
ಬೆಂಗಳೂರು(ಜ.15): ಮಾದಕ ವಸ್ತು ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವನನ್ನು ಡೋಪಿಂಗ್(ಉದ್ದೀಪನ ಮದ್ದು ಸೇವನಾ) ಪರೀಕ್ಷೆಗೆ ಒಳಪಡಿಸಲಾಗಿದೆ.
ಬುಧವಾರ ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಗೆ ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ನೇತೃತ್ವದ ತಂಡ ಆರೋಪಿಯನ್ನು ಕರೆದೊಯ್ಯಿತು. ಹಿರಿಯ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಆರೋಪಿಯಿಂದ ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಬೇಕಾಗಿರುವ ರಕ್ತದ ಮಾದರಿ, ತಲೆಕೂದಲು, ಉಗುರು ಹಾಗೂ ಮೂತ್ರ ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ, 4 ತಿಂಗಳ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈಗ ಡೋಪಿಂಗ್ ಪರೀಕ್ಷೆಗೊಳಪಡಿಸುತ್ತಿರುವುದರಿಂದ ಆರೋಪಿ ಮಾದಕ ವಸ್ತು ಸೇವಿಸಿರುವುದು ದೃಢಪಡುವುದು ಅನುಮಾನ ಎಂದು ಹೇಳಲಾಗಿದೆ.
ಡ್ರಗ್ಸ್ ಕೇಸ್ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯ ಆಳ್ವಾ ಬಂಧನ
ಆದರೆ, ತಲೆಮರೆಸಿಕೊಂಡಿದ್ದ ಸಂದರ್ಭದಲ್ಲೂ ಆದಿತ್ಯ ಆಳ್ವ ಡ್ರಗ್ಸ್ ಸೇವನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಜತೆಗೆ ಕೆಲ ಸಂದರ್ಭದಲ್ಲಿ ಆರೋಪಿಗಳ ದೇಹದಲ್ಲಿ ಕನಿಷ್ಠ ಆರು ತಿಂಗಳು ಕಾಲ ಡ್ರಗ್ಸ್‌ನ ಅಂಶ ಪತ್ತೆಯಾಗಿರುವ ಉದಾಹರಣೆಗಳಿವೆ. ಹೀಗಾಗಿ ಆರೋಪಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ಕು ತಿಂಗಳ ಕಾಲ ನಾಪತ್ತೆಯಾಗಿದ್ದ ಆದಿತ್ಯ ಆಳ್ವ ತಮಿಳುನಾಡಿನ ಚೆನ್ನೈ ಹೊರವಲಯದ ಓಲ್ಡ್ ಮಹಾಬಲಿಪುರಂ ರಸ್ತೆಯ ಕಣತ್ತೂರು ಬಳಿಯ ರೆಸಾರ್ಟ್ವೊಂದರಲ್ಲಿ 15 ದಿನಗಳಿಂದ ವಾಸವಾಗಿದ್ದ. ಇತ್ತೀಚೆಗೆ ಬೆಂಗಳೂರಿನಲ್ಲಿದ್ದ ತನ್ನ ಮನೆಯ ಬಾಣಸಿಗನಿಗೆ ಕರೆ ಮಾಡಿ ಚೆನ್ನೈನ ರೆಸಾರ್ಟ್ಗೆ ಬರುವಂತೆ ಹೇಳಿದ್ದ. ಬಾಣಸಿಗನ ಮೇಲೆ ನಿಗಾವಹಿಸಿದ್ದ ಪೊಲೀಸರು ಏಕಾಏಕಿ ಚೆನ್ನೈಗೆ ಹೊರಟ ಬಾಣಸಿಗನನ್ನು ಹಿಂಬಾಲಿಸಿದಾಗ ರೆಸಾರ್ಟ್ನಲ್ಲಿ ಆದಿತ್ಯ ಆಳ್ವ ಸಿಕ್ಕಿ ಬಿದ್ದಿದ್ದ.
ಎರಡು ತಿಂಗಳ ಹಿಂದೆ ಕೋರ್ಟ್ ಅನುಮತಿ ಪಡೆದು ನಟಿ ರಾಗಿಣಿ, ಸಂಜನಾ ಗಲ್ರಾನಿಯ ಕೂದಲು ಪಡೆದು ಡೋಪಿಂಗ್ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ, ಇದುವರೆಗೂ ವರದಿ ಬಂದಿಲ್ಲ. ಇಂತಹ ವರದಿಗೆ ಕನಿಷ್ಠ ಮೂರಿಂದ ನಾಲ್ಕು ತಿಂಗಳು ಬೇಕಾಗುತ್ತದೆ. ಅನಂತರವೇ ಪರೀಕ್ಷಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು. ಇದೀಗ ಆದಿತ್ಯ ಆಳ್ವನ ಮಾದರಿ ಪಡೆದುಕೊಳ್ಳಲಾಗಿದ್ದು, ವರದಿಗೆ ಕನಿಷ್ಠ ನಾಲ್ಕು ತಿಂಗಳು ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ