Bengaluru Crime: ತಾಯಿ ಜೀವ ಬಲಿ ಪಡೆದ ಮಗಳ ಪ್ರೇಮ

By Kannadaprabha NewsFirst Published Sep 26, 2022, 12:22 PM IST
Highlights
  • ಪುತ್ರಿಯ ಪ್ರೀತಿ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ
  • ಈ ವೇಳೆ ಚಾಕು ಇರಿದಿದ್ದ ಪತಿ ಪತ್ನಿ ಸಾವು
  • ಪರಿಚಿತ ವ್ಯಕ್ತಿಯೊಂದಿಗೆ ಪುತ್ರಿಯ ಪ್ರೀತಿ
  • ಇದನ್ನು ವಿರೋಧಿಸಿದ್ದ ಆಕೆಯ ತಂದೆ
  • ಕದ್ದುಮುಚ್ಚಿ ಪ್ರಿಯಕರನ ಭೇಟಿ
  • ಈ ವಿಚಾರಕ್ಕೆ ಆಕೆಯ ತಂದೆ-ತಾಯಿ ಜಗಳ

ಬೆಂಗಳೂರು (ಸೆ.26) : ಕೌಟುಂಬಿಕ ಕಲಹದ ವೇಳೆ ಪತಿಯಿಂದ ಚಾಕು ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಡಿ.ಜೆ.ಹಳ್ಳಿಯ ವಿನಾಯಕ ಥಿಯೇಟರ್‌ ರಸ್ತೆ ನಿವಾಸಿ ಶಾಹೀದಾ(42) ಮೃತರು. ಸೆ.22ರ ಸಂಜೆ ಆಕೆಯ ಪತಿ ಮುನಾವರ್‌ ಜಗಳ ತೆಗೆದು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದ. ಹೀಗಾಗಿ ಶಾಹೀದಾಳನ್ನು ಚಿಕಿತ್ಸೆಗೆ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಭಾನುವಾರ ಮುಂಜಾನೆ ಆಕೆ ಮೃತಪಟ್ಟಿದ್ದಾಳೆ. ಆರೋಪಿ ಮುನಾವರ್‌ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Chikkamagaluru: ರಾಡಿನಿಂದ ಹೊಡೆದು ತಾಯಿ ಹತ್ಯೆ: ಆರೋಪಿ ಬಂಧನ

ಕುದುರೆಗಾಡಿ ಓಡಿಸುವ ಮುನಾವರ್‌ ಮತ್ತು ಹೌಸ್‌ಕೀಪಿಂಗ್‌ ಕೆಲಸ ಮಾಡುವ ಶಾಹೀದಾ ದಂಪತಿಗೆ ನಾಲ್ವರು ಮಕ್ಕಳು. ಮೊದಲ ಮಗಳಿಗೆ ವಿವಾಹವಾಗಿದೆ. ಎರಡನೇ ಮಗಳು ಪರಿಚಿತ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಪ್ರೀತಿಯನ್ನು ವಿರೋಧಿಸಿದ್ದ ಮುನಾವರ್‌, ಆತನಿಂದ ದೂರುವಿರುವಂತೆ ಎಚ್ಚರಿಸಿದ್ದ. ಬೇರೊಬ್ಬ ಹುಡುಗನ ಜತೆ ಪುತ್ರಿಯ ಮದುವೆ ಮಾಡಲು ನಿರ್ಧರಿಸಿದ್ದ. ಈ ನಡುವೆ ಪುತ್ರಿ ಮನೆಯವರಿಗೆ ಗೊತ್ತಾಗದಂತೆ ಪ್ರಿಯಕರನ ಭೇಟಿಯಾಗಿ ಮಾತನಾಡಿದ್ದಳು. ಈ ವಿಚಾರ ಮುನಾವರ್‌ಗೆ ಗೊತ್ತಾಗಿ ಪತ್ನಿ ಶಾಹೀದಾ ಮತ್ತು ಪುತ್ರಿಯ ಜತೆ ಜಗಳ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಸೆ.22ರಂದು ಸಂಜೆ 4ರ ಸುಮಾರಿಗೆ ಮನೆಗೆ ಬಂದಿರುವ ಮುನಾವರ್‌, ಪುತ್ರಿಯ ಪ್ರೀತಿಯ ವಿಚಾರ ಪ್ರಸ್ತಾಪಿಸಿ ಪತ್ನಿ ಶಾಹೀದಾ ಜತೆಗೆ ಜಗಳ ತೆಗೆದಿದ್ದ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಚಾಕು ತೆಗೆದು ಶಾಹೀದಾ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಗಳ ವಾಟ್ಸಪ್ ಕಿತ್ತಾಟ,  ಅಕ್ಕ-ಪಕ್ಕದ ಮನೆ ಗಲಾಟೆಯಲ್ಲಿ ತಾಯಿ ಹತ್ಯೆ!

ಮಧ್ಯೆರಾತ್ರಿ ಒಂಟಿಯಾಗಿದ್ದ ಯುವತಿಯನ್ನು ರಕ್ಷಿಸಿದ ಆಟೋ ಚಾಲಕ

ಮಧ್ಯರಾತ್ರಿ ಒಂಟಿಯಾಗಿ ಓಡಾಡುತ್ತಿದ್ದ ಯುವತಿಗೆ ಧೈರ್ಯ ತುಂಬಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ ಆಟೋ ಚಾಲಕನ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೆ.ಆರ್‌.ಪುರಂನ ಆಟೋ ಚಾಲಕ ವಿಜಯ್‌ ಅವರ ಸಾಮಾಜಿಕ ಕಾಳಜಿಯ ಬಗ್ಗೆ ಪ್ರತಾಪ್‌ ರೆಡ್ಡಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಚಾಮರಾಜಪೇಟೆಯಿಂದ ಯುವತಿಯೊಬ್ಬಳು ಶನಿವಾರ ಸಂಜೆ ಕಾಣೆಯಾಗಿದ್ದು, ಮಧ್ಯರಾತ್ರಿ ಕೆ.ಆರ್‌.ಪುರಂನ ಟಿನ್‌ ಫ್ಯಾಕ್ಟರಿ ಬಳಿ ಒಂಟಿಯಾಗಿ ಸುತ್ತಾಡುತ್ತಿದ್ದಳು. ಇದನ್ನು ಗಮನಿಸಿರುವ ಆಟೋ ಚಾಲಕ ವಿಜಯ್‌, ಯುವತಿ ಬಳಿ ತೆರಳಿ ಸಹೋದರನಂತೆ ಧೈರ್ಯ ತುಂಬಿ ಆಕೆಯ ಪೋಷಕರನ್ನು ಸಂಪರ್ಕಿಸಿ ಸುರಕ್ಷಿತವಾಗಿ ಆಕೆಯನ್ನು ಒಪ್ಪಿಸಿದಾರೆ. ವಿಜಯ್‌ ಅವರ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಆಯುಕ್ತ, ವಿಜಯ್‌ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ್ದಾರೆ. ಟ್ವಿಟರ್‌ನಲ್ಲಿ ನೆಟ್ಟಿಗರು ವಿಜಯ್‌ ಕಾರ್ಯಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.

click me!