
ಬಂಟ್ವಾಳ (ಫೆ.17): ತಾಲೂಕಿನ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ತಂಡದಿಂದ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರ ತಂಡ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದ ಒಟ್ಟು ಬಂಧಿತರ ಸಂಕ್ಯೆ ಏಳಕ್ಕೆ ಏರಿದೆ.
ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿರುವ ಶಹೀರ್ ಬಾಬು (49), ಸ್ಥಳೀಯ ಆರೋಪಿ ಕೊಳ್ನಾಡು ಬಂಟ್ವಾಳ ನಿವಾಸಿ ಸಿರಾಜುದ್ದೀನ್ (37), ಬಂಟ್ವಾಳ ನಿವಾಸಿ ಮೊಹಮ್ಮದ್ ಇಕ್ಬಾಲ್ (38) ಹಾಗೂ ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್ (27) ಬಂಧಿತರು.
ಇದನ್ನೂ ಓದಿ: ಸಿಬಿಐ ಅಧಿಕಾರಿ ಸೋಗಿನಲ್ಲಿ ವಂಚನೆ: ವೃದ್ಧೆಗೆ ಕರೆ ಮಾಡಿ ₹42.85 ಲಕ್ಷ ಪಂಗನಾಮ! ನಿಮಗೂ ಇಂಥ ಕಾಲ್ ಬರಬಹುದು ಎಚ್ಚರ!
ಕೇರಳದ ಕೊಡಂಗಲ್ಲೂರು ಪೊಲೀಸ್ ಠಾಣೆಯ ಎಎಸ್‌ಐ ಶಹೀರ್ ಬಾಬು, ಇ.ಡಿ. ತಂಡವನ್ನು ಕಟ್ಟಿ ಅವರ ಯೋಜನೆಯಂತೆ ಈ ದಾಳಿ ನಡೆದಿತ್ತು. ಘಟನೆ ನಡೆದ ಬಳಿಕ ತನ್ನ ಪಾಲಿನ ಮೊತ್ತವನ್ನು ಪಡೆದುಕೊಂಡು ಎಂದಿನಂತೆ ತಮ್ಮ ಕೆಲಸಕ್ಕೆ ಮರಳಿದ್ದ. ಈತ ಮಂಗಳೂರಿಗೆ ಬಂದು ಯಾವ ರೀತಿಯಲ್ಲಿ ಯೋಜನೆ ರೂಪಿಸಬೇಕೆಂದು ಮಾರ್ಗದರ್ಶನ ಮಾಡುತ್ತಿದ್ದ. ಇ.ಡಿ. ಅಧಿಕಾರಿಗಳಂತೆ ನಟಿಸಲು ಮತ್ತು ದರೋಡೆ ನಡೆಸಲು ಹಾಗೂ ತಪ್ಪಿಸಿಕೊಳ್ಳಲು ಸಮಗ್ರ ಮಾಹಿತಿ ನೀಡಿದ್ದ.
ಶಹೀರ್ ಬಾಬು, ಘಟನೆ ನಡೆಯುವ ಆಸುಪಾಸಿನ ದಿನಗಳಲ್ಲಿ ಆಗಾಗ ರಜೆ ತೆಗೆಯುತ್ತಿದ್ದ. ಆರಂಭದಲ್ಲಿ ವಿಟ್ಲ ಪೊಲೀಸರು ತಂಡ ರಚಿಸಿ, ಖಚಿತ ಮಾಹಿತಿಯೊಂದಿಗೆ ಕೇರಳಕ್ಕೆ ತೆರಳಿ ದಾಳಿ ಮಾಡುವ ಮಾಹಿತಿ ಈತನಿಗೆ ತಿಳಿದು, ದರೋಡೆಕೋರರು ಪರಾರಿಯಾಗುವಂತೆ ಮಾಡಿದ್ದ.ಜ.3ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರಿನ ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಮನೆಗೆ ಇ.ಡಿ. ಅಧಿಕಾರಿಗಳ ಹೆಸರಲ್ಲಿ ದಾಳಿ ಮಾಡಿ ದರೋಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖಾ ತಂಡವು ಕೇರಳದ ಕೊಲ್ಲಂ ನಿವಾಸಿಗಳಾದ ಅನಿಲ್ ಫರ್ನಾಂಡಿಸ್ (49), ಸಚ್ಚಿನ್ ಟಿ.ಎಸ್. (29) ಹಾಗೂ ಶಬಿನ್ ಎಸ್. (27) ಎಂಬವರನ್ನು ಬಂಧಿಸಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: G Pay, PhonePeನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದ್ರೆ ಸೈಬರ್ ದಾಳಿಗೆ ತುತ್ತಾಗ್ತಾರಾ?
ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇ.ಡಿ. ಅಧಿಕಾರಿಯಂತೆ ನಟಿಸಿದ ಪ್ರಧಾನ ಆರೋಪಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್. ಮಾರ್ಗದರ್ಶನದಲ್ಲಿ, ಜಿಲ್ಲಾ ವ್ಯಾಪ್ತಿಯ ಠಾಣೆಗಳಿಂದ ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ