ಡ್ರಗ್ಸ್‌ ಕೇಸ್‌: ಸಿಸಿಬಿಯಿಂದ ಪ್ರಮುಖ ರಾಜಕಾರಣಿ ಪುತ್ರನ ವಿಚಾರಣೆ

By Kannadaprabha NewsFirst Published Sep 29, 2020, 8:35 AM IST
Highlights

ರಾಜ್ಯದಲ್ಲಿ ಡ್ರಗ್ ಪ್ರಕರಣ ಸದ್ದು ಮಾಡುತ್ತಿದ್ದು,ಇದೀಗ ಪ್ರಮುಖ ರಾಜಕಾರಣಿಯೋರ್ವರ ಪುತ್ರನನ್ನು  ವಿಚಾರಣೆ ಮಾಡಲಾಗಿದೆ

 ಬೆಂಗಳೂರು (ಸೆ.29): ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಜಾಲ ಮಾರಾಟ ನಂಟು ಪ್ರಕರಣ ಸಂಬಂಧ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ರಾಜಕೀಯ ಕುಟುಂಬದ ಸದಸ್ಯನೊಬ್ಬನನ್ನು ಸಿಸಿಬಿ ಪೊಲೀಸರು ಸೋಮವಾರ ವಿಚಾರಣೆ ನಡೆಸಿದ್ದಾರೆ.

ಸದಾಶಿವನಗರದ ನಿವಾಸಿ ಸಂಗೀತ ದಂತಕುಡಿ ಎಂಬಾತನೇ ತನಿಖೆಗೊಳಗಾಗಿದ್ದು, ಪ್ರಕರಣದ ಕೆಲವು ಆರೋಪಿಗಳು ಹಾಗೂ ಅಮಾನತುಗೊಂಡಿರುವ ಎಸಿಪಿ ಎಂ.ಆರ್‌.ಮದುವಿ ಜತೆ ಸ್ನೇಹದ ಆರೋಪದ ಮೇರೆಗೆ ಸಂಗೀತನನ್ನು ವಿಚಾರಣೆ ನಡೆಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಜೈಲುವಾಸ ಮುಕ್ತಿ ಆಸೆಯಲ್ಲಿದ್ದ ನಟಿಮಣಿಯರಿಗೆ ಬಿಗ್ ಶಾಕ್! ..

ರಾಷ್ಟ್ರ ಮಟ್ಟದ ಹೆಸರು ಮಾಡಿದ್ದ ಹಿರಿಯ ರಾಜಕೀಯ ನಾಯಕ ಕುಟುಂಬದ ಸದಸ್ಯನಾಗಿರುವ ಸಂಗೀತ, ನಗರದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದಾನೆ. ಈ ಉದ್ಯಮದ ಸ್ನೇಹದ ಹಿನ್ನೆಲೆಯಲ್ಲಿ ಪಂಚತಾರಾ ಹೋಟೆಲ್‌ಗಳಲ್ಲಿ ನಡೆದಿದ್ದ ಕೆಲವು ಪೇಜ್‌ ತ್ರಿ ಪಾರ್ಟಿಗಳಲ್ಲಿ ಸಹ ಆತ ಕಾಣಿಸಿಕೊಂಡಿದ್ದಾನೆ. ಡ್ರಗ್ಸ್‌ ಪ್ರಕರಣದ ಕೆಲವು ಆರೋಪಿಗಳ ಮೊಬೈಲ್‌ನಲ್ಲಿ ಸಂಗೀತ ಆತ್ಮೀಯ ಮಾತುಕತೆ ಗೊತ್ತಾಯಿತು. ಅದೇ ರೀತಿ ಆರೋಪಿಗಳಿಗೆ ತನಿಖೆ ಮಾಹಿತಿ ನೀಡಿದ ಆರೋಪದ ಮೇರೆಗೆ ಅಮಾನುತಗೊಂಡಿರುವ ಸಿಸಿಬಿ ಎಸಿಪಿ ಮುದವಿ ಜತೆ ಸಂಗೀತ ನಿರಂತರ ಸಂಪರ್ಕದಲ್ಲಿದ್ದ. ಹೀಗಾಗಿ ಈ ಸ್ನೇಹದ ಬಗ್ಗೆ ವಿಚಾರಣೆಗೆ ಆತನ್ನು ಕರೆಸಲಾಗಿತ್ತು ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಹೇಳಿದ್ದಾರೆ.

ನನಗೆ ಸ್ನೇಹಿತರ ಮೂಲಕ ಮುದವಿ ಪರಿಚಯವಾಗಿದ್ದರು. ಆದರೆ ನಾನು ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಪಾಲ್ಗೊಂಡಿಲ್ಲ. ಗೆಳೆತನದ ಕಾರಣಕ್ಕೆ ಕೆಲವರೊಂದಿಗೆ ಮಾತನಾಡಿದ್ದೇನೆ ವಿನಃ ತಪ್ಪು ಮಾಡಿಲ್ಲ ಎಂದು ಸಂಗೀತ ಹೇಳಿರುವುದಾಗಿ ತಿಳಿದು ಬಂದಿದೆ.

click me!