ಪೇಯಿಂಗ್ ಗೆಸ್ಟ್ (ಪಿ.ಜಿ.) ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್‌ರೇಟಿಂಗ್ ಕೊಟ್ಟು ಚೆನ್ನಾಗಿಲ್ಲ ಎಂದು ಕಾಮೆಂಟ್ ಹಾಕಿದ್ದಕ್ಕೆ ಪಿ. ಜಿ. ಮಾಲೀಕ ಮತ್ತು ಆತನ ಸಹಚರರು ಸೇರಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಕದ್ರಿಯಲ್ಲಿ ಸಂಭವಿಸಿದೆ.
ಮಂಗಳೂರು (ಮಾ.21): ಪೇಯಿಂಗ್ ಗೆಸ್ಟ್ (ಪಿ.ಜಿ.) ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್‌ರೇಟಿಂಗ್ ಕೊಟ್ಟು ಚೆನ್ನಾಗಿಲ್ಲ ಎಂದು ಕಾಮೆಂಟ್ ಹಾಕಿದ್ದಕ್ಕೆ ಪಿ. ಜಿ. ಮಾಲೀಕ ಮತ್ತು ಆತನ ಸಹಚರರು ಸೇರಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಕದ್ರಿಯಲ್ಲಿ ಸಂಭವಿಸಿದೆ. ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಕಲಿಯುತ್ತಿರುವ ಕಲಬುರಗಿ ಜಿಲ್ಲೆಯ ಮೂಲದ ವಿಕಾಸ್ (18) ಎಂಬಾತನ ಮೇಲೆ ಮಾರ್ಚ್ 17ರ ರಾತ್ರಿಗೆ ಹಲ್ಲೆ ನಡೆಸಲಾಗಿದೆ.
ಈ ಬಗ್ಗೆ ಕದ್ರಿ ದೇವಸ್ಥಾನದ ಬಳಿಯ ಪಿಜಿ ವಿರುದ್ಧ ವಿದ್ಯಾರ್ಥಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ವಿಕಾಸ್ ಕಳೆದ ಆರು ತಿಂಗಳಿನಿಂದ ಈ ಪಿಜಿಯಲ್ಲಿದ್ದು, ಊಟದಲ್ಲಿ ಹುಳ ಬಿದ್ದಿರುವುದು, ಶುಚಿತ್ವ ಇಲ್ಲದಿರುವುದು, ಅತಿ ಕೆಟ್ಟ ಶೌಚಾಲಯ ಇದರಿಂದ ಬೇಸತ್ತು ಬೇರೆ ಪಿ. ಜಿ. ಗೆ ಹೋಗಿದ್ದ. ಈ ಬಗ್ಗೆ ಗೂಗಲ್‌ನಲ್ಲಿ ಪಿ. ಜಿ. ಬಗ್ಗೆ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ಏನೂ ಚೆನ್ನಾಗಿಲ್ಲ ಎಂದು ಕಾಮೆಂಟ್ ಹಾಕಿದ್ದ.
ಇದನ್ನು ಗಮನಿಸಿದ ಪಿ. ಜಿ. ಮಾಲೀಕ ಸಂತೋಷ್ ಎಂಬಾತ, ಕಮೆಂಟ್ ಅಳಿಸಿ ಹಾಕುವಂತೆ ಬೆದರಿಕೆ ಹಾಕಿದ್ದ. ಅಳಿಸಿ ಹಾಕದಿರುವುದಕ್ಕೆ ಸಂತೋಷ್ ಮತ್ತು ಆತನ ಸಹಚರರು ಸೇರಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಕೈಯಿಂದ ಹಲ್ಲೆ ಮಾಡಿದ್ದು ತೊಂದರೆ ಇಲ್ಲ ಎಂದು ಹೇಳಿ ಪ್ರಕರಣ ದಾಖಲಿಸಲಾಗಿಲ್ಲ. ಪೊಲೀಸರು ದೂರು ಪಡೆದು ಹಿಂದಕ್ಕೆ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೊರೋನಾದಲ್ಲಿ ಹೆಣದಿಂದ ಬಿಜೆಪಿ ಹಣ ಮಾಡಿರುವುದು ಬಯಲು: ಸಚಿವ ಪ್ರಿಯಾಂಕ್ ಖರ್ಗೆ
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಘಟಕಿನಕೆರೆ ಜಾತ್ರೆ ಸಂಬಂದ ಪೊಲೀಸ್ ಇಲಾಖೆಯಿಂದ ಜೂಜು ಆಡಿಸಲು ಅನುಮತಿ ಪಡೆದಿದ್ದೇವೆ ಎಂದು ಊರಿನಾಚೆ ತೋಟದಲ್ಲಿ ಇಸ್ಪೀಟ್ ಆಡಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನವಳ್ಳಿ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಪೊಲೀಸರನ್ನು ಕಂಡ ತಕ್ಷಣ ನಮ್ಮ ಊರಿನ ಜಾತ್ರೆ ನಮ್ಮ ಇಷ್ಟವೆಂದು ಗಲಾಟೆ ಮಾಡಿದ್ದು, ಮಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣ ಹೊನ್ನವಳ್ಳಿ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಹಾಗೂ ಸಿಬ್ಬಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.