ಗಾಂಜಾ ದಂಧೆ ಮೂಲಕ ಕೋಟಿ ಕೋಟಿ ಸಂಪಾದನೆ: ಡ್ರಗ್ಸ್‌ ಪೆಡ್ಲರ್‌ ಆಸ್ತಿ ಮುಟ್ಟುಗೋಲು

By Kannadaprabha News  |  First Published Sep 18, 2022, 9:34 AM IST

ಮೃತ್ಯುಂಜಯ ಅಲಿಯಾಸ್‌ ‘ಎಂಜೆ’ಗೆ ಸೇರಿದ 1.6 ಕೋಟಿ ರು.ಗಳ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ಸಿಸಿಬಿ ಪೊಲೀಸರು


ಬೆಂಗಳೂರು(ಸೆ.18):  ದಶಕಗಳಿಂದ ರಾಜಧಾನಿಯಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದ ಕುಖ್ಯಾತ ಪೆಡ್ಲರ್‌ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮೃತ್ಯುಂಜಯ ಅಲಿಯಾಸ್‌ ‘ಎಂಜೆ’ಗೆ ಸೇರಿದ 1.6 ಕೋಟಿ ರು.ಗಳ ಮೌಲ್ಯದ ಆಸ್ತಿಯನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಳೆದ ಜುಲೈನಲ್ಲಿ ಕೆ.ಆರ್‌.ಪುರ ಸಮೀಪ ಡ್ರಗ್ಸ್‌ ಮಾರಾಟಕ್ಕೆ ಯತ್ನಿಸಿದ್ದಾಗ ಮೃತ್ಯುಂಜಯನನ್ನು ಸೆರೆ ಹಿಡಿದು 80 ಲಕ್ಷ ರು. ಮೌಲ್ಯದ ಗಾಂಜಾ ಹಾಗೂ ಹಾಶೀಶ್‌ ಆಯಿಲ್‌ ಅನ್ನು ಮಾದ್ರಕ ದ್ರವ್ಯ ನಿಗ್ರಹ ದಳದ ಇನ್ಸ್‌ಪೆಕ್ಟರ್‌ ಬಿ.ಎಸ್‌.ಅಶೋಕ್‌ ಜಪ್ತಿ ಮಾಡಿದ್ದರು.

ಕೋಟಿ ಕೋಟಿ ಸಂಪಾದನೆ

Tap to resize

Latest Videos

ಕೃಷಿಕನಾಗಿದ್ದ ಮೃತ್ಯುಂಜಯ, ಆರಂಭದಲ್ಲಿ ತನ್ನೂರಿಗೆ ಆಂಧ್ರಪ್ರದೇಶದಿಂದ ಬರುತ್ತಿದ್ದ ಕೂಲಿ ಕಾರ್ಮಿಕರಿಂದ ಗಾಂಜಾ ವ್ಯಸನಿಯಾಗಿದ್ದ. ನಂತರ ಆ ಕೆಲಸಗಾರರ ಮೂಲಕ ಆಂಧ್ರಪ್ರದೇಶ ಗಾಂಜಾ ಪೆಡ್ಲರ್‌ಗಳಿಗೆ ಆತ ಪರಿಚಿತನಾದ. ಬಳಿಕ ಪೆಡ್ಲರುಗಳು ಮೃತ್ಯುಂಜಯನ ತೋಟದ ಮನೆಗೆ ಬಂದು ಗಾಂಜಾ ಪೂರೈಸುತ್ತಿದ್ದರು. ಈ ದಂಧೆಯಿಂದಲೇ ಕೋಟಿಗಟ್ಟಲೇ ಸಂಪಾದಿಸಿದ ಮೃತ್ಯುಂಜಯ, ಕೋಲಾರ ಜಿಲ್ಲೆ ಮಾಲೂರಿನ ಎಂಜೆ ಎಂದೇ ಕುಖ್ಯಾತಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Bengaluru Crime: ಪೊಲೀಸರ ಭರ್ಜರಿ ಬೇಟೆ: 5 ಕೋಟಿಯ ಗಾಂಜಾ ಜಪ್ತಿ

2007ರಿಂದ ಗಾಂಜಾ ದಂಧೆಯಲ್ಲಿ ಸಕ್ರಿಯವಾಗಿದ್ದ ಮೃತ್ಯುಂಜಯ ವಿರುದ್ಧ ಕೋಲಾರ ಜಿಲ್ಲೆ ಮಾಲೂರು ಹಾಗೂ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ಈ ಅಪರಾಧ ಚರಿತ್ರೆ ಹಿನ್ನಲೆಯಲ್ಲಿ ಜಂಟಿ ಆಯುಕ್ತ ರಮನ್‌ ಗುಪ್ತಾ ಅವರು, ಮೃತ್ಯುಂಜಯ ವಿರುದ್ಧ ಹೆಚ್ಚಿನ ತನಿಖೆಗೆ ಆರ್‌.ದೀಪಕ್‌ ನೇತೃತ್ವದಲ್ಲಿ ತಂಡ ರಚಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪಟ್ಟಣದ ವಾಣಿಜ್ಯ ನಿವೇಶನ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕಸಬಾ ಹೋಬಳಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಜೋಡಿಪುರ ಮತ್ತು ಕಂಬಿಪುರ ಗ್ರಾಮಗಳಲ್ಲಿ ಜಮೀನು ಸೇರಿ 4 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈ ಆಸ್ತಿ ಮೌಲ್ಯ ಸರ್ಕಾರದ ಮಾರ್ಗ ಸೂಚಿ ಸುಮಾರು ಅನ್ವಯ 41 ಲಕ್ಷ ರು. ಗಳಾಗಿದ್ದು, ಪ್ರಸುತ್ತ ಮಾರುಕಟ್ಟೆಮೌಲ್ಯಅಂದಾಜು 1.60 ಕೋಟಿ ಇದೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

ಎಂಜೆ ದಂಪತಿ 5 ಕೋಟಿ ವಹಿವಾಟು

ಮೃತ್ಯುಂಜಯ ಮತ್ತು ಆತನ ಪತ್ನಿ ಭಾಗ್ಯಮ್ಮ ಹೆಸರಿನಲ್ಲಿ ಆನ್‌ಲೈನ್‌ ಸೇರಿದಂತೆ ಇತರೆ ಮೂಲಗಳಿಂದ 5 ಕೋಟಿ ರು ಹಣ ವಹಿವಾಟು ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆದರೆ ಆದಾಯ ತೆರಿಗೆಯನ್ನು ಅವರು ಪಾವತಿಸಿಲ್ಲ. ಮಾಲೂರಿನ ವಿವಿಧ 6 ಬ್ಯಾಂಕ್‌ ಖಾತೆಯಲ್ಲಿದ್ದ 44,387 ರು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಂಟಿ ಆಯುಕ್ತರು ವಿವರಿಸಿದ್ದಾರೆ.

ವಾರಾಂತ್ಯದಲ್ಲಿ ಪಾರ್ಟಿಗಳಿಗೆ ಗಾಂಜಾ ಖರೀದಿಸಲು ಮಾಲೂರಿನಲ್ಲಿದ್ದ ಮೃತ್ಯುಂಜಯ ತೋಟದ ಮನೆಗೆ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಗ್ರಾಹಕರು ಸಾಲುಗಟ್ಟಿನಿಲ್ಲುತ್ತಿದ್ದರು. ಅತನಿಗೆ ಇಬ್ಬರು ಮಕ್ಕಳು ಎಂಜಿನಿಯರ್‌ ಪದವೀಧರರಾಗಿದ್ದು, ಮೃತ್ಯುಂಜಯನ ಆಳಿಯ ಪ್ರಾಧ್ಯಾಪಕನಾಗಿದ್ದಾನೆ.
 

click me!