
ಬೆಂಗಳೂರು (ಜೂ.16): ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ಕೋರ್ಟ್ ತೀರ್ಪು ನೀಡಿದ್ದು, ಆರೋಪಿ ಸಂತೋಷ್ ರಾವ್‌ರನ್ನು ಖುಲಾಸೆ ಮಾಡಿದೆ. ಅವರ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಸಾಕ್ಷ್ಯಾಧಾರಗಳಲ್ಲಿ ಕೊರತೆ ಇದೆ ಎನ್ನುವ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತ ಮಾಡಿರುವುದಾಗಿ ನ್ಯಾಯಮೂರ್ತಿ ಸಿಬಿ ಸಂತೋಷ್ ತಿಳಿಸಿದ್ದಾರೆ. ಧರ್ಮಸ್ಥಳದ ಸೌಜನ್ಯ ರೇಪ್ ಅಂಡ್ ಮರ್ಡರ್ ಇಂದು ಸಿಬಿಐ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ವಿದ್ಯಾರ್ಥಿನಿ ಆಗಿದ್ದ ಸೌಜನ್ಯ ಪ್ರಕರಣದಲ್ಲಿ 11 ವರ್ಷಗಳ ಬಳಿಕ ತೀರ್ಪು ನೀಡಿದೆ. ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್ 10 ರಂದುಸ ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈಗ 11 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ.
ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ನಿಗೂಢ ಕೊಲೆ ಪ್ರಕರಣದಲ್ಲಿ ಆರೋಪಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಂತಾಗಿದೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲು ಮಾಡಿತ್ತು. ಶಂಕಿತ ಆರೋಪಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ನಂತರದ ಭಾರಿ ಪ್ರತಿಭಟನೆ ನಡೆದು ಪ್ರಕರಣವನ್ನು ಸಿಬಿಐಗೆ ನೀಡಲಾಗಿತ್ತು. ಸಂತೋಷ್ ರಾವ್ ಆರು ಬಾರಿ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಸೌಜನ್ಯ ಕೊಲೆ ಪ್ರಕರಣ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ
'ಪ್ರಕರಣದಲ್ಲಿ ಸರಿಯಾದ ತನಿಖೆ ಮಾಡಲಾಗಿಲ್ಲ. ಆದ್ದರಿಂದ ಇಲ್ಲಿ ಸಾಕ್ಷ್ಯಾಧಾರದ ಕೊರತೆ ಎದ್ದು ಕಾಣುತ್ತಿದೆ. ಅತ್ಯಾಚಾರ, ರೇಪ್ ಆಗಿರುವ ವೇಳೆ ಆರೋಪಿ ಸ್ಥಳದಲ್ಲಿ ಇದ್ದಿರಲೇ ಇಲ್ಲ. ರೇಪ್ ಆಗಿರುವ ಬಗ್ಗೆ ವೈದ್ಯಕೀಯ ವರದಿ ಇಲ್ಲ ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ತೀರ್ಪು ನೀಡಿದ್ದಾರೆ. ಸರ್ಕಾರ ಮೊದಲಿಗೆ ಈ ಪ್ರಕಣವನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಜೊತೆ ಸ್ಥಳೀಯ ಪೊಲೀಸರು ಪ್ರಕರಣದ ವಿಚಾರಣೆ ಮಾಡಿದ್ದರು. ಘಟನೆ ನಡೆದ ಒಂದು ವರ್ಷದ ಬಳಿಕ ಸಿಬಿಐಗೆ ಇದನ್ನು ವಹಿಸಲಾಗಿತ್ತು.
ಸೌಜನ್ಯ ಅತ್ಯಾಚಾರ, ಕೊಲೆ ಆರೋಪ ಪ್ರಕರಣ : ಮೂವರಿಗೆ ಸಿಬಿಐ ಸಮನ್ಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ