣೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಇದಕ್ಕೆ ಆ ನರ್ಸ್‌, ‘ತಪಾಸಣೆ ಮಾಡಿದ್ದು ಯಾವ ವೈದ್ಯೆ ಎಂಬುದು ನಮಗೆ ಗೊತ್ತಿಲ್ಲ’ ಎಂದಿದ್ದಾರೆ. ಅಷ್ಟರಲ್ಲಿ ರಮೇಶ್‌ ಅವರ ತಾಯಿ ಸರಸಾ ಅವರು ರಮೇಶ್‌ ಅವರನ್ನು ಕರೆದು, ‘ಕೈಯಲ್ಲಿದ ಉಂಗುರ ಕಾಣಿಸುತ್ತಿಲ್ಲ’ ಎಂದಿದ್ದಾರೆ. ಇದೇ ಸಮಯಕ್ಕೆ ರಮೇಶ್‌ ಅಕ್ಕ ಪ್ರಿಯದರ್ಶಿನಿ ಅವರು ತಾಯಿ ಬಳಿ ಬಂದು ಪರಿಶೀಲನೆ ಮಾಡಿದಾಗ ತಾಯಿಯ ಕೈಯಲ್ಲಿದ್ದ 5 ಗ್ರಾಂ ಉಂಗುರ ಹಾಗೂ ಕೊರಳಲ್ಲಿದ್ದ 41 ಗ್ರಾಂ ತೂಕದ ಚಿನ್ನ ಸರ ಇಲ್ಲದಿರುವುದು ಗೊತ್ತಾಗಿದೆ.

45 ನಿಮಿಷ ಡಿಸ್ಟರ್ಬ್‌ ಮಾಡಬೇಡಿ!
ಚಿನ್ನಾಭರಣ ಕಳುವಾಗಿರುವ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಮತ್ತೊಂದು ವಾರ್ಡಿನಲ್ಲಿದ್ದ 58 ವರ್ಷದ ಕೋಮಲಾ ಅವರ ಬಳಿ ತೆರಳಿರುವ ವೈದ್ಯೆ ಸೋಗಿನ ವಂಚಕಿ, ಕೋಮಲಾ ಅವರನ್ನು ತಪಾಸಣೆ ಮಾಡುವುದಾಗಿ ಹೇಳಿ ಅವರ ಮಗ ರಾಜು ಅವರನ್ನು ಹೊರಗೆ ಕಳುಹಿಸಿದ್ದಾಳೆ. ಐದು ನಿಮಿಷದಲ್ಲಿ ವಾರ್ಡ್‌ನಿಂದ ಹೊರಗೆ ಬಂದು ‘ನಿಮ್ಮ ತಾಯಿಯನ್ನು 45 ನಿಮಿಷ ಡಿಸ್ಟರ್ಬ್‌ ಮಾಡಬೇಡಿ’ ಎಂದು ಹೇಳಿ ಹೊರಟು ಹೋಗಿದ್ದಾಳೆ. ಇದೇ ಸಮಯಕ್ಕೆ ರಾಜು ಅವರ ಅಕ್ಕ ಶೋಭಾ ಅವರು ತಾಯಿಯ ಬಳಿ ತೆರಳಿ ಪರಿಶೀಲಿಸಿದಾಗ ಚಿನ್ನದ ಸರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದು, ಖತರ್ನಾಕ್‌ ಕಳ್ಳಿಯ ಪತ್ತೆಗೆ ಪೊಲೀಸರು ಶೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗಿನಲ್ಲಿ ಯುವತಿಯ ಕೊಲೆ: ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ನಕಲಿ ಚಿನ್ನ ಇರಿಸಿ ಅಸಲಿ ಚಿನ್ನ ಕಳವು
ಹತ್ತು ನಿಮಿಷದ ಅಂತರದಲ್ಲಿ ಚಾಲಾಕಿ ವಂಚಕಿ ಇಬ್ಬರು ಮಹಿಳಾ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾಳೆ. ವೈದ್ಯೆಯ ಸೋಗಿನಲ್ಲಿ ಬಂದಿದ್ದ ವಂಚಕಿ, ಇಬ್ಬರು ಮಹಿಳಾ ರೋಗಿಗಳ ಬಳಿ ತಪಾಸಣೆ ನೆಪದಲ್ಲಿ ಮೈಮೇಲಿನ ಚಿನ್ನಾಭರಣ ಬಿಚ್ಚಿಸಿ ಟೇಬಲ್‌ ಮೇಲೆ ಇರಿಸಿದ್ದಾಳೆ. ಬಳಿಕ ಅವರ ಗಮನ ಬೇರೆಡೆ ಸೆಳೆದು ಅಸಲಿ ಚಿನ್ನಾಭರಣ ಎತ್ತಿಕೊಂಡು ನಕಲಿ ಚಿನ್ನಾಭರಣ ಇರಿಸಿ ಪರಾರಿಯಾಗಿದ್ದಾಳೆ.

click me!