Davanagere: 6 ಫೈಟರ್ ಕೋಳಿ ಕದ್ದೊಯ್ದ ಕಳ್ಳರು: ಕೈಚಳಕ ಸಿಸಿಟಿವಿಯಲ್ಲಿ ಸೆರೆ

By Kannadaprabha News  |  First Published Jan 21, 2022, 12:18 AM IST

ಮನೆ ಮುಂದಿನ ಕೋಳಿ ಗೂಡಿನಲ್ಲಿಟ್ಟಿದ್ದ ಕೋಳಿ ಕಾಳಗಕ್ಕೆ ಬಳಸುತ್ತಿದ್ದ ಕೋಳಿಗಳನ್ನು ರಾತ್ರೋರಾತ್ರಿ 2-3 ಜನರ ಕಳ್ಳರು ಕಳವು ಮಾಡಿದ ಘಟನೆ ನಗರದ ಹೊರ ವಲಯದ ಹೊಸ ಕುಂದುವಾಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.


ದಾವಣಗೆರೆ (ಜ.21): ಮನೆ ಮುಂದಿನ ಕೋಳಿ ಗೂಡಿನಲ್ಲಿಟ್ಟಿದ್ದ ಕೋಳಿ ಕಾಳಗಕ್ಕೆ ಬಳಸುತ್ತಿದ್ದ ಕೋಳಿಗಳನ್ನು (Fighter Cocks) ರಾತ್ರೋರಾತ್ರಿ 2-3 ಜನರ ಕಳ್ಳರು ಕಳವು (Theft) ಮಾಡಿದ ಘಟನೆ ನಗರದ ಹೊರ ವಲಯದ ಹೊಸ ಕುಂದುವಾಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ನಗರದ ಹೊರ ವಲಯದ ಹೊಸ ಕುಂದುವಾಡ ಗ್ರಾಮದಲ್ಲಿ ಬಸವರಾಜ ಎಂಬುವರು ತಮ್ಮ ಮನೆ ಬಾಗಿಲಿಗೆ ಹೊಂದಿಕೊಂಡಂತೆ ಇರುವ ಕೋಳಿಗಳ ಗೂಡಿನಲ್ಲಿ ತಾವು ಸಾಕಿದ್ದ ಕಾಳಗದ ಕೋಳಿಗಳನ್ನು ಬಿಟ್ಟಿದ್ದರು. 

ರಾತ್ರಿ ಮನೆ ಬಾಗಿಲು ಹಾಕಿರುವುದನ್ನು ಗಮನಿಸಿದ ಕೋಳಿ ಕಳ್ಳರು ಸದ್ದಿಲ್ಲದಂತೆ ಬಂದು, ಹೊಂಚು ಹಾಕಿ ಸುಮಾರು 10-12 ಸಾವಿರ ರು. ಮೌಲ್ಯದ 6 ಕೋಳಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಬಸವರಾಜ ಮನೆಯ ಬಾಗಿಲ ಚಿಲಕ ಹಾಕಿದ ಕೋಳಿ ಕಳ್ಳರು ಗೂಡಿನಲ್ಲಿದ್ದ ಕಾಳಗದ 6 ಕೋಳಿಗಳನ್ನು ಒಂದೊಂದಾಗಿ ಅವುಗಳ ಕಾಲು, ಬಾಯಿಯನ್ನು ಕೈನಿಂದ ಬಿಗಿಯಾಗಿ ಅದುಮಿ ಹಿಡಿದು, ಅಲ್ಲಿಂದ ಕದ್ದೊಯ್ಯುವ ದೃಶ್ಯವು ಬಸವರಾಜ ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ (CC Camera) ಸೆರೆಯಾಗಿದೆ.

Latest Videos

undefined

Areca Nut Theft: ₹1.20 ಲಕ್ಷ ಮೌಲ್ಯದ ಅಡಿಕೆ ಕದ್ದವನ ಬಂಧಿಸಿದ ಹೊಸನಗರ ಪೋಲಿಸ್!

ಹೊಸ ಕುಂದುವಾಡ ಗ್ರಾಮದ ಬಸವರಾಜ ಕೋಳಿ ಕಾಳಗಕ್ಕೆಂದೇ ಸಾಕುತ್ತಿದ್ದ ಕೋಳಿ ಮರಿ ಒಂದಕ್ಕೆ ಸುಮಾರು 2 ಸಾವಿರ ರೂ.ಗೂ ಅಧಿಕ ಬೆಲೆ ಇದೆ. ಕೋಳಿ ಕಾಳಗಕ್ಕೆ ತಯಾರಾಗುವಂತೆ ಬಸವರಾಜ ಬೆಳೆಸಿದ್ದ ಒಟ್ಟು 6 ಕೋಳಿಗಳನ್ನು 2-3 ಜನ ಕಳ್ಳರು ಕದ್ದು ಒಯ್ದಿದ್ದಾರೆ. ಕೋಳಿ ಕಳ್ಳರು ಹದಿ ಹರೆಯದ ಯುವಕರಾಗಿದ್ದು, ಮೊಣಕಾಲಿಗಿಂತ ಸ್ವಲ್ಪ ಕೆಳಗೆ, ಪಾದದಿಂದ ಸ್ವಲ್ಪ ಮೇಲ್ಭಾಗವರಗೆ ಇರುವ ಟೈಟ್‌ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಾರೆ. ಕೋಳಿ ಕಳ್ಳರ ಚಹರೆ, ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಕೋಳಿ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಿಟಕಿಯಲ್ಲಿ ಕೈ ಹಾಕಿ ಚಿನ್ನಾಭರಣ ಕದಿಯುತ್ತಿದ್ದ ಮೂವರ ಬಂಧನ: ಮನೆಯ ಕಿಟಕಿಯಲ್ಲಿ ಕೈ ಹಾಕಿ ಮಾಂಗಲ್ಯ ಸರ ಕದ್ದಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರದ ಆನಂದ (21), ಮೊಹಮ್ಮದ್‌ ಅಜರ್‌ (26) ಹಾಗೂ ಕಳವು ಮಾಲು ವಿಲೇವಾರಿ ಮಾಡುತ್ತಿದ್ದ ವಿದ್ಯಾರಣ್ಯಪುರದ ಕ್ಯಾಲಿ ಲಾಲ್‌ (25) ಬಂಧಿತರು.

ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ₹4.50 ಲಕ್ಷ ಮೌಲ್ಯದ 100 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಜಪ್ತಿ ಮಾಡಲಾಗಿದೆ.  ಇತ್ತೀಚೆಗೆ ಚಂದ್ರಾಲೇಔಟ್‌ ವ್ಯಾಪ್ತಿಯಲ್ಲಿ ಮುಂಜಾನೆ 5ರ ಸುಮಾರಿಗೆ ಮಹಿಳೆಯೊಬ್ಬರು ರೂಮ್‌ನ ಕಿಟಕಿ ಪಕ್ಕದ ಟೇಬಲ್‌ ಮೇಲೆ ಮಾಂಗಲ್ಯ ಸರ ಬಿಚ್ಚಿಟ್ಟು ವಾಯು ವಿಹಾರಕ್ಕೆ ತೆರಳಿದ್ದರು. ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ಮಾಂಗಲ್ಯ ಸರ ಕಳುವಾಗಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣದ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Bengaluru: 2 ಕೋಟಿ ಬೆಲೆಯ 171 ದುಬಾರಿ ವಾಚ್‌ ಕದ್ದಿದ್ದವ ಅರೆಸ್ಟ್‌

ಆರೋಪಿಗಳಾದ ಆನಂದ್‌ ಮತ್ತು ಮೊಹಮದ್‌ ಅಜರ್‌ ವೃತ್ತಿಪರ ಕಳ್ಳರಾಗಿದ್ದು, ಕಳೆದ ಹಲವು ವರ್ಷಗಳಿಂದ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ. ಕೆಲ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಬಳಿಕವೂ ಕಳವು ಕೃತ್ಯ ಮುಂದುವರೆಸಿದ್ದರು. ಮುಂಜಾನೆ ಹಾಗೂ ಸಂಜೆ ಹೊತ್ತಿನಲ್ಲಿ ಬಾಗಿಲು ಹಾಗೂ ಕಿಟಕಿ ತೆರೆದ ಮನೆಗಳನ್ನು ಗುರುತಿಸಿಕೊಂಡು ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

click me!