ಸೈಬರ್​ ಕ್ರೈಂಗೆ ಬಲಿಯಾಗಬಾರ್ದಾ? ದುಡ್ಡು ಸೇಫ್​ ಆಗಿರ್ಬೇಕಾ? ಹಾಗಿದ್ರೆ ಕನ್ನಡದಲ್ಲಿ ಮಾತನಾಡಿ! ಪೊಲೀಸ್​ ಅಧಿಕಾರಿ ಮಾತು ಕೇಳಿ

Published : Dec 19, 2024, 12:49 PM ISTUpdated : Dec 20, 2024, 02:23 PM IST
ಸೈಬರ್​ ಕ್ರೈಂಗೆ ಬಲಿಯಾಗಬಾರ್ದಾ? ದುಡ್ಡು ಸೇಫ್​ ಆಗಿರ್ಬೇಕಾ? ಹಾಗಿದ್ರೆ ಕನ್ನಡದಲ್ಲಿ ಮಾತನಾಡಿ! ಪೊಲೀಸ್​ ಅಧಿಕಾರಿ ಮಾತು ಕೇಳಿ

ಸಾರಾಂಶ

ಸೈಬರ್​ ಕ್ರೈಂ ತಡೆಗೆ ಡಿವೈಎಸ್ಪಿ ರಾಜೇಶ್​ ಸಲಹೆ: ಅಪರಿಚಿತ ಕರೆ, ಲಿಂಕ್​ಗಳಿಗೆ ಸ್ಪಂದಿಸಬೇಡಿ, ಒಟಿಪಿ ಹಂಚಿಕೊಳ್ಳಬೇಡಿ. ಸೈಬರ್​ ವಂಚಕರಿಗೆ ಪ್ರಾದೇಶಿಕ ಭಾಷೆ ಗೊತ್ತಿಲ್ಲದ್ದರಿಂದ ಕನ್ನಡದಲ್ಲಿ ಮಾತನಾಡಿ ಕರೆ ಕಟ್​ ಮಾಡಿಸಿ. ಹಣ ವರ್ಗಾವಣೆಗೆ ಮುನ್ನ ಎಚ್ಚರಿಕೆ ವಹಿಸಿ. ಮ್ಯಾಟ್ರಿಮೋನಿ ಸೈಟ್​ಗಳ ಬಗ್ಗೆ ಎಚ್ಚರ. ಇಲ್ಲಿದೆ ಡಿಟೇಲ್ಸ್​...

ಇಂದು ತಂತ್ರಜ್ಞಾನ ಮುಂದುವರೆದಂತೆಲ್ಲಾ ಸೈಬರ್​ ಕ್ರೈಂ ಹೆಚ್ಚಾಗುತ್ತಿದೆ. ಫೋನ್​ಗಳಲ್ಲಿ ಕರೆ ಮಾಡಿ ಅದನ್ನು ಒತ್ತಿ, ಇದನ್ನು ಒತ್ತಿ ಎನ್ನುವುದು, ಎರಡು ಗಂಟೆಗಳಲ್ಲಿ ನಿಮ್ಮ ಫೋನ್​ ನಂಬರ್​ ಬ್ಲಾಕ್​ ಆಗತ್ತೆ ಎನ್ನುವ ಕರೆ ಬರುವುದು, ಈಗ ಕಳುಹಿಸಿದ ಲಿಂಕ್​ ಒತ್ತಿದರೆ ನಿಮ್ಮ ಅಕೌಂಟ್​ಗೆ ಹಣ ವರ್ಗಾವಣೆ ಆಗುತ್ತದೆ ಎನ್ನುವುದು, ನಿಮಗೆ ಪಾರ್ಸೆಲ್​ ಬಂದಿದ್ದು ಅದನ್ನು ಕಸ್ಟಮ್ಸ್​ನವರು ಹಿಡಿದುಕೊಂಡಿದ್ದಾರೆ, ಕೂಡಲೇ ಇಷ್ಟು ಹಣ ಈ ಅಕೌಂಟ್​ಗೆ ಹಾಕಿ ಎನ್ನುವುದು... ಹೀಗೆ ಫೋನ್​ ಕರೆಗಳು, ಲಿಂಕ್​ಗಳು ಬರುವುದು ಸರ್ವೇ ಸಾಮಾನ್ಯವಾಗಿದೆ. ಇದನ್ನೆಲ್ಲಾ ನಂಬಿ ಬಂದಿರುವ ಲಿಂಕ್​ ಒತ್ತಿದ್ರೋ ಇಲ್ಲವೇ ಆ ನಂಬರ್​ ಒತ್ತಿ, ಈ ನಂಬರ್​ ಒತ್ತಿ ಎಂದಾಕ್ಷಣ ಆ ಸಂಖ್ಯೆಯನ್ನು ಹಿಂದೂ ಮುಂದೂ ನೋಡದೇ ಒತ್ತಿಬಿಟ್ಟರೋ ನಿಮ್ಮ ಬ್ಯಾಂಕ್ ಅಕೌಂಟ್​ ಖಾಲಿಯಾಗೋದು ಗ್ಯಾರೆಂಟಿ. ಇತ್ತೀಚೆಗಂತೂ ನಿಮ್ಮ ಮೊಬೈಲ್​ ನಂಬರ್​ ಮಿಸ್​ಯೂಸ್ ಆಗುತ್ತಿದ್ದು, ಎರಡು ಗಂಟೆಗಳಲ್ಲಿ ನಿಮ್ಮ ಮೊಬೈಲ್​ ಸಂಖ್ಯೆ ಸ್ಟಾಪ್​ ಆಗುತ್ತದೆ, ನಾವು ಮೊಬೈಲ್​ ಅಥಾರಿಯವರು ಕಾಲ್​ ಮಾಡುತ್ತಿದ್ದೇವೆ, ಕೂಡಲೇ 9 ಅನ್ನು ಒತ್ತಿ ಎಂಬ ಸಂದೇಶ ಹಲವರ ಮೊಬೈಲ್​ಗೆ ಬರುತ್ತಿದೆ. ಇದನ್ನು ನಂಬಿ ಎಲ್ಲಿ ಮೊಬೈಲ್​ ಬ್ಲಾಕ್​ ಆಗಿ ಹೋಗುತ್ತದೆ ಎಂದು ಒತ್ತಿಬಿಟ್ಟರೆ ನಿಮ್ಮ ತಲೆ ಮೇಲೆ ನೀವೇ ಚಪ್ಪಡಿ ಕಲ್ಲು ಎಳೆದುಕೊಂಡಂತೆ!

ಹೌದು. ಇಂಥ ಹಲವು ಸೈಬರ್​ ಕ್ರೈಂಗಳು ದಿನನಿತ್ಯ ನಡೆಯುತ್ತಲೇ ಇವೆ. ಮೊಬೈಲ್​ ಫೋನ್​ನಲ್ಲಿಯೇ ಹಣಕಾಸಿನ ವ್ಯವಹಾರವೂ ನಡೆಯುವ ಹಿನ್ನೆಲೆಯಲ್ಲಿ ಅಲ್ಲಿಗೆ ಬರುವ ಓಟಿಪಿಗಳನ್ನು ಮೂರನೆಯ ವ್ಯಕ್ತಿಗೆ ಹೇಳಿದರೆ, ಅಥವಾ ಲಿಂಕ್​ಗಳನ್ನು ಒತ್ತಿಬಿಟ್ಟರೆ ನಿಮ್ಮ ಜೀವನಪೂರ್ತಿ ದುಡಿಮೆಯ ದುಡ್ಡು ಬೇರೆಯವರ ಪಾಲಾಗುವುದು ಶತಃಸಿದ್ಧ. ಅದನ್ನು ವಾಪಸ್​ ಪಡೆಯುವುದು ಕೂಡ ಎಷ್ಟೋ ಬಾರಿ ಅಸಾಧ್ಯವಾಗಿರುವ ಮಾತೇ ಆಗಿದೆ. ಪೊಲೀಸ್​ ಠಾಣೆ, ಸೈಬರ್​ ಸೆಂಟರ್​ ಅಲೆದೂ ಅಲೆದೂ ನೀವು ಆಯಾಸಗೊಂಡರೂ ಯಾರಿಗೋ ಹೋಗಿರುವ ಹಣ ವಾಪಸ್​ ಬರುವುದು ಸುಲಭದ ಮಾತಲ್ಲ. ಈ ಬಗ್ಗೆ ಪೊಲೀಸರು ಅದೆಷ್ಟೇ ಸೂಚನೆ, ಎಚ್ಚರಿಕೆ ಕೊಟ್ಟರೂ, ಹಣದ ಆಸೆಗೆ ಲಿಂಕ್​ ಒತ್ತುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲಿಯೂ ಇಂಥದ್ದಕ್ಕೆ ಬಲಿಯಾಗುವುದು ಸುಶಿಕ್ಷಿತರು, ಎಜುಕೇಟೆಡ್​ ಎನ್ನಿಸಿಕೊಂಡವರೇ, ದೊಡ್ಡ  ದೊಡ್ಡ ಹುದ್ದೆಯಲ್ಲಿ ಇರುವವರೇ ಎನ್ನುವುದು ಕೂಡ ಸೋಜಿಗದ ಸಂಗತಿ.

ಖಾಸಗಿ ಫೋಟೋ ಇಟ್ಕೊಂಡು ಆಡಿಸ್ತಿದ್ದ, ಪೊಲೀಸ್‌ ಠಾಣೆಗೆ ಆಕೆ ಬಂದಾಗ... ಅಂದಿನ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್‌

ಇದೇ  ಕಾರಣಕ್ಕೆ ಡಿವೈಎಸ್ಪಿ ರಾಜೇಶ್​ ಅವರು ಒಂದು ಪರಿಹಾರ ನೀಡಿದ್ದಾರೆ. ರಾಜೇಶ್​ ಗೌಡ ಯೂಟ್ಯೂಬ್​ ಚಾನೆಲ್​ ಜೊತೆ ಮಾತನಾಡಿರುವ ರಾಜೇಶ್​ ಅವರು, ಇಂಥ ಸಂದೇಹಾತ್ಮಕ ಕರೆಗಳು ಬಂದರೆ,  ಕನ್ನಡದಲ್ಲಿ ಮಾತನಾಡುವುದೇ ದೊಡ್ಡ ಪರಿಹಾರ ಎಂದಿದ್ದಾರೆ! ಹೌದು. ಸೈಬರ್​ ಕ್ರೈಮ್​ನವರು ಹೆಚ್ಚಾಗಿ ಎಲ್ಲಿಂದಲೋ ಕುಳಿತು ಇಂಥ ಕಿತಾಪತಿ ಮಾಡುತ್ತಿರುತ್ತಾರೆ. ಅವರಿಗೆ ಇಂಗ್ಲಿಷ್​, ಹಿಂದಿ ಬಿಟ್ಟು ಪ್ರಾದೇಶಿಕ ಭಾಷೆ ಗೊತ್ತಿರುವುದಿಲ್ಲ. ಒಂದು ವೇಳೆ ಅವರು ಈ ರೀತಿಯ ಯಾವುದೇ ಸಂದೇಹಾತ್ಮಕವಾಗಿ ಮಾತನಾಡಿದರೆ ನಿಮಗೆ ಇಂಗ್ಲಿಷ್​, ಹಿಂದಿ ಗೊತ್ತು ಎಂದು ಪೋಸ್​ ಕೊಡಲು ಹೋಗಬೇಡಿ. ಕನ್ನಡದಲ್ಲಿ ಮಾತನಾಡಿ. ಆಗ ಅವರೇ ಕರೆ ಕಟ್​ ಮಾಡುತ್ತಾರೆ. ಅದನ್ನು ಬಿಟ್ಟು ನಿಮಗೆ ಎಲ್ಲಾ ಭಾಷೆ ಗೊತ್ತು ಎಂದು ಅವರ ಬಳಿ ಇಂಗ್ಲಿಷ್​, ಹಿಂದಿಯಲ್ಲಿ ಮಾತನಾಡಿದರೆ ನಿಮ್ಮನ್ನು ಮರಳು ಮಾಡಿ ಸುಲಭದಲ್ಲಿ ಫೂಲ್​ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನು ಹೊರತುಪಡಿಸಿದರೆ, ರಾಜೇಶ್​ ಅವರು ನೀಡಿರುವ ಸಲಹೆ ಎಂದರೆ, ಯಾವುದೇ ಅನ್​ನೋನ್​ ನಂಬರ್​ನಿಂದ ಕಾಲ್​ ಬಂದರೆ ಅದನ್ನು ರಿಸೀವ್​ ಮಾಡಲೇ ಬೇಡಿ, ಮೆಸೆಂಜರ್​ಗಳು ಹಾಗೂ ಎಸ್​ಎಂಎಸ್​ನಲ್ಲಿ ಬರುವ ಲಿಂಕ್​ಗಳನ್ನು ಒತ್ತಬೇಡಿ, ನಿಮ್ಮ ಮಗು ಕಿಡ್​ನ್ಯಾಪ್​ ಆಗಿದೆ, ಇಷ್ಟು ಹಣ ಇಂಥಬ್ಯಾಂಕ್​  ಅಕೌಂಟ್​ಗೆ ಹಾಕಿ ಎಂದ ತಕ್ಷಣ ಗಡಿಬಿಡಿ ಬಿದ್ದು ಅದನ್ನು ನಿಜ ಎಂದು ನಂಬಲು ಹೋಗಬೇಡಿ,OTP ಶೇರ್​ ಮಾಡಬೇಡಿ, ಮ್ಯಾಟ್ರಿಮೋನಿ ಸೈಟ್​ಗಳಲ್ಲಿ ಯಾವುದೋ ಪ್ರೊಫೈಲ್​ ನೋಡಿ ಅದನ್ನು ನಿಜ ಎಂದು ನಂಬಿ ಸೈಬರ್​ ವಂಚನೆಗೆ ಬಲಿಯಾಗಬೇಡಿ... ಹೀಗೆ ಹಲವು ಎಚ್ಚರಿಕೆ ಕೊಟ್ಟಿದ್ದಾರೆ.  

ಜಮೀನು, ಮನೆ, ಸಂಸ್ಥೆ ನೋಂದಣಿ ಮಾಡಿಕೊಳ್ಳಬೇಕಾ? ಹೊಸ ರೂಲ್ಸ್​ ಬಂದಿದೆ ನೋಡಿ... ಡಿಟೇಲ್ಸ್​ ಇಲ್ಲಿದೆ...

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!