ಲ್ಯಾಪ್‌ಟಾಪ್‌ ಡೀಲರ್‌ನ ಅಪಹರಿಸಿ ತಮಿಳುನಾಡಲ್ಲಿ ಬಚ್ಚಿಟ್ಟು 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ಅರೆಸ್ಟ್

By Kannadaprabha NewsFirst Published Sep 11, 2023, 6:09 AM IST
Highlights

ಲ್ಯಾಪ್‌ಟಾಪ್‌-ಕಂಪ್ಯೂಟರ್‌ ಡೀಲರೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ರೌಡಿ ಶೀಟರ್‌ ಸೇರಿ ಮೂವರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಸೆ.11) :  ಲ್ಯಾಪ್‌ಟಾಪ್‌-ಕಂಪ್ಯೂಟರ್‌ ಡೀಲರೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ರೌಡಿ ಶೀಟರ್‌ ಸೇರಿ ಮೂವರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಲ್ಲಸಂದ್ರದ ಹನುಮಗಿರಿನಗರದ ಕಿರಣ್‌ ಕುಮಾರ್‌(35), ಸಾರ್ವಭೌಮನಗರದ ಸೋಮಶೇಖರ್‌(36) ಹಾಗೂ ತ್ಯಾಗರಾಜನಗರದ ರೌಡಿ ಅರುಣ್‌ ಕುಮಾರ್‌ ಅಲಿಯಾಸ್‌ ಸುನಾಮಿ(32) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು, ಮರದ ದೊಣ್ಣೆ, ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಆರೋಪಿ ಅನಿಲ್‌ ಕುಮಾರ್‌ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

ಆರೋಪಿಗಳು ಇಟ್ಟುಮಡು ನಿವಾಸಿಯಾದ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಡೀಲರ್‌ ಸಂದೀಪ್‌ ಕುಮಾರ್‌(32) ಎಂಬಾತನನ್ನು ಆ.30ರ ಮುಂಜಾನೆ ಅಪಹರಿಸಿ ತಮಿಳುನಾಡಿಗೆ ಕರೆದೊಯ್ದು ಕೂಡಿ ಹಾಕಿ .50 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಸಂದೀಪ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಹಾಡುಹಗಲೇ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕು ಇರಿದು ದರೋಡೆ !

ಏನಿದು ಪ್ರಕರಣ?

ದೂರುದಾರ ಸಂದೀಪ್‌ ಕುಮಾರ್‌ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಮಾರಾಟದ ವ್ಯವಹಾರ ಮಾಡುತ್ತಿದ್ದಾರೆ. ಆ.30ರಂದು ಮುಂಜಾನೆ ಇವರ ಸ್ನೇಹಿತ ಅನಿಲ್‌ ಕುಮಾರ್‌, ಸಂದೀಪ್‌ ಮೊಬೈಲ್‌ಗೆ ಕರೆ ಮಾಡಿ ಮನೆಯಿಂದ ಹೊರಗೆ ಬರುವಂತೆ ಕರೆದಿದ್ದಾನೆ. ಅದರಂತೆ ಸಂದೀಪ್‌ ಮನೆಯಿಂದ ಹೊರಗೆ ಬರುತ್ತಿದ್ದಂತೆ ಬಂಧಿತ ಮೂವರು ಆರೋಪಿಗಳು ಟೀ ಕುಡಿಯೋಣ ಬಾ ಎಂದು ಬಲವಂತವಾಗಿ ಸಂದೀಪ್‌ನನ್ನು ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದಾರೆ. ಕಾರು ಸ್ವಲ್ಪ ದೂರು ಹೋಗುತ್ತಿದ್ದಂತೆ ಸಂದೀಪ್‌ನ ಮೊಬೈಲ್‌ ಕಿತ್ತುಕೊಂಡು ಸಿಮ್‌ ಬಿಚ್ಚಿ ಹೊರಕ್ಕೆ ಎಸೆದು .50 ಲಕ್ಷಕ್ಕೆ ಬೇಡಿಕೆ ಇರಿಸಿದ್ದಾರೆ. ಸಂದೀಪ್‌ ಹಣ ಇಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗಳಿಂದ ಹಲ್ಲೆ ಮಾಡಿದ್ದಾರೆ.

ಬಳಿಕ ಆರೋಪಿಗಳು ತಮಿಳುನಾಡಿನ ಡೆಂಕಣಿಕೋಟೆ ಕಡೆಗೆ ಕರೆದೊಯ್ದು ಫಾಮ್‌ರ್‍ ಹೌಸ್‌ನಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಅಷ್ಟೊಂದು ಹಣ ಇಲ್ಲ ಎಂದಾಗ ನೆಲಕ್ಕೆ ಕೆಡವಿ ಮರದ ದೊಣ್ಣೆಯಿಂದ ಸಂದೀಪ್‌ಗೆ ಹಲ್ಲೆ ಮಾಡಿದ್ದಾರೆ. ಹಣ ಕೊಡದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಸಂಜೆ 4.30ರ ಸುಮಾರಿಗೆ ಫಾಮ್‌ರ್‍ ಹೌಸ್‌ನಿಂದ ಬೇರೆ ಕಡೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆರೋಪಿ ಅರುಣ್‌ ಮತ್ತು ಕಿರಣ್‌ ಊಟಕ್ಕೆ ತೆರಳಿದ್ದರು.

ಮಾರ್ಗ ಮಧ್ಯೆಯೇ ಸಂದೀಪ್‌ ಎಸ್ಕೇಪ್‌

ಕಾರಿನ ಮುಂದಿನ ಆಸನದಲ್ಲಿದ್ದ ಸೋಮಶೇಖರ್‌ ಮತ್ತು ಅನಿಲ್‌ ನಿದ್ದೆಗೆ ಜಾರಿದ್ದಾರೆ. ಈ ಸಮಯ ಬಳಸಿಕೊಂಡು ಸಂದೀಪ್‌ ಕಾರಿನಿಂದ ಕೆಳಗೆ ಇಳಿದು ತಪ್ಪಿಸಿಕೊಂಡು ತಮಿಳುನಾಡಿನ ಅಚ್ಚಿತಾ ಪೊಲೀಸ್‌ ಠಾಣೆಗೆ ತೆರಳಿ ಘಟನೆ ಬಗ್ಗೆ ವಿವರಿಸಿದ್ದಾರೆ. ಬಳಿಕ ತಾಯಿಗೆ ಫೋನ್‌ ಮಾಡಿ ವಿಷಯ ತಿಳಿಸಿ ಬೆಂಗಳೂರಿಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಸಂಸದ ಪತ್ನಿಯನ್ನೂ ಬಿಡದ ಕಳ್ಳರು! ನೀರು ಕೇಳೋ ನೆಪದಲ್ಲಿ ಸರ ಕಿತ್ತು ಪರಾರಿ!

ಹಣಕಾಸು ವ್ಯವಹಾರ ಸಂಬಂಧ ಕಿಡ್ನ್ಯಾಪ್‌?

ದೂರುದಾರ ಸಂದೀಪ್‌ ಕುಮಾರ್‌ ಹಾಗೂ ಆರೋಪಿಗಳು ಪರಸ್ಪರ ಪರಿಚಿತರು. ಬಂಧಿತ ಮೂವರು ಆರೋಪಿಗಳ ಪೈಕಿ ಅರುಣ್‌ ರೌಡಿಶೀಟರ್‌ ಆಗಿದ್ದು, ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಸಂದೀಪ್‌ ಮತ್ತು ಆರೋಪಿ ಅನಿಲ್‌ ನಡುವೆ ಹಣಕಾಸು ವ್ಯವಹಾರ ಇತ್ತು ಎನ್ನಲಾಗಿದೆ. ಈ ವಿಚಾರವಾಗಿ ಆರೋಪಿಗಳು ಸಂದೀಪ್‌ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟುಮಾಹಿತಿ ಲಭ್ಯವಾಗಲಿದೆ.

click me!