ನಕಲಿ ನೋಟು ಚಲಾವಣೆ ಕೇಸ್‌: ಅಪರಾಧಿಗೆ 4 ವರ್ಷ ಶಿಕ್ಷೆ ಪ್ರಕಟಿಸಿದ ಮಂಗಳೂರು ಕೋರ್ಟ್

By Suvarna News  |  First Published Feb 25, 2023, 10:31 PM IST

ನಕಲಿ ನೋಟುಗಳ ಚಲಾವಣೆ ಪ್ರಕರಣದ ಅಪರಾಧಿಗೆ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷಗಳ ಸಾದಾ ಸಜೆ ವಿಧಿಸಿದೆ.


ಮಂಗಳೂರು (ಫೆ.25): ನಕಲಿ ನೋಟುಗಳ ಚಲಾವಣೆ ಪ್ರಕರಣದ ಅಪರಾಧಿಗೆ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷಗಳ ಸಾದಾ ಸಜೆ ವಿಧಿಸಿದೆ. ಬಂಟ್ವಾಳ ಇರಾ ಗ್ರಾಮ ದರ್ಬೆ ಹೌಸ್‌ನ ಅಬ್ಬಾಸ್‌(53) ಶಿಕ್ಷೆಗೊಳಗಾದವನು. ಅಬ್ಬಾಸ್‌ 2019ರ ನವೆಂಬರ್‌ನಲ್ಲಿ ನಕಲಿ ನೋಟುಗಳನ್ನು (ಕಲರ್‌ ಜೆರಾಕ್ಸ್‌) ಮೂಲ್ಕಿ ಪರಿಸರದಲ್ಲಿ ಚಲಾವಣೆ ಮಾಡುತ್ತಿದ್ದಾಗ ಬಂಧಿಸಲ್ಪಟ್ಟಿದ್ದ. ಆತನಿಂದ 100 ರು. ಮುಖಬೆಲೆಯ ಒಟ್ಟು 16 ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಕಾರಿನೊಳಗೆ ಧೂಮಪಾನ ಮಾಡಿದ ಅಧಿಕಾರಿಗೆ ಬೆದರಿಕೆ ಹಾಕಿ ಹಣ,ಚಿನ್ನ ದೋಚಿದ ಬೈ

Tap to resize

Latest Videos

ಅಬ್ಬಾಸ್‌ 2019ರ ಅ.24ರಂದು ಮಂಗಳೂರಿನ ಫಳ್ನೀರ್‌ ರಸ್ತೆಯಲ್ಲಿರುವ ಜೆರಾಕ್ಸ್‌ ಅಂಗಡಿಯೊಂದಕ್ಕೆ ತೆರಳಿ 100 ರು. ಮುಖಬೆಲೆಯ ಮೂರು ಅಸಲಿ ನೋಟುಗಳನ್ನು ನೀಡಿ ಒಟ್ಟು 20 ಕಲರ್‌ ಜೆರಾಕ್ಸ್‌ ಮಾಡಿಸಿಕೊಂಡಿದ್ದ. ಅದೇ ವರ್ಷ ನ.5ರಂದು ಮೂಲ್ಕಿ ಪೇಟೆಯ ಅಂಗಡಿಯೊಂದಕ್ಕೆ ಒಂದು ನಕಲಿ ನೋಟನ್ನು ನೀಡಿ ಒಂದು ಬಾಟಲಿ ನೀರು, ಮತ್ತೊಂದು ಅಂಗಡಿಯಲ್ಲಿ ಇನ್ನೊಂದು ನೋಟು ನೀಡಿ ಬಿಸ್ಕಿಟ್‌ ಖರೀದಿಸಿದ್ದ. ಇನ್ನೊಂದು ಕಡೆ ಚಹಾ ಮತ್ತು ತಿಂಡಿ ಸೇವಿಸಿದ್ದ. ಅಲ್ಲದೆ ಮತ್ತೊಂದು ನೋಟನ್ನು ನೀಡಿ ಒಬ್ಬರಿಂದ ಚಿಲ್ಲರೆ ಪಡೆದುಕೊಂಡಿದ್ದ. ಹೀಗೆ ನಾಲ್ಕು ನೋಟುಗಳನ್ನು ಬಳಸಿಕೊಂಡಿದ್ದ. ಉಳಿದ ನೋಟುಗಳು ಆತನ ಬಳಿ ಇದ್ದವು. ಈತ ನೀಡಿದ್ದ ನೋಟಿನ ಬಗ್ಗೆ ಕೆಲವರಿಗೆ ಸಂದೇಹ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂಲ್ಕಿ ಠಾಣಾ ಪಿಎಸ್‌ಐ ಆಗಿದ್ದ ಶೀತಲ್‌ ಅಲಗೂರು, ಕಾನ್‌ಸ್ಟೆಬಲ್‌ ಸುರೇಶ್‌ ಅವರು ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ಬಂಧಿಸಿದ್ದರು.

ಇಷ್ಟದ ವ್ಯಕ್ತಿಯನ್ನು ವಿವಾಹವಾಗುವುದು ಮೂಲಭೂತ ಹಕ್ಕು, ಹೈಕೋರ್ಟ್ ಅಭಿಪ್ರಾಯ

ಇನ್ಸ್‌ಪೆಕ್ಟರ್‌ ಜಯರಾಮ ಗೌಡ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 489 (ಸಿ)ಯಂತೆ ನಾಲ್ಕುವರ್ಷಗಳ ಸಾದಾ ಶಿಕ್ಷೆ ಮತ್ತು 5,000 ರು. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಎರಡು ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. ಅಲ್ಲದೆ 489 (ಸಿ)ಯಂತೆ ಎರಡುವರ್ಷದ ಸಾದಾ ಸಜೆ ಮತ್ತು 2,500 ರು. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಒಂದು ತಿಂಗಳ ಸಾದಾ ಸಜೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್‌ ವಾದಿಸಿದ್ದಾರೆ.

click me!