ಜೀವರಾಜ್‌ ಆಳ್ವ ಪುತ್ರ ಆದಿತ್ಯ ಮೇಲೂ ಕೇಸ್‌!

By Suvarna NewsFirst Published Sep 6, 2020, 7:40 AM IST
Highlights

ಜೀವರಾಜ್‌ ಆಳ್ವ ಪುತ್ರ ಆದಿತ್ಯ ಮೇಲೂ ಕೇಸ್‌| ಎಫ್‌ಐಆರ್‌ ಆಗುತ್ತಿದ್ದಂತೆ ನಾಪತ್ತೆ, ಫೋನ್‌ ಸ್ವಿಚಾಫ್‌| ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಆದಿತ್ಯನ ಭಾವ| ಪೇಜ್‌ ತ್ರಿ ಪಾರ್ಟಿ ಆಯೋಜಕ ವೀರೇನ್‌ ಖನ್ನಾ ಸಹವಾಸದಿಂದ ಡ್ರಗ್ಸ್‌ ಜಾಲಕ್ಕೆ ಸಿಲುಕಿದ ಆದಿತ್ಯ| ತನ್ನ ಅಕ್ಕನ ಪತಿ, ಖ್ಯಾತ ನಟ ವಿವೇಕ್‌ ಒಬೆರಾಯ್‌ ಮೂಲಕ ಆದಿತ್ಯಗೆ ಚಲನಚಿತ್ರ ರಂಗದ ನಂಟು| ಈ ನಂಟು ಬಳಸಿ ಪಾರ್ಟಿಗಳಿಗೆ ನಟ-ನಟಿಯರನ್ನು ಆಹ್ವಾನಿಸಿ ಡ್ರಗ್ಸ್‌ ಗ್ರಾಹಕರನ್ನು ಸೆಳೆಯುತ್ತಿದ್ದ|  ಇಂತಹ ಪಾರ್ಟಿಗಳಿಗೆ ಪೆಡ್ಲರ್‌ಗಳಾದ ರವಿಶಂಕರ್‌, ರಾಹುಲ್‌ರಿಂದ ಭಾರೀ ಡ್ರಗ್ಸ್‌ ಸರಬರಾಜು

 

ಬೆಂಗಳೂರು

ಮಾದಕ ವಸ್ತು ಮಾರಾಟ ಜಾಲದಲ್ಲಿ ಸಿನಿಮಾ ನಟಿ, ಸರ್ಕಾರಿ ನೌಕರ ಹಾಗೂ ಉದ್ಯಮಿಗಳ ಬಳಿಕ ಈಗ ರಾಜಕಾರಣಿಗಳ ಪುತ್ರರಿಗೂ ಸಿಸಿಬಿ ತನಿಖೆ ಬಿಸಿ ತಟ್ಟಿದ್ದು, ಪ್ರಕರಣದಲ್ಲಿ ಆರೋಪಿಯಾಗಿರುವ ಜನತಾ ಪರಿವಾರದ ಹಿರಿಯ ನಾಯಕ ದಿ.ಜೀವರಾಜ್‌ ಆಳ್ವ ಮಗನಿಗೆ ಪೊಲೀಸರು ಬಲೆ ಬೀಸಿದ್ದಾರೆ.

"

ಈ ಪ್ರಕರಣದಲ್ಲಿ ರಾಗಿಣಿ ಹಾಗೂ ಪೇಜ್‌ ತ್ರಿ ಪಾರ್ಟಿ ಆಯೋಜಕ ವೀರೇನ್‌ ಸಿಸಿಬಿ ಖೆಡ್ಡಾಕ್ಕೆ ಬಿದ್ದ ಬೆನ್ನಲ್ಲೇ ಬಂಧನ ಭೀತಿಗೊಳಗಾಗಿರುವ ಜೀವರಾಜ್‌ ಆಳ್ವ ಪುತ್ರ ಆದಿತ್ಯ ಆಳ್ವ, ತನ್ನ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿ ಅಜ್ಞಾತವಾಗಿದ್ದಾರೆ. ಆತನ ಪತ್ತೆಗೆ ಬೆಂಗಳೂರು ಸೇರಿದಂತೆ ಇತರೆಡೆ ಸಿಸಿಬಿ ಹುಡುಕಾಟ ನಡೆಸಿದೆ.

ಜನತಾ ಪರಿವಾರದ ಹಿರಿಯ ರಾಜಕಾರಣಿ ಜೀವರಾಜ್‌ ಆಳ್ವ ಅವರು 80ರ ದಶಕದಲ್ಲಿ ಪ್ರಭಾವಿ ಮುಖಂಡರಾಗಿದ್ದರು. ರಾಜ್ಯ ಜನತಾ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ಪತ್ನಿ ನಂದಿನಿ ಆಳ್ವ ಖ್ಯಾತ ನೃತ್ಯಗಾತಿಯಾಗಿದ್ದು, ಬೆಂಗಳೂರು ಉತ್ಸವ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ ತೊಡಗಿದ್ದಾರೆ. ಈ ದಂಪತಿಗೆ ಆದಿತ್ಯ ಆಳ್ವ ಮತ್ತು ಪ್ರಿಯಾಂಕ ಆಳ್ವ ಮಕ್ಕಳು. ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರನ್ನು ಪ್ರಿಯಾಂಕ ಆಳ್ವ ಮದುವೆಯಾಗಿದ್ದು, ಮುಂಬೈನಲ್ಲಿ ನೆಲೆಸಿದ್ದಾರೆ.

ಪಾರ್ಟಿ ಆಯೋಜನೆಯಲ್ಲಿ ಆದಿತ್ಯ ಪಾತ್ರ:

ಪೇಜ್‌ ತ್ರಿ ಪಾರ್ಟಿ ಆಯೋಜಕ ಕಿಂಗ್‌ಪಿನ್‌ ವೀರೇನ್‌ ಸಹವಾಸದಿಂದ ಆದಿತ್ಯ ಆಳ್ವ ಡ್ರಗ್ಸ್‌ ಜಾಲದಲ್ಲಿ ಸಿಲುಕಿದ್ದಾರೆ. ಆದಿತ್ಯ, ರಿಯಲ್‌ ಎಸ್ಟೇಟ್‌ ಸೇರಿದಂತೆ ಇತರೆ ಉದ್ಯಮ ನಡೆಸುತ್ತಿದ್ದು, ವೀರೇನ್‌ ಜತೆ ಸೇರಿ ನಗರಗಳಲ್ಲಿ ಪಾರ್ಟಿಗಳನ್ನು ಸಂಘಟಿಸುತ್ತಿದ್ದರು. ತನ್ನ ಭಾವ ವಿವೇಕ್‌ ಒಬೆರಾಯ್‌ ಮೂಲಕ ಆತನಿಗೆ ಚಲನಚಿತ್ರ ರಂಗದ ನಂಟು ಬೆಳೆದಿತ್ತು. ಈ ಗೆಳೆತನದಲ್ಲೇ ಆದಿತ್ಯ ತಾನು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಗ್ರಾಹಕರನ್ನು ಸೆಳೆಯಲು ಸಿನಿಮಾ ನಟಿ-ನಟರನ್ನು ಆಹ್ವಾನಿಸುತ್ತಿದ್ದರ ಎಂದು ತಿಳಿದುಬಂದಿದೆ.

ವೀರೇನ್‌ ಹಾಗೂ ಆದಿತ್ಯ ಆಯೋಜಿಸುವ ಪಾರ್ಟಿಗಳಿಗೆ ರವಿಶಂಕರ್‌ ಮತ್ತು ರಾಹುಲ್‌ ಮೂಲಕ ಡ್ರಗ್ಸ್‌ ಪೂರೈಕೆಯಾಗುತ್ತಿತ್ತು. ಈ ಪಾರ್ಟಿಗಳಿಗೆ ಗ್ರಾಹಕರನ್ನು ಸೆಳೆಯಲು ರಾಗಿಣಿ ಹೋಗುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

click me!