ಆರೋಪಿಯಿಂದ 20 ಕೆ.ಜಿ. ಗಾಂಜಾ, 1 ಬೈಕ್ ಹಾಗೂ 30 ಸಾವಿರ ನಗದು ಜಪ್ತಿ| ವಿಶಾಖಪಟ್ಟಣಂನಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿ|
ಬೆಂಗಳೂರು(ಅ.10): ಕೊರೋನಾ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಂಡ ನೌಕರನೊಬ್ಬ ಗಾಂಜಾ ದಂಧೆಗಿಳಿದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ.
ಹೆಗಡೆ ನಗರದ ಸಮೀಪದ ಅಗ್ರಹಾರ ಬಡಾವಣೆ ಅಮೀರ್ ಅಹಮ್ಮದ್(28) ಬಂಧಿತ. ಆರೋಪಿಯಿಂದ 20 ಕೆ.ಜಿ. ಗಾಂಜಾ, 1 ಬೈಕ್ ಹಾಗೂ .30 ಸಾವಿರ ನಗದು ಜಪ್ತಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಪೀಣ್ಯದ ಎರಡನೇ ಹಂತದ ಕೃತಿ ಇಂಜಿನಿಯರಿಂಗ್ ಕಾರ್ಖಾನೆ ಬಳಿ ದ್ವಿಚಕ್ರ ವಾಹನದಲ್ಲಿ ಅಮೀರ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ರಾಜಗೋಪಾಲ ನಗರ ಠಾಣೆ ಪೊಲೀಸರು ಹೇಳಿದ್ದಾರೆ.
ಸ್ಯಾಂಡಲ್‌ವುಡ್ ನಟರ 3 ಮಕ್ಕಳ ಡ್ರಗ್ಸ್ ನಂಟು: ಸಂಬರಗಿ ಹೊಸ ‘ಬಾಂಬ್’
ಅಮೀರ್, ಹೋಟೆಲ್‌ವೊಂದರಲ್ಲಿ ಸ್ವಾಗತಗಾರನಾಗಿ ಕೆಲಸ ಮಾಡುತ್ತಿದ್ದ. ಆದರೆ ಕೊರೋನಾ ಪರಿಣಾಮ ಹೋಟೆಲ್ ವಹಿವಾಟು ಸ್ಥಗಿತಗೊಂಡ ಪರಿಣಾಮ ಉದ್ಯೋಗವಿಲ್ಲದೆ ಗಾಂಜಾ ದಂಧೆಗಿಳಿದೆ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತನ್ನ ಸ್ನೇಹಿತ ಇರ್ಫಾನ್ ಮೂಲಕ ಗಾಂಜಾ ದಂಧೆಕೋರರು ಆತನಿಗೆ ಪರಿಚಯವಾಗಿದೆ. ಬಳಿಕ ವಿಶಾಖಪಟ್ಟಣಂನಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ. ಪೀಣ್ಯ ಎರಡನೇ ಹಂತದ ಬಳಿ ಮಾರಾಟ ಮಾಡುವಾಗ ಈತನಿಂದ ಒಂದು ಕೆ.ಜಿ ಗಾಂಜಾ ಸಿಕ್ಕಿತು. ಬಳಿಕ ಆರೋಪಿ ಮನೆ ಮೇಲೆ ದಾಳಿ ನಡೆಸಿದಾಗ 19 ಕೆ.ಜಿ.ಗಾಂಜಾ ಪತ್ತೆಯಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.