Dr Soundarya Suicide: ಜಗಳ ಇರಲಿಲ್ಲ, ಆತ್ಮಹತ್ಯೆ ಏಕೆಂದು ಅರ್ಥವಾಗ್ತಿಲ್ಲ: ಪತಿ ಡಾ.ನೀರಜ್‌

By Kannadaprabha NewsFirst Published Jan 30, 2022, 7:58 AM IST
Highlights

*   ಬಿಎಸ್‌ವೈ ಮೊಮ್ಮಗಳ ಆತ್ಮಹತ್ಯೆ ಪ್ರಕರಣ: ಪತಿ ವಿಚಾರಣೆ
*   ವಸಂತನಗರ ಫ್ಲಾಟ್‌ ಮಹಜರು ನಡೆಸಿದ ಪೊಲೀಸರು
*   ಬಿಎಸ್‌ವೈ ಭೇಟಿಯಾದ ಆಯುಕ್ತ ಕಮಲ್‌ ಪಂತ್‌
 

ಬೆಂಗಳೂರು(ಜ.30):  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ(BS Yediyurappa) ಮೊಮ್ಮಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಮೃತಳ ಪತಿ ಸೇರಿದಂತೆ ಕುಟುಂಬ ಸದಸರನ್ನು ವಿಚಾರಣೆಗೊಳಪಡಿಸಿ ಹೈಗ್ರೌಂಡ್ಸ್‌ ಠಾಣೆ ಪೊಲೀಸರು(Police) ಶನಿವಾರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

‘ನಾವು ಅನ್ಯೋನ್ಯವಾಗಿಯೇ ಬಾಳ್ವೆ ನಡೆಸಿದ್ದೇವೆ. ನಮ್ಮ ನಡುವೆ ಯಾವುದೇ ರೀತಿ ಭಿನ್ನಾಭಿಪ್ರಾಯ ಅಥವಾ ಜಗಳ ಇರಲಿಲ್ಲ. ಪತ್ನಿ ಸೌಂದರ್ಯ(Dr Soundarya) ಯಾಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ದಳೆಂಬುದು ಅರ್ಥವಾಗುತ್ತಿಲ್ಲ. ಘಟನೆಯಿಂದ ನನಗೆ ಆಘಾತವಾಗಿದೆ’ ಎಂದು ವಿಚಾರಣೆ ವೇಳೆ ಮೃತಳ ಪತಿ ಡಾ.ನೀರಜ್‌(Dr Neeraj) ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Dr Soundarya Suicide: ಶೋಕ ಸಾಗರದಲ್ಲಿ BSY ಕುಟುಂಬ, ನೀರವ ಮೌನ

‘ಮಗು ಹುಟ್ಟಿದ ಬಳಿಕ ತವರು ಮನೆಯಲ್ಲೇ ಪತ್ನಿ ಇದ್ದಳು. ಆಗಾಗ್ಗೆ ವಸಂತ ನಗರದ ಫ್ಲ್ಯಾಟ್‌ಗೆ ಬಂದು ಹೋಗುತ್ತಿದ್ದಳು. ಗುರುವಾರ ರಾತ್ರಿ ಸಹ ಫ್ಲ್ಯಾಟ್‌ಗೆ ಬಂದಾಗ ಆಕೆ ಚೆನ್ನಾಗಿಯೇ ಇದ್ದಳು. ಪ್ರತಿ ದಿನ ಬೆಳಗ್ಗೆ ಸ್ವಲ್ಪ ತಡವಾಗಿ ಆಕೆ ಏಳುತ್ತಿದ್ದರಿಂದ ನಾನು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಎಂದಿನಂತೆ ಕೆಲಸಕ್ಕೆ ಆಸ್ಪತ್ರೆಗೆ ತೆರಳಿದೆ. ಕೆಲಸದಾಳುಗಳು ಫ್ಲ್ಯಾಟ್‌ಗೆ ಬಂದಾಗ ಪತ್ನಿ ಬಾಗಿಲು ತೆಗೆದಿಲ್ಲ. ಆಗ ನನಗೆ ಕೆಲಸದಾಳು ಕರೆ ಮಾಡಿದರು. ಭಯದಿಂದ ಫ್ಲ್ಯಾಟ್‌ಗೆ ಬಂದು ನೋಡಿದಾಗ ಆಕೆ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಳು’ ಎಂದು ನೀರಜ್‌ ಹೇಳಿರುವುದಾಗಿ ತಿಳಿದು ಬಂದಿದೆ.

ಈ ಹೇಳಿಕೆ ದಾಖಲಿಸಿಕೊಂಡು ಹೈಗ್ರೌಂಡ್ಸ್‌ ಠಾಣೆ ಪೊಲೀಸರು, ಬಳಿಕ ಮೃತ ಪತಿ ನೀರಜ್‌ ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲೇ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದ ವಸಂತ ನಗರದ ಲೆಗೆನ್ಸಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ನಂಬರ್‌ 101ರಲ್ಲಿ ಮಹಜರ್‌ ಪ್ರಕ್ರಿಯೆ ಕೂಡಾ ನಡೆಸಿದರು. ಆನಂತರ ಸೌಂದರ್ಯ ತಾಯಿ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಮೃತರ ಮನೆಕೆಲಸದಾಳು ಸೇರಿದಂತೆ ಕೆಲವರನ್ನು ಸಹ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದು ಅನಿರೀಕ್ಷಿತ: ಮಾವ ಮರಿಸ್ವಾಮಿ

‘ನಮಗೆ ಸೊಸೆ ಸೌಂದರ್ಯಳ ಅನಿರೀಕ್ಷಿತ ಸಾವು ನೋವು ತಂದಿದೆ. ನಾವು ಎರಡು ಕುಟುಂಬಗಳು(ಯಡಿಯೂರಪ್ಪ ಹಾಗೂ ನೀರಜ್‌) ಉತ್ತಮ ಬಾಂಧವ್ಯ ಹೊಂದಿದ್ದೇವೆ. ಎಲ್ಲರೊಟ್ಟಿಗೆ ಆಕೆಗೆ ಒಳ್ಳೆಯ ಒಡನಾಟ ಇತ್ತು. ಇನ್ನು ಅವರ ಮದುವೆ ಸಂಭ್ರಮವು ಯಡಿಯೂರಪ್ಪನವರ ಮನೆಯಲ್ಲೇ ನಡೆದಿತ್ತು. ಆಕೆ ಬಾಣಂತನವನ್ನು ಸಹ ಯಡಿಯೂರಪ್ಪನವರ ಮನೆಯಲ್ಲೇ ಮಾಡಲಾಗಿತ್ತು. ಬೌರಿಂಗ್‌ ಆಸ್ಪತ್ರೆಯಲ್ಲಿ(Bowring Hospital) ಸರ್ಜನ್‌ ಆಗಿದ್ದ ಸೌಂದರ್ಯ, ಮಗು ಹುಟ್ಟಿದ ಬಳಿಕ ಕೆಲಸದಿಂದ ಬಿಡುವು ಪಡೆದಿದ್ದಳು. ತಾನು ಬಡವರಿಗೆ ಸೇವೆ ಸಲ್ಲಿಸಬೇಕು ಎಂಬ ಅಭಿಲಾಷೆಯಿಂದ ಆಕೆ ಸರ್ಕಾರಿ ಆಸ್ಪತ್ರೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದಳು’ ಎಂದು ಮೃತಳ ಮಾವ ಹಾಗೂ ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ ಹೇಳಿದರು.

Dr Soundarya Suicide: ಕುಟುಂಬದಲ್ಲಿ ಕಲಹ  ಇರಲಿಲ್ಲ, ಮಗುವಿಗೆ ನಾಮಕರಣ ಮಾಡಿದ್ದರು

ಬಿಎಸ್‌ವೈ ಭೇಟಿಯಾದ ಆಯುಕ್ತ ಕಮಲ್‌ ಪಂತ್‌

ಮೊಮ್ಮಗಳ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ಭೇಟಿಯಾಗಿ ಮಾತುಕತೆ ನಡೆಸಿದರು. ನಗರದ ‘ಕಾವೇರಿ’ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿಯನ್ನು ಭೇಟಿಯಾದ ಆಯುಕ್ತರು, ಯಡಿಯೂರಪ್ಪನವರಿಗೆ ಸಾಂತ್ವನ ಹೇಳಿದರು. ಸುಮಾರು 20 ನಿಮಿಷಗಳ ಮಾತುಕತೆ ಬಳಿ ಆಯುಕ್ತರು ತೆರಳಿದರು.

ಮಕ್ಕಳ ಅಗಲಿಕೆಯಿಂದಾಗುವ ನೋವು ಅನುಭವಿಸಿದ್ದೇನೆ: ಬಿಎಸ್​ವೈ ಮೊಮ್ಮಗಳ ನಿಧನಕ್ಕೆ ಸಿದ್ದು ಸಂತಾಪ

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು (BS Yediyurappa Granddaughter) ಡಾ. ಸೌಂದರ್ಯ(Dr Soundarya) ನಿಧನಕ್ಕೆ ವಿಪಕ್ಷನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಟ್ವೀಟ್​ ಮೂಲಕ ಸಂತಾಪ ಸೂಚಿಸಿರುವ ಸಿದ್ದರಾಮಯ್ಯ(Siddaramaiah), ನನ್ನ ಧೀರ್ಘ ಕಾಲದ ರಾಜಕೀಯ ಸಂಗಾತಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳ ಸಾವಿನ ಸುದ್ದಿ ಕೇಳಿ ಮನಸಿಗೆ ಘಾಸಿಯಾಯಿತು. ಭುಜದೆತ್ತರಕ್ಕೆ ಬೆಳೆದ ಮಕ್ಕಳು, ಕುಟುಂಬ ಸದಸ್ಯರ ಅಗಲಿಕೆಯಿಂದಾಗುವ ನೋವು, ಸಂಕಟವನ್ನು ನಾನು ಕಂಡಿದ್ದೇನೆ, ಅನುಭವಿಸಿದ್ದೇನೆ. ಸೌಂದರ್ಯ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
 

click me!