ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸಗಾರನೊಬ್ಬ ತನ್ನ ಬ್ಯಾಗಿನಲ್ಲಿ ಸ್ಫೋಟಕ ವಸ್ತು ಇರಿಸಿಕೊಂಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆತನಿಂದ ಜಪ್ತಿ ಮಾಡಲಾದ ಸ್ಫೋಟಕ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬೆಂಗಳೂರು (ಮಾ.22): ತನ್ನ ಬ್ಯಾಗ್‌ನಲ್ಲಿ ಸ್ಫೋಟಕ ವಸ್ತು ಇರಿಸಿಕೊಂಡಿದ್ದ ಆರೋಪದ ಮೇರೆಗೆ ಹೋಟೆಲ್‌ನ ಕೆಲಸಗಾರನೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಜಪ್ತಿ ಮಾಡಲಾದ ಕೆಂಪು ಬಣ್ಣದ ಬಾಲ್ ಆಕಾರದ ಸ್ಫೋಟಕ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೋಗಿಲು ಮುಖ್ಯರಸ್ತೆಯ ಬೆಳ್ಳಳ್ಳಿ ನಿವಾಸಿ ಅಬ್ದುಲ್ ರೆಹಮಾನ್ (23) ಬಂಧಿತ. ಈ ಸಂಬಂಧ ಸಂಪಿಗೆಹಳ್ಳಿ ಠಾಣೆ ಪಿಎಸ್‌ಐ ಕುಪೇಂದ್ರ ಅವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಸ್ಫೋಟಕ ಅಧಿನಿಯಮ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ಇತ್ತೀಚೆಗೆ ಥಣಿಸಂದ್ರ ಮುಖ್ಯರಸ್ತೆಯ ಶ್ರೀದೇವಿ ವೈಭವ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿ ಅಬ್ದುಲ್‌ನನ್ನು ಆಧಾರ್ ಕಾರ್ಡ್ ಕೊಡುವಂತೆ ಹೋಟೆಲ್ ಮಾಲೀಕರು ಕೇಳಿದ್ದರು. ಕೊಡುವುದಾಗಿ ಹೇಳಿ 2 ದಿನ ಕಳೆದರೂ ಆಧಾರ್ ಕೊಟ್ಟಿರಲಿಲ್ಲ. ಹೀಗಾಗಿ ಹೋಟೆಲ್ ಸಿಬ್ಬಂದಿಯೊಬ್ಬರು ಶೆಡ್‌ನಲ್ಲಿದ್ದ ಆರೋಪಿಯ ಬ್ಯಾಗ್ ಪರಿಶೀಲಿಸಿದಾಗ ಕೆಂಪು ಬಣ್ಣದ ಬಾಲ್ ಆಕಾರದ ಸ್ಫೋಟಕ ವಸ್ತು ಪತ್ತೆಯಾಗಿದೆ. ಹೋಟೆಲ್ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನ ಬಳಿಯಿದ್ದ ಪ್ಲಾಸ್ಟಿಕ್ ಬಣ್ಣದ ಬ್ಯಾಗ್ ಪರಿಶೀಲಿಸಿದಾಗ ಕೆಂಪು ಬಣ್ಣದ ಚೆಂಡಿನಂತ ವಸ್ತುವಿನ ಮೇಲೆ ಬತ್ತಿಗಳು ಕಂಡು ಬಂದಿವೆ. ಈ ಬಗ್ಗೆ ಆತನನ್ನು ಪ್ರಶ್ನಿಸಿದಾಗ ತಡವರಿಸಿ ಅದು ಸ್ಫೋಟಕ ವಸ್ತು ಎಂದು ಹೇಳಿದ್ದಾನೆ. ಸ್ಫೋಟಕ ಇರಿಸಿಕೊಳ್ಳಲು ಲೈಸೆನ್ಸ್ ಇದೆಯೇ ಎಂದು ಕೇಳಿದಾಗ ಇಲ್ಲ ಎಂದಿದ್ದಾನೆ. ತಕ್ಷಣ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಅಯ್ಯೋ ಮಹದೇಶ್ವರ.. ತಾತ, ಅಪ್ಪ ಮಾಡಿದ ಸಾಲ ತೀರಿಸಲಾಗದೆ ಮಗ ಆತ್ಮ *ತ್ಯೆ!
ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ದಿನ ಕಸ್ಟಡಿಗೆ:
ಆರೋಪಿ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದರು. ನ್ಯಾಯಾಲಯವು ಆರೋಪಿಯನ್ನು5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಹೀಗಾಗಿ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಯಾವ ಉದ್ದೇಶದಿಂದ ಆ ಸ್ಫೋಟಕ ವಸ್ತುವನ್ನು ತನ್ನ ಬಳಿ ಇರಿಸಿಕೊಂಡಿದ್ದ. ಆತನ ಹಿನ್ನೆಲೆ ಏನು? ಸ್ಫೋಟದ ದುರದ್ದೇಶ ಇತ್ತೆ? ಆತನ ಕೈಗೆ ಸ್ಫೋಟಕವಸ್ತು ಹೇಗೆ ಸಿಕ್ಕಿತು ಎಂಬುದು ಪೊಲೀಸರ ವಿಚಾರಣೆಯಿಂದ ಹೊರಬರಬೇಕಿದೆ.
ಇದನ್ನೂ ಓದಿ: ಜೀವದ ಗೆಳೆಯ ಅಂತಾ ಒಟ್ಟಿಗೆ ಕುಡಿದ್ರೆ ಜೀವಕ್ಕೇ ಕುತ್ತು ಎಚ್ಚರ, ಈ ಸ್ಟೋರಿ ಒಮ್ಮೆ ಓದಿ!
ಆರೋಪಿ ಗೊಂದಲದ ಹೇಳಿಕೆ:
ಆರೋಪಿ ಅಬ್ದುಲ್ ರೆಹಮಾನ್ ಈ ಹಿಂದೆ ಬೆಳ್ಳಳ್ಳಿಯಲ್ಲಿ ಪರಿಚಿತರೊಬ್ಬರ ಬಳಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಬಳಿಕ ಆ ಕೆಲಸವನ್ನೂ ಬಿಟ್ಟು ರಸ್ತೆ ಬದಿ ಚಿಂದಿ ಹೆಕ್ಕುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಪೊಲೀಸರ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಹೆಚ್ಚಿನ ತನಿಖೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಆರೋಪಿ ಬಳಿಯಿದ್ದ ಆ ಸ್ಫೋಟಕ ಯಾವ ಮಾದರಿಯದ್ದು ಎಂಬುದು ಗೊತ್ತಾಗಲಿದೆ.