Bengaluru: ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ: ನಕಲಿ ಐಪಿಎಸ್‌ ಅಧಿಕಾರಿ ಪೊಲೀಸರ ಬಲೆಗೆ!

Published : Jun 12, 2023, 11:08 AM IST
Bengaluru: ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ: ನಕಲಿ ಐಪಿಎಸ್‌ ಅಧಿಕಾರಿ ಪೊಲೀಸರ ಬಲೆಗೆ!

ಸಾರಾಂಶ

ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ವರ್ಗಾವಣೆ ಮಾಡಿಸುವುದಾಗಿ ಹಲವರನ್ನು ನಂಬಿಸಿ ಲಕ್ಷಾಂತರ ರುಪಾಯಿ ಹಣ ಪಡೆದು ವಂಚಿಸಿದ ಆರೋಪದಡಿ ನಕಲಿ ಐಪಿಎಸ್‌ ಅಧಿಕಾರಿಯೊಬ್ಬನನ್ನು ಕಾಟನ್‌ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಜೂ.12): ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ವರ್ಗಾವಣೆ ಮಾಡಿಸುವುದಾಗಿ ಹಲವರನ್ನು ನಂಬಿಸಿ ಲಕ್ಷಾಂತರ ರುಪಾಯಿ ಹಣ ಪಡೆದು ವಂಚಿಸಿದ ಆರೋಪದಡಿ ನಕಲಿ ಐಪಿಎಸ್‌ ಅಧಿಕಾರಿಯೊಬ್ಬನನ್ನು ಕಾಟನ್‌ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಮೂಲದ ಭುವನ್‌ ಕುಮಾರ್‌ ಅಲಿಯಾಸ್‌ ವಿಶುಕುಮಾರ್‌ ಅಲಿಯಾಸ್‌ ಅರ್ಜುನ್‌(45) ಬಂಧಿತ. ಮಲ್ಲೇಶ್ವರ ನಿವಾಸಿ ರಾಘವೇಂದ್ರ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ರಾಘವೇಂದ್ರ ಅವರು ಫೈನಾನ್ಸ್‌ ವ್ಯವಹಾರ ನಡೆಸುತ್ತಿದ್ದಾರೆ. ಕಳೆದ ವರ್ಷ ಹನುಮಂತ ನಾಯ್ಡು ಎಂಬುವವರು ಆರೋಪಿ ವಿಶುಕುಮಾರ್‌ನನ್ನು ಸಿಸಿಬಿ ಡಿವೈಎಸ್ಪಿ ಎಂದು ರಾಘವೇಂದ್ರ ಅವರಿಗೆ ಪರಿಚಯಿಸಿದ್ದರು. ಬಳಿಕ ವಿಶುಕುಮಾರ್‌ ಪೊಲೀಸ್‌ ಇಲಾಖೆಯಲ್ಲಿ ನಡೆಯುವ ದಾಳಿಗಳು ಹಾಗು ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಆಗಾಗ ರಾಘವೇಂದ್ರ ಅವರಿಗೆ ಹಂಚಿಕೊಂಡಿದ್ದರಿಂದ ಆರೋಪಿ ಅಸಲಿ ಪೊಲೀಸ್‌ ಅಧಿಕಾರಿಯೇ ಇರಬೇಕು ಎಂದು ನಂಬಿದ್ದಾರೆ.

ಸಾಲ ವಾಪಾಸ್‌ ಕೇಳಿದ್ದಕ್ಕೆ ತಮ್ಮನಿಂದಲೇ ನಿರ್ದೇಶಕನಿಗೆ ಕೊಲೆ ಬೆದರಿಕೆ: ಎಫ್‌ಐಆರ್‌ ದಾಖಲು

25 ಲಕ್ಷ ಸಾಲ ಪಡೆದ!: ಕೆಲ ದಿನಗಳ ಬಳಿಕ 25 ಲಕ್ಷವನ್ನು ತುರ್ತು ಅಗತ್ಯವಿರುವುದಾಗಿ ರಾಘವೇಂದ್ರ ಅವರನ್ನು ವಿಶುಕುಮಾರ್‌ ಕೇಳಿದ್ದಾನೆ. ಮೂರು ತಿಂಗಳೊಳಗೆ ಬಡ್ಡಿ ಸಹಿತ ಹಣ ವಾಪಾಸ್‌ ಕೊಡುವುದಾಗಿ ಹೇಳಿದ್ದಾನೆ. ನಗದು ರೂಪದಲ್ಲೇ ಹಣ ಬೇಕು ಎಂದು ಕೇಳಿದ್ದಾನೆ. ನಗದು ರೂಪದಲ್ಲೇ ಹಣ ಏಕೆ ಎಂದಾಗ, ‘ನಾನು ಪೊಲೀಸ್‌ ಅಧಿಕಾರಿ ಆಗಿರುವುದರಿಂದ ದೊಡ್ಡ ಮೊತ್ತದ ಹಣವನ್ನು ಅಕೌಂಟ್‌ ಮುಖಾಂತರ ಪಡೆದರೆ ತೊಂದೆಯಾಗಲಿದೆ’ ಎಂದು ಹೇಳಿದ್ದಾನೆ. ಈತನ ಮಾತು ನಂಬಿದ ರಾಘವೇಂದ್ರ, ಸ್ನೇಹಿತ ಶಂಕರ್‌ ರೆಡ್ಡಿ ಎಂಬುವವರಿಂದ 10 ಲಕ್ಷ, ನಿತಿನ್‌ ಎಂಬುವವರಿಂದ 10 ಲಕ್ಷವನ್ನು ಆರೋಪಿ ವಿಶುಕುಮಾರ್‌ ನೀಡಿದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿದ್ದಾರೆ. ಅಂತೆಯೇ ತಮ್ಮ ಬಳಿಯಿದ್ದ .5 ಲಕ್ಷವನ್ನು ನಗದು ರೂಪದಲ್ಲಿ ನೀಡಿದ್ದಾರೆ.

ಸಾಲ ವಾಪಸ್‌ ಕೇಳಿದ್ದಕ್ಕೆ ಜೀವ ಬೆದರಿಕೆ: ಕಳೆದ ಫೆಬ್ರವರಿಯಲ್ಲಿ ವ್ಯವಹಾರದಲ್ಲಿ ಕೊಂಚ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ರಾಘವೇಂದ್ರ ಅವರು, ಸಾಲದ ಹಣ ವಾಪಸ್‌ ಕೊಡುವಂತೆ ವಿಶುಕುಮಾರ್‌ನನ್ನು ಕೇಳಿದ್ದಾರೆ. ಈ ವೇಳೆ ಆರೋಪಿಯು ಸಬೂಬು ಹೇಳಿ ಕಾಲಹರಣ ಮಾಡಿದ್ದಾನೆ. ರಾಘವೇಂದ್ರ ಅವರು ಕರೆ ಮಾಡಿದಾಗ ಕರೆ ಸ್ವೀಕರಿಸದೆ ನಿರ್ಲಕ್ಷಿಸಿದ್ದಾನೆ. ಕರೆ ಸ್ವೀಕರಿಸಿದಾಗ, ‘ನಾನು ಡಿವೈಎಸ್ಪಿ. ನೀನು ಕರೆ ಮಾಡಿದಾಗಲೆಲ್ಲಾ ಸ್ವೀಕರಿಸಿ ಮಾತನಾಡಲು ಸಾಧ್ಯವಿಲ್ಲ. ನಾನೇ ಕರೆ ಮಾಡುತ್ತೇನೆ’ ಎಂದು ಸುಮ್ಮನಾಗಿದ್ದಾನೆ. ಬಳಿಕ ರಾಘವೇಂದ್ರ ಅವರು ಮತ್ತೆ ಮತ್ತೆ ಕರೆ ಮಾಡಿ ಹಣ ವಾಪಾಸ್‌ ಕೊಡುವಂತೆ ಕೇಳಿದಾಗ, ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಘವೇಂದ್ರ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ.

‘ನೀನು ಯಾವ ಸ್ಟೇಷನ್‌ಗೆ ಹೋಗುತ್ತಿಯೋ ಹೋಗು. ಎಲ್ಲ ಕಡೆ ನನಗೆ ಲಿಂಕ್‌ ಇದೆ. ಕೊಲೆ ಆರೋಪಿಗಳು ನನ್ನ ಸಂಪರ್ಕದಲ್ಲಿ ಇದ್ದಾರೆ. ಅವರಿಂದ ನಿನ್ನನ್ನು ಕೊಲೆ ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ‘ಹಣ ಪಡೆಯುವಾಗ ನಾನು ನೀಡಿರುವ ಚೆಕ್‌ಗಳನ್ನು ಹರಿದು ಹಾಕಿ, ನಿನ್ನ ಪಾಡಿಗೆ ನೀನು ಜೀವನ ಮಾಡಿಕೊಂಡು ಹೋಗು’ ಎಂದು ಹೆದರಿಸಿದ್ದಾನೆ. ಕೆಲ ದಿನ ಈತನ ಬೆದರಿಕೆಯಿಂದ ಸುಮ್ಮನಿದ್ದ ರಾಘವೇಂದ್ರ ಬಳಿಕ ಧೈರ್ಯ ಮಾಡಿ, ಆರೋಪಿ ವಿಶುಕುಮಾರ್‌ ಬಗ್ಗೆ ಪೊಲೀಸ್‌ ಇಲಾಖೆಯಲ್ಲಿ ವಿಚಾರಿಸಿದಾಗ, ಈತ ನಕಲಿ ಅಧಿಕಾರಿ ಎಂಬುದು ಗೊತ್ತಾಗಿದೆ. ಬಳಿಕ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಗಡ ಡ್ಯಾಮ್‌ನಲ್ಲಿ ಬಿದ್ದು ಬೆಳಗಾವಿ ಸಹೋದರರ ಸಾವು

ಪ್ರಕರಣ ಸಿಸಿಬಿ ವರ್ಗಾವಣೆ?: ಆರೋಪಿ ವಿಶುಕುಮಾರ್‌ ವಂಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ಡಿವೈಎಸ್ಪಿ, ಎಸಿಪಿ, ಎಸ್ಪಿ, ಐಪಿಎಸ್‌ ಅಧಿಕಾರಿ ಎಂದು ಅಮಾಯಕರನ್ನು ನಂಬಿಸಿ ಲಕ್ಷಾಂತರ ಹಣ ಪಡೆದು ವಂಚಿಸಿದ್ದಾನೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ಹಾಗೂ ವರ್ಗಾವಣೆ ಮಾಡಿಸುವುದಾಗಿ ಸರ್ಕಾರಿ ಅಧಿಕಾರಿಗಳ ಬಳಿಯೇ ಲಕ್ಷಾಂತರ ಹಣ ಪಡೆದು ಟೋಪಿ ಹಾಕಿದ್ದಾನೆ. ವರ್ಗಾವಣೆ ಮಾಡಿಸುವುದಾಗಿ ಕೆಳ ಹಂತದ ಪೊಲೀಸರ ಬಳಿಯೂ ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ. ಪೊಲೀಸರ ಹೆಸರು, ಸಿಸಿಬಿ ಹೆಸರು ದುರ್ಬಳಕೆ ಮಾಡಿಕೊಂಡು ಹಲವರಿಗೆ ವಂಚಿಸಿರುವುದರಿಂದ ಈ ಪ್ರಕರಣ ಸಿಸಿಬಿ ತನಿಖೆಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ