ಬೆಂಗಳೂರು: ಸಾಲು ತೀರಿಸಲು ರೋಗಿಗಳ ಚಿನ್ನ ಕದ್ದ ಡಾಕ್ಟರ್‌..!

By Kannadaprabha News  |  First Published Jan 20, 2023, 3:40 AM IST

ಆದಾಯ ಇಲ್ಲದೆ ನಿಗದಿತ ಸಮಯಕ್ಕೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಸಾಲ ವಾಪಾಸ್‌ ನೀಡುವಂತೆ ಮಹಿಳೆ ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಸಾಲ ತೀರಿಸಲು ಬೇರೆ ಮಾರ್ಗವಿಲ್ಲದೆ ಕಳ್ಳತನಕ್ಕೆ ಸಂಚು ರೂಪಿಸಿದ್ದಳು. 


ಬೆಂಗಳೂರು(ಜ.20): ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯ ಸೋಗಿನಲ್ಲಿ ಇಬ್ಬರು ಮಹಿಳಾ ರೋಗಿಗಳ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖತರ್ನಾಕ್‌ ಕಳ್ಳಿಯನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋರಮಂಗಲ ನಿವಾಸಿ ಲಕ್ಷ್ಮಿ(37) ಬಂಧಿತ ಆರೋಪಿ. ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಜ.14ರಂದು ಹಾಡಹಗಲೇ ವೈದ್ಯೆಯ ಸೋಗಿನಲ್ಲಿ ತಪಾಸಣೆ ನೆಪದಲ್ಲಿ ಒಳರೋಗಿಗಳಾದ ಕೋಮಲಾ(58) ಹಾಗೂ ಸರಸಾ(72) ಎಂಬುವವರ ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು. ಈ ಸಂಬಂಧ ಟಿ.ಸಿ.ಪಾಳ್ಯದ ನಿವಾಸಿ ಜೆ.ರಮೇಶ್‌ ಕುಮಾರ್‌ ಎಂಬುವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಪ್ರೀತಿ ನಿರಾಕರಿಸಿದ್ದಕ್ಕೆ ಕತ್ತು ಕೊಯ್ದ ರಾಕ್ಷಸ; ಕೊಯ್ದ ಕತ್ತನ್ನು ಹಿಡಿದು 200 ಮೀಟರ್ ಓಡಿದ್ದ ಯುವತಿ!

ಆರೋಪಿ ಲಕ್ಷ್ಮಿ ಈ ಹಿಂದೆ ನಗರದ ಹಲವು ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿ ಕೆಲಸ ಮಾಡಿದ್ದಾಳೆ. ಕೌಟುಂಬಿಕ ಕಲಹದಿಂದ ಪತಿಯಿಂದ ದೂರುವಾಗಿದ್ದು, ಕೆಲ ವರ್ಷಗಳಿಂದ ಕೋರಮಂಗಲದಲ್ಲಿ ಪೋಷಕರ ಜತೆಗೆ ನೆಲೆಸಿದ್ದಳು. ಕೆಲಸ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷ್ಮಿ ಮನೆ ಸಮೀಪ ತಳ್ಳುವ ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಬಳಿ .2 ಲಕ್ಷ ಸಾಲ ಪಡೆದಿದ್ದಳು. ಆದಾಯ ಇಲ್ಲದೆ ನಿಗದಿತ ಸಮಯಕ್ಕೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಸಾಲ ವಾಪಾಸ್‌ ನೀಡುವಂತೆ ಮಹಿಳೆ ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಸಾಲ ತೀರಿಸಲು ಬೇರೆ ಮಾರ್ಗವಿಲ್ಲದೆ ಕಳ್ಳತನಕ್ಕೆ ಸಂಚು ರೂಪಿಸಿದ್ದಳು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಕದ್ದ ಚಿನ್ನ ಸಾಲಕ್ಕೆ ವಜಾ!

ಅಶೋಕನಗರದ ಸೇಂಟ್‌ ಫಿಲೋಮಿನಾ ಆಸ್ಪತ್ರೆ ಬಗ್ಗೆ ಆರೋಪಿಗೆ ಚೆನ್ನಾಗಿ ಗೊತ್ತಿತ್ತು. ಪ್ರವೇಶ ದ್ವಾರ ಮತ್ತು ಹೊರಗೆ ಬರುವ ಎಲ್ಲ ಮಾರ್ಗಗಳ ಮಾಹಿತಿ ಇತ್ತು. ಹೀಗಾಗಿ ಜ.14ರ ಮಧ್ಯಾಹ್ನ 2.45ರಲ್ಲಿ ವೈದ್ಯರು ಧರಿಸುವ ಬಿಳಿ ಕೋಟ್‌ ಧರಿಸಿಕೊಂಡು ವೈದ್ಯೆಯ ಸೋಗಿನಲ್ಲಿ ಮಹಿಳಾ ರೋಗಿಗಳನ್ನು ತಪಾಸಣೆ ಮಾಡಬೇಕೆಂದು ಅವರ ಕಡೆಯವರನ್ನು ಹೊರಗೆ ಕಳುಹಿಸಿ ರೋಗಿ ಮೈಮೇಲಿನ ಎಲ್ಲ ಚಿನ್ನಾಭರಣ ಬಿಚ್ಚಿಸಿ ಗಮನ ಬೇರೆಡೆ ಸೆಳೆದು ಸುಮಾರು 45 ಗ್ರಾಂ ತೂಕದ ಅಸಲಿ ಚಿನ್ನಾಭರಣ ಎತ್ತಿಕೊಂಡು ನಕಲಿ ಚಿನ್ನದ ಸರವಿರಿಸಿ ಪರಾರಿಯಾಗಿದ್ದಳು. ಬಳಿಕ ಸಾಲ ನೀಡಿದ್ದ ಮಹಿಳೆಗೆ ಈ ಚಿನ್ನಾಭರಣವನ್ನು ನೀಡಿ, ಸಾಲಕ್ಕೆ ವಜಾಗೊಳಿಸಿಕೊಳ್ಳುವಂತೆ ಹೇಳಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲ್ಯಾಕ್‌ಮೇಲ್‌ ಡ್ರಾಮಾ!

ಆರೋಪಿ ಲಕ್ಷ್ಮಿ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ. ‘ಸ್ನೇಹಿತ ನನ್ನ ಖಾಸಗಿ ವಿಡಿಯೋ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾನೆ. ಕೇಳಿದಾಗಲೆಲ್ಲಾ ಹಣ ಕೊಟ್ಟರೂ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾನೆ. ಹಣ ಕೊಡದಿದ್ದರೆ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಬೆದರಿಸುತ್ತಿದ್ದಾನೆ’ ಎಂದು ಹೇಳಿಕೆ ನೀಡಿದ್ದಾಳೆ. ಈ ವೇಳೆ ಪೊಲೀಸರು, ಆತ ಯಾರು? ಆತನ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಕೊಡುವಂತೆ ಕೇಳಿದ್ದಾರೆ. ಕದ್ದ ಚಿನ್ನಾಭರಣವನ್ನು ಎಲ್ಲಿ ಅಡ ಇರಿಸಿದ್ದೀಯಾ? ಎಂದು ಸಾಲು ಸಾಲು ಪ್ರಶ್ನೆ ಕೇಳಿದಾಗ, ಆರೋಪಿ ಲಕ್ಷ್ಮಿ ನಿರುತ್ತರಳಾಗಿದ್ದಾಳೆ. ತರಕಾರಿ ವ್ಯಾಪಾರಿಗೆ ಕದ್ದ ಚಿನ್ನಾಭರಣ ನೀಡಿ, ಸಾಲಕ್ಕೆ ವಜಾ ಮಾಡಿಕೊಳ್ಳಲು ಹೇಳಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ.

click me!