ಡ್ರಗ್ಸ್‌ ದಂಧೆಯ ಕಿಂಗ್‌ ಪಿನ್‌ ಅರೆಸ್ಟ್‌ ವೇಳೆ ದಿಲ್ಲಿಯಲ್ಲಿ ಹೈಡ್ರಾಮಾ

By Kannadaprabha NewsFirst Published Sep 6, 2020, 7:35 AM IST
Highlights

ಸಿಸಿಬಿಗೆ ಸಂಕಷ್ಟ ತಂದಿದ್ದ ಡ್ರಗ್‌ ಕಿಂಗ್‌ಪಿನ್‌| ಬಂಧಿಸಲು ದೆಹಲಿಗೆ ಹೋಗಿದ್ದ ಸಿಸಿಬಿ ಇನ್‌ಸ್ಪೆಕ್ಟ​ರ್ಸ್ ವಿರುದ್ಧ ದೆಹಲಿ ಪೊಲೀಸ್‌ ಠಾಣೆಗೆ ಕಿಡ್ನಾಪ್‌ ಕೇಸ್‌ ಕೊಟ್ಟ ವೀರೇನ್‌, ಕುಟುಂಬಸ್ಥರಿಂದಲೂ ಹೈಡ್ರಾಮಾ| ಕಠಿಣ ಕ್ರಮದ ಎಚ್ಚರಿಕೆ ಬಳಿಕ ಬಂದ ವೀರೇನ್‌| ವಿಮಾನ ಏರುವಾಗಲೂ ವೀರೇನ್‌ ಗಲಾಟೆ| 
 

ಬೆಂಗಳೂರು(ಸೆ.06): ಮಾದಕ ವಸ್ತು ಮಾರಾಟ ಪ್ರಕರಣ ಸಂಬಂಧ ತನ್ನ ಬಂಧನಕ್ಕೆ ಬಂದಿದ್ದ ಸಿಸಿಬಿ ಪೊಲೀಸರ ವಿರುದ್ಧ ದೆಹಲಿಯಲ್ಲಿ ಅಪಹರಣ ದೂರು ದಾಖಲಿಸಿ ಪೇಜ್‌ ತ್ರಿ ಪಾರ್ಟಿಗಳ ಆಯೋಜನೆಯ ಕಿಂಗ್‌ಪಿನ್‌ ವೀರೇನ್‌ ಖನ್ನಾ ಹಾಗೂ ಆತನ ಪೋಷಕರು ಹೈಡ್ರಾಮಾ ಸೃಷ್ಟಿಸಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

"

ಬೆಂಗಳೂರಿನಲ್ಲಿ ಈವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆ ನಡೆಸುತ್ತಿರುವ ವೀರೇನ್‌, ನಗರದ ಪಬ್‌, ಕ್ಲಬ್‌, ರೆಸಾರ್ಟ್‌ ಹಾಗೂ ಪಂಚತಾರಾ ಹೋಟೆಲ್‌ಗಳಲ್ಲಿ ಅದ್ಧೂರಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈ ಪಾರ್ಟಿಗಳಿಗೆ ಡ್ರಗ್ಸ್‌ ಪೂರೈಕೆ ಬಗ್ಗೆ ಮಾಹಿತಿ ರಾಗಿಣಿ ಸ್ನೇಹಿತ ರವಿಶಂಕರ್‌ ಹಾಗೂ ರಾಹುಲ್‌ ವಿಚಾರಣೆ ವೇಳೆ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಶ್ರೀಧರ್‌ ಪೂಜಾರ್‌ ಹಾಗೂ ಲಕ್ಷ್ಮೇಕಾಂತಯ್ಯ ನೇತೃತ್ವದ ತಂಡವು, ದೆಹಲಿಯಲ್ಲಿ ಗುರುವಾರ ರಾತ್ರಿ ವೀರೇನ್‌ ಬಂಧನ ವೇಳೆ ಹೈಡ್ರಾಮಾ ನಡೆದಿದೆ ಎಂದು ತಿಳಿದುಬಂದಿದೆ.

ಮೊದಲು ಗಾಂಜಾ, ಬಳಿಕ ಎಂಡಿಎಂಎ: ಹೌದು, ನಾನು ಡ್ರಗ್ಗಿಣಿ: ನಟಿ ರಾಗಿಣಿ ತಪ್ಪೊಪ್ಪಿಗೆ!

ದೆಹಲಿಯ ಎಕಾಮಿಕ್ಸ್‌ ಶಾಲೆಯಲ್ಲಿ ವೀರೇನ್‌ ತಂದೆ ಪ್ರಾಧ್ಯಾಪಕರಾಗಿದ್ದು, ದೆಹಲಿಯಲ್ಲಿ ಗಣ್ಯಾತಿಗಣ್ಯರು ನೆಲೆಸಿರುವ ಗಾಲ್ಫ್‌ ಲಿಂಕ್‌ ಪ್ರದೇಶದಲ್ಲಿ ವಿರೇನ್‌ ಕುಟುಂಬ ನೆಲೆಸಿದೆ. ಮಾದಕ ವಸ್ತು ಜಾಲದ ಪ್ರಕರಣದ ವೀರೇನ್‌ನನ್ನು ಬಂಧಿಸಲು ಸಿಸಿಬಿ ಅಧಿಕಾರಿಗಳು, ಗುರುವಾರ ರಾತ್ರಿ ವೀರೇನ್‌ಮನೆಗೆ ತೆರಳಿದ್ದರು. ‘ತಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ವಾದಿಸಿದ ವೀರೇನ್‌, ಸಿಸಿಬಿ ಪೊಲೀಸರ ಮೇಲೆ ಕೂಗಾಡಿ ರಂಪಾಟ ಮಾಡಿದ್ದಾನೆ. ಆಗ ಆತನ ಪೋಷಕರು, ದೆಹಲಿಯ ತುಘಲಕ್‌ ರೋಡ್‌ ಠಾಣೆ ಪೊಲೀಸರಿಗೆ ಕರೆ ಮಾಡಿ ತಮ್ಮ ಮಗನನ್ನು ಪೊಲೀಸರೆಂದು ಹೇಳಿಕೊಂಡು ಯಾರೋ ಅಪಹರಿಸಲು ಬಂದಿದ್ದಾರೆ ಎಂದಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ದೆಹಲಿ ಪೊಲೀಸರಿಗೆ ವಿರೇನ್‌ ವಿರುದ್ಧ ದಾಖಲಾಗಿರುವ ಪ್ರಕಣದ ಬಗ್ಗೆ ಸಿಸಿಬಿ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಹೀಗೆ ಸುಮಾರು ಎರಡು ತಾಸಿಗೂ ಅಧಿಕ ಹೊತ್ತು ವೀರೇನ್‌ ಕುಟುಂಬದ ಡ್ರಾಮಾ ನಡೆದಿದೆ.

ಕೊನೆಗೆ ನೀನು ಬಾರದೆ ಹೋದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಈ ಖಡಕ್‌ ಎಚ್ಚರಿಕೆ ಬಗ್ಗಿದ ವೀರೇನ್‌, ಬೆಂಗಳೂರು ಹಾದಿ ತುಳಿದಿದ್ದಾನೆ. ಅಲ್ಲದೆ, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಬೆಂಗಳೂರಿಗೆ ವಿಮಾನವೇರುವಾಗ ವೀರೇನ್‌ ಗಲಾಟೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವಿಚಾರಣೆಗೆ ಅಸಹಕಾರ ಖನ್ನಾ:

ಮಾದಕ ವಸ್ತು ಜಾಲದ ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆಗೆ ವಿರೇನ್‌ ಖನ್ನಾ ಅಸಹಕಾರ ವ್ಯಕ್ತಪಡಿಸಿದ್ದಾನೆ. ಕೃತ್ಯದ ಬಗ್ಗೆ ಕೇಳುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದ ಆತ, ತಾನು ಪೊಲೀಸರಿಗೆ ಬಹಳ ಸಹಾಯ ಮಾಡಿದ್ದೇನೆ. ನಾನು ಯಾರೆಂಬುದು ತಿಳಿದುಕೊಳ್ಳಿ ಎಂದು ದುರಂಹಕಾರ ವರ್ತನೆ ತೋರಿಸಿದ್ದಾನೆ ಎನ್ನಲಾಗಿದೆ.

ಶನಿವಾರ ಪಾರ್ಟಿ ಆಯೋಜಿಸಿದ್ದ

ಮಾದಕ ವಸ್ತು ಜಾಲದ ಬಂಧನ ಬೆನ್ನೆಲ್ಲೇ ನಗರದ ಪಬ್‌ವೊಂದರಲ್ಲಿ ವೀರೇನ್‌ ಆಯೋಜಿಸಿದ್ದ ಪಾರ್ಟಿ ರದ್ದಾಗಿದೆ ಎಂದು ಮೂಲಗಳು ಹೇಳಿವೆ. ನಗರದ ಪ್ರತಿಷ್ಠಿತ ಪಬ್‌ನಲ್ಲಿ ವೀರೇನ್‌ ವಿಕೆಂಡ್‌ ಪಾರ್ಟಿ ಆಯೋಜಿಸಿದ್ದು, ಇದಕ್ಕೆ ಹಲವು ಜನರಿಗೆ ಆಹ್ವಾನ ಕೊಟ್ಟಿದ್ದ. ಈ ಪಾರ್ಟಿ ಟಿಕೆಟ್‌ಗಳು ಸಹ ಭರ್ಜರಿಯಾಗಿ ಬಿಕರಿಯಾಗಿದ್ದವು ಎಂದು ಗೊತ್ತಾಗಿದೆ.

ವಿರೇನ್‌ ಅಣ್ಣ ಸಹ ಪಾರ್ಟಿಶೂರ:

ವೀರೇನ್‌ ಖನ್ನಾ ಮಾತ್ರವಲ್ಲ ಆತ ಅಣ್ಣ ರಾಜ ಖನ್ನಾ ಕೂಡಾ ಅದ್ಧೂರಿ ಪಾರ್ಟಿಗಳ ಸಂಘಟಕನಾಗಿದ್ದಾನೆ. ವಿದೇಶದಲ್ಲಿ ನೆಲೆಸಿರುವ ವಿರೇನ್‌ ಸೋದರ, ಅಂತಾರಾಷ್ಟ್ರೀಯ ಮಟ್ಟದ ಈವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆ ನಡೆಸುತ್ತಿದ್ದಾನೆ. ವಿದೇಶದಲ್ಲಿನ ಆತನ ಪಾರ್ಟಿಗಳಿಗೆ ಕನ್ನಡದ ಚಲನಚಿತ್ರ ನಟರು, ಉದ್ಯಮಿಗಳು, ರಾಜಕಾರಣಿಗಳು ಮಕ್ಕಳು ಸಹ ಭಾಗವಹಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕೂಡಾ ಕೆಲ ದಿನಗಳು ತನ್ನ ಸೋದರನ ಜತೆ ರಾಜ ಸಹ ಪಾರ್ಟಿ ಆಯೋಜಿಸುತ್ತಿದ್ದ. ನಂತರ ಆತ ವಿದೇಶಕ್ಕೆ ತೆರಳಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!