ಡ್ರಗ್ಗಿಣಿ ಗ್ಯಾಂಗ್‌ನ 150 ಜನಕ್ಕಾಗಿ ಬೇಟೆ, 10 ಸಾವಿರ ಕರೆ ಪರಿಶೀಲಿಸಿರುವ ಪೊಲೀಸ್!

By Suvarna NewsFirst Published Sep 10, 2020, 7:27 AM IST
Highlights

ಡ್ರಗ್ಗಿಣಿ ಗ್ಯಾಂಗ್‌ನ 150 ಜನಕ್ಕಾಗಿ ಬೇಟೆ!| 10 ಸಾವಿರ ಕರೆ ಪರಿಶೀಲಿಸಿರುವ ಪೊಲೀಸ್‌| ಜತೆಗೆ, ಪೆಡ್ಲರ್‌, ನಟಿಯರ ವಿವರ ಸಂಗ್ರಹ|  3 ವಿಭಾಗವಾಗಿ ಕೆಲಸ ಮಾಡಿದ್ದ ಡ್ರಗ್‌ ಜಾಲ| ಒಂದೊಂದು ತಂಡಕ್ಕೂ ಬೇರೆ ಬೇರೆ ಹೊಣೆ

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಸೆ.10): ಕರುನಾಡಿನಲ್ಲಿ ಬಣ್ಣದ ಲೋಕದ ತಾರೆಯರ ಪೇಜ್‌ ತ್ರಿ ಪಾರ್ಟಿಗಳನ್ನು ಆಯೋಜಿಸುವ ಕಿಂಗ್‌ಪಿನ್‌ಗಳು ಮಾದಕ ವಸ್ತುಗಳ ಜಾಲವನ್ನು ಹೇಗೆ ಬೆಳೆಸಿದ್ದಾರೆ ಎಂಬ ಒಂದು ವರ್ಷದ ಚರಿತ್ರೆಯ ವಿವರಗಳು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಯಲ್ಲಿ ಲಭ್ಯವಾಗಿವೆ. ಇದರ ಪ್ರಕಾರ ಸಂಘಟಿತ ತಂಡವು ಮೂರು ವಿಭಾಗಗಳಾಗಿ ಕಾರ್ಯನಿರ್ವಹಿಸಿದ್ದು, ಪ್ರತಿಯೊಂದು ವಿಭಾಗವೂ ತನ್ನದೇ ಆದ ನಿರ್ದಿಷ್ಟಕಾರ್ಯವನ್ನು ಮಾಡುತ್ತಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಈ ಜಾಲದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಸಕ್ರಿಯವಾಗಿ ತೊಡಗಿಕೊಂಡಿದ್ದರೂ ಸಹ ಇಬ್ಬರೂ ಯಾವುದೇ ಸಂದರ್ಭದಲ್ಲೂ ಪರಸ್ಪರ ಸಂವಹನ ನಡೆಸಿಲ್ಲ.

ಈ ಜಾಲದ ಕಾರ್ಯನಿರ್ವಹಣೆಯನ್ನು ಪತ್ತೆ ಮಾಡಲು ಪ್ರಕರಣದ ಆರೋಪಿಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಭಾಷಣೆ ನಡೆಸಿದ್ದ ಸುಮಾರು 10 ಸಾವಿರ ಮೊಬೈಲ್‌ ಕರೆಗಳನ್ನು ಸಿಸಿಬಿ ಪರಿಶೀಲಿಸಿದ್ದು, 150 ಮಂದಿಯ ಪಟ್ಟಿಸಿದ್ಧವಾಗಿದೆ ಎಂದು ತನ್ಮೂಲಕ ಇಡೀ ಪ್ರಕರಣದ ಕುಂಡಲಿ ಬಿಚ್ಚಿಕೊಂಡಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಈ ಜಾಲಕ್ಕೆ ದೆಹಲಿ ಮೂಲದ ಪೇಜ್‌ ತ್ರಿ ಪಾರ್ಟಿಗಳ ಆಯೋಜನೆಯ ಕಿಂಗ್‌ಪಿನ್‌ ಎನ್ನಲಾದ ವೀರೇನ್‌ ಖನ್ನಾ ಪ್ರಮುಖನಾಗಿದ್ದು, ಇನ್ನುಳಿದವರು ಆತನ ಸೂಚನೆ ಮೇರೆಗೆ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಗ್ರಾಹಕರನ್ನು ಸೆಳೆಯುವುದು, ಪಾರ್ಟಿ ಆಯೋಜಿಸುವುದು ಹಾಗೂ ಡ್ರಗ್ಸ್‌ ಪೂರೈಕೆ ಹೀಗೆ ಮೂರು ಹಂತದಲ್ಲಿ ಸದಸ್ಯರಿಗೆ ಕೆಲಸ ಹಂಚಿಕೆಯಾಗಿತ್ತು. ಆದರೆ ಈ ತಂಡದಲ್ಲಿದ್ದರೂ ಕೂಡಾ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಪ್ರತ್ಯೇಕವಾಗಿಯೇ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು ಹತ್ತು ವರ್ಷಗಳಿಂದ ವೀರೇನ್‌ ಖನ್ನಾ ಪಾರ್ಟಿಗಳ ಆಯೋಜನೆಯಲ್ಲಿ ತೊಡಗಿದ್ದಾನೆ. ಇದಕ್ಕಾಗಿ ‘ವೀರೇನ್‌ ಖನ್ನಾ ಪ್ರೊಡಕ್ಷನ್‌’ (ವಿಕೆಪಿ) ಹೆಸರಿನ ಇವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆಯನ್ನು ಆತ ನಡೆಸುತ್ತಿದ್ದ. ಅದೇ ರೀತಿ ಸಾರಿಗೆ ಇಲಾಖೆ ಉದ್ಯೋಗಿ ರವಿಶಂಕರ್‌ ಮತ್ತು ರಾಗಿಣಿ ದ್ವಿವೇದಿ, ರಾಹುಲ್‌ ಮತ್ತು ಸಂಜನಾ ನಡುವೆ ಸ್ನೇಹವು ಏಳೆಂಟು ವರ್ಷ ಹಳೆಯದ್ದಾಗಿದೆ. ದಶಕದಿಂದ ನಡೆದಿರುವ ಪಾರ್ಟಿಗಳ ಭಾವಚಿತ್ರಗಳು, ವಿಡಿಯೋಗಳು ಕೂಡಾ ತನಿಖೆಯಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಈ ದಂಧೆಯಲ್ಲಿ ರಾಗಿಣಿ ಸ್ನೇಹಿತ ಕ್ರಷರ್‌ ಮಾಲಿಕ ಕಮ್‌ ಚಿತ್ರ ನಿರ್ಮಾಪಕ ಶಿವಪ್ರಕಾಶ್‌, ಹಿರಿಯ ರಾಜಕಾರಣಿ ಜೀವರಾಜ್‌ ಆಳ್ವ ಪುತ್ರ ಆದಿತ್ಯ ಆಳ್ವ, ಕೇರಳ ಮೂಲದ ನಿಯಾಜ್‌ ಅವರು ಪಾರ್ಟಿಗಳಿಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ರಾಹುಲ್‌, ರವಿಶಂಕರ್‌, ಪ್ರತೀಕ್‌ ಶೆಟ್ಟಿಅವರು ಡ್ರಗ್ಸ್‌ ಪೂರೈಸಿದ್ದಾರೆ. ಆಫ್ರಿಕಾ ಮೂಲದ ಲೂಮ್‌ ಪೆಪ್ಪರ್‌ನಿಂದ ಡ್ರಗ್ಸ್‌ ಖರೀದಿಸಿದ್ದಾರೆ. ರಾಗಿಣಿ ಮತ್ತು ಸಂಜನಾ ಅವರು ಪಾರ್ಟಿಗಳಿಗೆ ಗ್ರಾಹಕರ ಸೆಳೆಯುವ ಜಾಲದಲ್ಲಿ ಬಳಕೆಯಾಗಿದ್ದಾರೆ. ಒಂದು ಪಾರ್ಟಿಗೆ ರಾಗಿಣಿ ಆಕರ್ಷಣೆಯಾಗಿದ್ದರೆ, ಮತ್ತೊಂದಕ್ಕೆ ಸಂಜನಾ ಬರುತ್ತಿದ್ದಳು. ಹೀಗೆ ಈ ಇಬ್ಬರು ನಟಿಯರು ಪ್ರತ್ಯೇಕವಾಗಿ ಪಾರ್ಟಿಗಳಿಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

10 ಸಾವಿರ ಕರೆಗಳು, 150 ಮಂದಿ ಲಿಸ್ಟ್‌:

ಇದುವರೆಗೆ ವೀರೇನ್‌ ಖನ್ನಾ, ರಾಗಿಣಿ, ಸಂಜನಾ, ರವಿಶಂಕರ್‌, ರಾಹುಲ್‌, ಲೂಮ್‌, ಹಾಗೂ ನಿಯಾಜ್‌ ಸೇರಿ ಏಳು ಆರೋಪಿ ಬಂಧಿತರಾಗಿದ್ದಾರೆ. ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಡ್ರಗ್ಸ್‌ ಜಾಲದಲ್ಲಿ ರವಿಶಂಕರ್‌ ಪತ್ತೆಯಾದ ಬಳಿಕ ಆತನ ಮೊಬೈಲ್‌ ಕರೆಗಳ ವಿವರ (ಸಿಡಿಆರ್‌) ಪಡೆಯಲಾಯಿತು. ಆಗ ಚಲನಚಿತ್ರ ರಂಗದ ತಾರೆಗಳ ಸುಳಿವು ಸಿಕ್ಕಿತು. ಆರೋಪಿಗಳಿಗೆ ಸಂಬಂಧಿಸಿದ ಸುಮಾರು ಒಂದು ವರ್ಷದ ಅವಧಿಯ 10 ಸಾವಿರ ಕರೆಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಈ ತಂಡದ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಸುಮಾರು 150 ಮಂದಿಯ ಪಟ್ಟಿಸಿದ್ಧಪಡಿಸಲಾಗಿದ್ದು, ಅವರ ಪಾತ್ರದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾದಕ ಜಾಲದ ಕಾರ್ಯಾಚರಣೆ ವಿಧಾನ ಹೇಗೆ?

1. ಪಾರ್ಟಿಗೆ ಜನರನ್ನು ಸೆಳೆಯುವುದು

ಪಾರ್ಟಿಗಳಲ್ಲಿ ಡ್ರಗ್ಸ್‌ ಸೇವನೆ ಹಾಗೂ ಗ್ರಾಹಕರ ಸೆಳೆಯಲು ನಟಿಯರ ಬಳಕೆ. ಈ ನಟಿಯರ ವಿರುದ್ಧ ಅಪರಾಧ ಸಂಚಿನಲ್ಲಿ ಭಾಗಿ ಮತ್ತು ಎನ್‌ಡಿಪಿಎಸ್‌ ಕಾಯ್ದೆ 27ರಡಿ ಡ್ರಗ್ಸ್‌ ಸೇವನೆಯ ಆರೋಪದಡಿ ಕೇಸು ದಾಖಲಿಸಲಾಗಿದೆ.

2. ಪಾರ್ಟಿ ಆಯೋಜಿಸುವುದು

ಪಾರ್ಟಿಗಳ ಆಯೋಜನೆಯಲ್ಲಿ ವೀರೇನ್‌ ಖನ್ನಾ, ಆದಿತ್ಯಾ ಆಳ್ವ, ನಿಯಾಜ್‌, ಶಿವಪ್ರಕಾಶ್‌, ವೈಭವ್‌ ಜೈನ್‌, ಪ್ರಶಾಂತ್‌ ರಾಜ್‌, ಅಶ್ವಿನ್‌, ಅಭಿಸ್ವಾಮಿ, ವಿನಯ್‌ ಪಾತ್ರವಹಿಸಿದ್ದಾರೆ. ಇವರ ವಿರುದ್ಧ ಅಪರಾಧ ಒಳ ಸಂಚು (ಐಪಿಸಿ 120 ಬಿ), ಎನ್‌ಡಿಪಿಎಸ್‌ ಕಾಯ್ದೆ 21, 27ರಡಿ ಡ್ರಗ್ಸ್‌ ಮಾರಾಟ, ಸಂಗ್ರಹಣೆ ಮತ್ತು ಬಳಕೆಯ ಆರೋಪ ಹೊರಿಸಲಾಗಿದೆ.

3. ಡ್ರಗ್ಸ್‌ ಪೂರೈಸುವುದು/ ಮಾರುವುದು

ಪಾರ್ಟಿಗಳು ಹಾಗೂ ನಟಿಯರಿಗೆ ರಾಹುಲ್‌, ರವಿಶಂಕರ್‌ ಹಾಗೂ ಪ್ರತೀಕ್‌ ಶೆಟ್ಟಿಡ್ರಗ್ಸ್‌ ಪೂರೈಕೆ ಮಾಡಿದ್ದಾರೆ. ಆಫ್ರಿಕಾ ಮೂಲದ ಲೂಮ್‌ ಪೆಪ್ಪರ್‌ನಿಂದ ಆರೋಪಿಗಳು ಡ್ರಗ್ಸ್‌ ಖರೀದಿಸಿದ್ದಾರೆ. ಇವರ ವಿರುದ್ಧ ಅಪರಾಧ ಒಳ ಸಂಚು (ಐಪಿಸಿ 120 ಬಿ), ಎನ್‌ಡಿಪಿಎಸ್‌ ಕಾಯ್ದೆ 21, 27ರಡಿ ಡ್ರಗ್ಸ್‌ ಮಾರಾಟ, ಸಂಗ್ರಹಣೆ ಮತ್ತು ಬಳಕೆಯ ಆರೋಪ ಹೊರಿಸಲಾಗಿದೆ.

click me!