* ಸಯ್ಯದ್ ನೌಷಾದ್, ಅಹಮದ್ ಬಾವಾಗೂ ಶಿಕ್ಷೆ
* ಉಗ್ರರಾದ ಯಾಸಿನ್, ರಿಯಾಜ್ ಭಟ್ಕಳ್‌ಗೆ ಆಪ್ತನಾಗಿದ್ದ ನೌಷಾದ್
* ಪಾಂಡೇಶ್ವರದ ಸುಭಾಷ್ ನಗರದ ವಾಸಿ, ಎಂಜಿನಿಯರಿಂಗ್ ವಿದ್ಯಾರ್ಥಿ
ಮಂಗಳೂರು(ಫೆ.20): 14 ವರ್ಷಗಳ ಹಿಂದೆ ಗುಜರಾತಿನ(Gujrat) ಅಹಮದಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ(Ahmedabad Serial Bomb Blast) ನಡೆಸಿ, 56 ಮಂದಿಯನ್ನು ಬಲಿ ಪಡೆದ ಆರೋಪದಡಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ 38 ಮಂದಿಯ ಪೈಕಿ ಇಬ್ಬರು ಕನ್ನಡಿಗರೂ ಇದ್ದಾರೆ.
ಮಂಗಳೂರಿನ(Mangaluru) ಸಯ್ಯದ್ ಮೊಹಮದ್ ನೌಷಾದ್ ಹಾಗೂ ಅಹಮದ್ ಬಾವಾ ಹೆಸರು ಕೂಡ ವಿಶೇಷ ಕೋರ್ಟ್‌ನಿಂದ ಮರಣದಂಡನೆಗೆ(Death Sentence) ಗುರಿಯಾದವರ ಹೆಸರಿನಲ್ಲಿದೆ. ಈ ಇಬ್ಬರೂ ಸದ್ಯ ಬೆಂಗಳೂರಿನ(Bengaluru) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
Ahmedabad Bomb Blast ಸರಣಿ ಬಾಂಬ್ ಸ್ಫೋಟದ ಹಿಂದೆ ಮೋದಿ ಹತ್ಯೆ ಸಂಚು, ತೀರ್ಪಿನಲ್ಲಿ ಪ್ರಸ್ತಾಪ!
ಎಂಜಿನಿಯರಿಂಗ್ ವಿದ್ಯಾರ್ಥಿ:
ಇಂಡಿಯನ್ ಮುಜಾಹಿದೀನ್(Indian Mujahideen) ಉಗ್ರ ಸಂಘಟನೆಯ ಮಾಸ್ಟರ್ ಮೈಂಡ್‌ಗಳಾದ ಯಾಸೀನ್(Yasin Bhatkal) ಭಟ್ಕಳ ಹಾಗೂ ರಿಯಾಜ್ ಭಟ್ಕಳ್‌ನ ನಿಕಟವರ್ತಿಯಾಗಿದ್ದ ನೌಷಾದ್ ಮಂಗಳೂರಿನ ಪಾಂಡೇಶ್ವರದ ಸುಭಾಷ್‌ನಗರದಲ್ಲಿ ವಾಸಿಸುತ್ತಿದ್ದ. ಪೊಲೀಸರು 2008ರ ಅಕ್ಟೋಬರ್ 3ರ ಮುಂಜಾನೆ ಆತನನ್ನು ಬಂಧಿಸಿದ್ದರು. ನೌಷಾದ್‌ನ ಸುಭಾಷ್‌ನಗರದ ಮನೆಯನ್ನು ಇಂಡಿಯನ್ ಮುಜಾಹಿದೀನ್ ಉಗ್ರರು ಸಮಾಲೋಚನೆ ನಡೆಸುವ ತಾಣವಾಗಿ ಮಾಡಿಕೊಂಡಿದ್ದರು. 2008ರಲ್ಲಿ ಆತನ ಬಂಧನ ವೇಳೆ ಜಿಹಾದಿ ಸಾಹಿತ್ಯ, ಕಚ್ಚಾ ಬಾಂಬ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ನೌಷಾದ್‌ಗೆ ಸರ್ಕಿಟ್ ತಯಾರಿಕೆ ಗೊತ್ತಿತ್ತು. ಅಮೋನಿಯಂ ನೈಟ್ರೇಟ್ ಬಳಸಿ ಸರ್ಕಿಟ್ ಜೋಡಿಸಿ ಅದನ್ನು ಸೂರತ್‌ಗೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲಿ ಇಕ್ಬಾಲ್ ಭಟ್ಕಳ್ ಎಂಬ ಉಗ್ರ ಡಿಟೋನೇಟರ್‌ಗಳನ್ನು ಜೋಡಿಸಿ ಸ್ಫೋಟಕ್ಕೆ ಬಳಸುತ್ತಿದ್ದ ಎನ್ನುವುದು ಹಿಂದೆ ವಿಚಾರಣೆಯಲ್ಲಿ ಬಯಲಾಗಿತ್ತು. 2008ರ ಜುಲೈ 28ರಂದು ಗುಜರಾತಿನ ಅಹ್ಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 56 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು.
38 ಅಪರಾಧಿಗಳಿಗೆ ಗಲ್ಲು, 11 ಮಂದಿಗೆ ಜೀವಾವಧಿ ಶಿಕ್ಷೆ!
ಅಹಮದಾಬಾದ್: ಜುಲೈ 2008 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದ ಸಂಬಂಧ ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಫೆ.18 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿತ್ತು. ನ್ಯಾಯಾಲಯವು 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ವಿಧಿಸಿದ್ದು, 11 ಅಪರಾಧಿಗಳು ತಮ್ಮ ಕೊನೆಯ ಉಸಿರು ಇರುವವರೆಗೂ ಸೆರೆಯಲ್ಲಿರಲು ಶಿಕ್ಷೆ, ಅಂದರೆ ಜೀವಾವಧಿ ಶಿಕ್ಷೆ ವಿಧಿಸಿದೆ. ಫೆಬ್ರವರಿ 8 ರಂದು ವಿಶೇಷ ನ್ಯಾಯಾಲಯವು ಅವರೆಲ್ಲರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. 28 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಈ ಪ್ರಕರಣದ ವಿಚಾರಣೆ 13 ವರ್ಷಗಳಿಂದ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
2008 Ahmedabad Bomb Blasts: 13 ವರ್ಷ ವಿಚಾರಣೆ, 1100 ಸಾಕ್ಷಿ, 49 ಆರೋಪಿಗಳಿಗೆ ಶಿಕ್ಷೆ!
21 ಸ್ಫೋಟಗಳಿಂದ ಅಹಮದಾಬಾದ್ ನಲುಗಿತ್ತು, 56 ಮಂದಿ ಸಾವು
26 ಜುಲೈ 2008 ರಂದು, ಅಹಮದಾಬಾದ್ ನಗರದಲ್ಲಿ 70 ನಿಮಿಷಗಳ ಅಂತರದಲ್ಲಿ ಒಟ್ಟು 21 ಬಾಂಬ್ ಸ್ಫೋಟಗಳು (Bomb Blasts) ಸಂಭವಿಸಿದವು. ಈ ಬಾಂಬ್ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು. ಸ್ಫೋಟದಲ್ಲಿ ಸುಮಾರು 200 ಜನರು ಗಾಯಗೊಂಡಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸಂಬಂಧಿಸಿದ ವ್ಯಕ್ತಿಗಳು ಈ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಿಮಿಯೊಂದಿಗೆ ಸಂಯೋಜಿತ ಸಂಘಟನೆಯಾಗಿದೆ ಎಂದು ಹೇಳಲಾಗುತ್ತದೆ.
ಗೋದ್ರಾಗೆ ಸೇಡು?
2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರದ ಗಲಭೆಗೆ ಪ್ರತೀಕಾರ ತೀರಿಸಿಕೊಳ್ಳಲು ಇಂಡಿಯನ್ ಮುಜಾಹಿದ್ದೀನ್ ಈ ಸ್ಫೋಟ ನಡೆಸಿದೆ ಎಂದು ಆರೋಪದಲ್ಲಿ ಹೇಳಲಾಗಿದೆ. ಅಹಮದಾಬಾದ್‌ನಲ್ಲಿ ಸ್ಫೋಟದ ಕೆಲವು ದಿನಗಳ ನಂತರ, ಪೊಲೀಸರು ಸೂರತ್‌ನ ವಿವಿಧ ಸ್ಥಳಗಳಿಂದ ಬಾಂಬ್‌ಗಳನ್ನು ವಶಪಡಿಸಿಕೊಂಡರು. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಹಮದಾಬಾದ್‌ನಲ್ಲಿ 20 ಮತ್ತು ಸೂರತ್‌ನಲ್ಲಿ 15 ಎಫ್‌ಐಆರ್‌ಗಳು ದಾಖಲಾಗಿವೆ.