ಅವರಿವರನ್ನ ಮನೆಗೆ ಕರೆಯಬೇಡ ಎಂದು ತಮ್ಮನಾಗಿ ಬೈದು ಬುದ್ಧಿ ಹೇಳಿದ್ದೇ ತಪ್ಪಾಯ್ತು! ಅಕ್ಕನೇ ಒಡಹುಟ್ಟಿದ ತಮ್ಮನನ್ನು ಕೊಲೆ ಮಾಡಿಸಿಬಿಟ್ಟಳು ಕಲ್ಬುರ್ಗಿಯಲ್ಲಿ ನಡೆದಿರುವ ಈ ಕೊಲೆಯಿಂದ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ
ಕಲಬುರಗಿ (ಆ.2) : ಅವರಿವರನ್ನ ಮನೆಗೆ ಕರೆಯಬೇಡ ಎಂದು ತಮ್ಮನಾಗಿ ಬೈದು ಬುದ್ಧಿ ಹೇಳಿದ್ದೇ ತಪ್ಪಾಯ್ತು! ಅಕ್ಕನೇ ಒಡಹುಟ್ಟಿದ ತಮ್ಮನನ್ನು ಕೊಲೆ ಮಾಡಿಸಿಬಿಟ್ಟಳು ಈ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ಗಾಜೀಪೂರ(Gaajipoor) ಬಡಾವಣೆಯ ನಿವಾಸಿ ನಾಗರಾಜ್ ಮಟಮಾರಿ(Nagaraj Matmari) ಎನ್ನುವಾತನೇ ಕೊಲೆಯಾದ ಸಹೋದರ. ಕಳೆದ ಜುಲೈ 28 ರಂದು ಕಲಬುರಗಿ ನಗರದಿಂದ ಆಳಂದಗೆ ತೆರಳುವ ಮಾರ್ಗಮಧ್ಯದ ಕೆರೆ ಭೋಸಗಾ(Bhosga) ಗ್ರಾಮದ ಬಳಿ ನಿರ್ಜನ ಪ್ರದೇಶದಲ್ಲಿ ನಾಗರಾಜನ ಶವ ಪತ್ತೆಯಾಗಿತ್ತು. ಮೈ ಮೇಲೆ ಅಲ್ಲಲ್ಲಿ ಗಾಯಗಳು ಮತ್ತು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಲ್ಲದೇ ಅದೇ ಸ್ಥಳದಲ್ಲಿ ಕೆಲವು ಸರಾಯಿ ಬಾಟಲಿ, ಪ್ಲಾಸ್ಟಿಕ್ ಗ್ಲಾಸ್ ಮತ್ತು ಸ್ನ್ಯಾಕ್ಸ ಪೊಟ್ಟಣಗಳು ಬಿದ್ದಿದ್ದು ಪಾರ್ಟಿ ಮಾಡಿಸಿ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತವಾಗಿತ್ತು.
Suvarna FIR: ಊರ ಕಣ್ಣು .. ಯಾರ ಕಣ್ಣು ಬಿತ್ತು ನಮ್ಮ ಪ್ರೀತಿಮ್ಯಾಲೆ.. ಕಲಬುರಗಿ ಪ್ರೇಮ್ ಕಹಾನಿ ದುರಂತ ಅಂತ್ಯ!
undefined
ಪ್ರಕರಣ ಬೇಧಿಸಿದ ಪೋಲೀಸರು:
ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆ(kalburagi suburban police station)ಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದ ಪೋಲೀಸರು ಮೂರೇ ದಿನದಲ್ಲಿ ಹಂತಕರ ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅಚ್ಚು ಮೆಚ್ಚಿನ ಯುವಕ:
ಕೊಲೆಯಾದ ನಾಗರಾಜನಿಗೆ ತಂದೆ ಇಲ್ಲ. ತಾಯಿ ಮತ್ತು ನಾಲ್ವರು ಅಕ್ಕ ತಂಗಿಯರ ಜೊತೆಗೆ ಕಲಬುರಗಿ ನಗರದ ಗಾಜೀಪೂರ ಬಡಾವಣೆಯಲ್ಲಿ ವಾಸವಾಗಿದ್ದಾನೆ. ವಿಪರೀತ ಕುಡಿತನ ಚಟ ಹೊಂದಿದ್ದ ನಾಗರಾಜ, ಮನೆಗೆ ಬರೋದೇ ಊಟ ಮಾಡಲು ಮತ್ತು ನಿದ್ರೆ ಮಾಡಲು ಮಾತ್ರ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್ ಬಡಾವಣೆಯ ಜನತೆಯ ಪಾಲಿಗೆ ಮಾತ್ರ ಅಚ್ಚು ಮೆಚ್ಚಿನ ಯುವಕನಾಗಿದ್ದ.
ಮನೆಯಲ್ಲೇ ನಡೆದಿತ್ತು ಮಸಲತ್ತು:
ಕೆರೆ ಭೋಸಗಾ ಬಳಿ ಶವ ಸಿಕ್ಕ ನಂತರ ಪರಿಶೀಲಿಸಲಾಗಿ, ಇದು ಗಾಜೀಪೂರ ಬಡಾವಣೆಯ ನಾಗರಾಜ್ ಎನ್ನುವುದು ಗೊತ್ತಾಗುತ್ತದೆ. ಈ ಮಾಹಿತಿ ತಿಳಿದು ಬಡಾವಣೆಯ ನಾಗರೀಕರು, ಕುಟುಂಬದವರು , ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಧಾವಿಸಿ ಬರ್ತಾರೆ. ನಾಗರಾಜನ ತಾಯಿ ಮತ್ತು ಸಹೋದರಿಯರು ಸ್ಥಳದಲ್ಲಿದ್ದು ಕಣ್ಣಿರು ಸುರಿಸ್ತಾರೆ. ನಾಗರಾಜನ ತಾಯಿ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ಶುರು ಮಾಡಿದಾಗ ಬೆಚ್ಚಿ ಬೀಳಿಸುವ ಅಂಶ ಬಯಲಾಗುತ್ತದೆ.
Crime News; ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಮಗಳ ಕತ್ತು ಸೀಳಿದ ಕಲಬುರಗಿಯ ಪಾಪಿ
ಕೌಟುಂಬಿಕ ಹಿನ್ನಲೆ, ಮೊಬೈಲ್ ಲೊಕೇಷನ್, ಪಾರ್ಟಿ ಮಾಡಿದವರ ಮಾಹಿತಿ ಎಲ್ಲವನ್ನೂ ಕಲೆ ಹಾಕಿದಾಗ ಪೊಲೀಸರಿಗೆ ಕೊಲೆಗಡುಕರ ಸುಳಿವು ಸಿಗುತ್ತದೆ. ಆ ಪ್ರಕಾರ ಅದೇ ಗಾಜೀಪೂರ ಬಡಾವಣೆಯ ಅವಿನಾಶ ಎನ್ನುವಾತನನ್ನು ಮೊದಲು ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಕೊಲೆಯ ಮಹತ್ವದ ಸುಳಿವು ಲಭ್ಯವಾಗುತ್ತದೆ. ಅಷ್ಟೇ ಅಲ್ಲ ನಾನು ಮತ್ತು ನನ್ನ ಸ್ನೇಹಿತರು ಸೇರಿಕೊಂಡು ಕೊಲೆ ಮಾಡಿದ್ದಾಗಿ ಅವಿನಾಶ ಪೊಲೀಸರ ಮುಂದೆ ಒಪ್ಪಿಕೊಳ್ಳುತ್ತಾನೆ.
ಅವಿನಾಶ ಕೊಲೆ ಮಾಡಿದ್ಯಾಕೆ ಗೊತ್ತಾ ?
ಇದೇ ಗಾಜಿಪುರ್ ಬಡಾವಣೆಯ ನಿವಾಸಿಯಾಗಿರುವ ಅವಿನಾಶ, ರೌಡಿ ಶೀಟರ್ ಸಹ ಆಗಿದ್ದ. ಪೇಂಟರ್ ನಾಗರಾಜನ ಕೊಲೆಗೂ ಈ ಅವಿನಾಶನಿಗೂ ಏನು ಸಂಬಂಧ ? ಅವಿನಾಶ ಕೊಲೆ ಮಾಡಿದ್ದಾದ್ರೂ ಏಕೆ ? ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಬೆಚ್ಚಿ ಬೀಳಿಸುವ ಅಂಶ ಬಯಲಾಗುತ್ತದೆ.
50 ಸಾವಿರ ಸುಫಾರಿ ಪಡೆದು ಕೊಲೆ :
ಕೊಲೆ ಆರೋಪ ಒಪ್ಪಿಕೊಂಡ ಅವಿನಾಶ್, ನಾನು ಮತ್ತು ನನ್ನ ಸ್ನೇಹಿತರಾದ ರೋಹಿತ್ ಆಸಿಫ್ ಮೋಸಿನ್ ಸೇರಿಕೊಂಡು ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿಕೊಳ್ಳುತ್ತಾನೆ. ಐವತ್ತು ಸಾವಿರ ರೂಪಾಯಿ ಸುಪಾರಿ ಪಡೆದು ಈ ಕೊಲೆ ಮಾಡಿದ್ದಾಗಿ ಅವಿನಾಶ ಮತ್ತೊಂದು ಸ್ಪೋಟಕ ಹೇಳಿಕೆ ಬಿಚ್ಚಿಡುತ್ತಾನೆ.
ಸುಫಾರಿ ಕೊಟ್ಟದ್ದು ಸ್ವಂತ ಅಕ್ಕ:
ಈ ಅವಿನಾಶ್ ಹಾಗೂ ಸ್ನೇಹಿತರು ಸೇರಿ 50,000 ಸುಫಾರಿ ಗೆ ಕೊಲೆ ಮಾಡಿದ್ದಾರೆ. ಆದ್ರೆ ತನ್ನ ಪಾಡಿಗೆ ತಾನು ಕುಡಿದು ಸದಾ ನಶೆಯಲ್ಲಿ ಇರುತ್ತಿದ್ದ ನಾಗರಾಜನೇ ಕೊಲೆಗೆ ಸುಫಾರಿ ಕೊಟ್ಟಿದ್ದಾದರೂ ಯಾರು ಗೊತ್ತಾ ? ಪೇಂಟರ್ ನಾಗರಾಜನ ಕೊನೆಗೆ ಅವಿನಾಶಗೆ ಸುಫಾರಿ ಕೊಟ್ಟದ್ದು ಬೇರಾರು ಅಲ್ಲ ಕೊಲೆಯಾದ ನಾಗರಾಜನ ಅಕ್ಕ ಸುನಿತಾ. ಹೌದು ! ಇದು ಅಚ್ಚರಿಯಾದರೂ ಅಪ್ಪಟ ಸತ್ಯ. ಸಹೋದರಿಯೆ, ತನ್ನ ಒಡಹುಟ್ಟಿದ ತಮ್ಮನನ್ನು ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕೊಲೆಗೆ ಕಾರಣ ಬುದ್ದಿವಾದ:
ನಾಗರಾಜ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರ ಜೊತೆ ವಾಸಿಸುತ್ತಿದ್ದ. ಆ ಪೈಕಿ ಇಬ್ಬರು ಸಹೋದರಿಯರು ಮದುವೆಯಾಗಿದ್ದರು ಸಹ ತವರಿನಲ್ಲಿಯೇ ವಾಸಿಸುತ್ತಿದ್ದರು. ಅದರಲ್ಲಿ ಸುನಿತಾ ಸಹ ಒಬ್ಬಳು. ಸುನಿತಾ ಜೊತೆಗೆ ಸ್ನೇಹ ಹೊಂದಿದ್ದ ರೌಡಿಶೀಟರ್ ಅವಿನಾಶ್, ಆಗಾಗ ಇವರ ಮನೆಗೆ ಆಗಮಿಸುತ್ತಿದ್ದ. ಇದು ನಾಗರಾಜ್ ಗೆ ಇಷ್ಟ ಆಗುತ್ತಿರಲಿಲ್ಲ. ಮನೆಗೆ ಯಾರನ್ನೂ ಸೇರಿಸಿಕೊಳ್ಳಬೇಡಿ ಎಂದು ನಾಗರಾಜ ತನ್ನ ಸಹೋದರಿಯರಿಗೆ ಬೈದು ಬುದ್ಧಿವಾದ ಹೇಳುತ್ತಿದ್ದ. ಇದೇ ವಿಚಾರಕ್ಕಾಗಿ ನಾಗರಾಜ ಮತ್ತು ಅವನ ಸಹೋದರಿಯರ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಕೊಲೆಯಾಗುವ ಎರಡು ದಿನ ಮುನ್ನವೂ ಕೂಡ ನಾಗರಾಜ ತನ್ನ ಸಹೋದರಿಯ ಜೊತೆ ಇದೇ ಕಾರಣಕ್ಕಾಗಿ ತೀವ್ರ ಜಗಳ ನಡೆಸಿದ್ದ. ಇದರಿಂದ ಕೆರಳಿದ ಅಕ್ಕ ಸುನಿತಾ , ಒಡಹುಟ್ಟಿದ ತಮ್ಮನನ್ನು ಮುಗಿಸಲು ಗೆಳೆಯ ಅವಿನಾಶ್ ಜೊತೆ ಸೇರಿ ಸ್ಕೆಚ್ ರೂಪಿಸುತ್ತಾಳೆ. ನಿನಗೆ 50,000 ಕೊಡುತ್ತೇನೆ ಈ ಕೆಲಸ ಮಾಡಿ ಬಿಡು ಎಂದು ಅವಿನಾಶಗೆ ಮನವರಿಸುತ್ತಾಳೆ. ಅದರ ಪ್ರಕಾರ ಅವಿನಾಶ್, ತನ್ನ ಗೆಳೆಯರ ಜೊತೆ ಕೂಡಿಕೊಂಡು ನಾಗರಾಜ ನನ್ನ ಕೊಲೆ ಮಾಡಿಯೇ ಬಿಡುತ್ತಾನೆ.
ಆರು ಜನರ ಬಂಧನ :
ಈ ಪ್ರಕರಣದ ತನಿಖೆ ಕೈಗೊಂಡಿರುವ ಕಲ್ಬುರ್ಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯ ಪೊಲೀಸರು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ರೌಡಿಶೀಟರ್ ಅವಿನಾಶ್ ಆತನ ಸ್ನೇಹಿತರಾದ ರೋಹಿತ್ ಆಸಿಫ್ ಮೋಷಿನ್ ಹಾಗೂ ಕೊಲೆಯಾದ ನಾಗರಾಜನ ಅಕ್ಕ ಸುನಿತಾ ಅವರೇ ಬಂದಿತ ಆರೋಪಿಗಳು. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.